ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಆರ್ಭಟ – ಇಂಧನದ ಬೆಲೆ ಏರಿಕೆಯಾಗುವ ಆತಂಕ
ಇಡೀ ಜಗತ್ತಿಗೆ ಸಂಪರ್ಕ ಕೊಂಡಿಯಂತಿರುವ ಕೆಂಪು ಸಮುದ್ರವೇ ಈಗ ಡೇಂಜರ್ ಝೋನ್ನಲ್ಲಿದೆ. ಹೌತಿ ಉಗ್ರರು ನಡೆಸ್ತಿರುವ ಆರ್ಭಟ ವಿಶ್ವದ ಹಲವು ದೇಶಗಳಿಗೆ ಸಂಕಷ್ಟ ತಂದೊಡ್ಡಿದೆ. ತೈಲೋತ್ಪನ್ನಗಳ ಸರಬರಾಜಿಗೆ ಬಹುದೊಡ್ಡ ಹೊಡೆತ ಬಿದ್ದಿದ್ದು, ಇಂಧನದ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ. ಯಾಕಂದ್ರೆ ಪಶ್ಚಿಮ ಮತ್ತು ಪೂರ್ವದ ದೇಶಗಳನ್ನು ಬೆಸೆಯುವ ಸಂಪರ್ಕ ಕೊಂಡಿಗೇ ಭಯೋತ್ಪಾದಕರು ಕನ್ನ ಹಾಕಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಹಮಾಸ್ ಪರ ನಿಂತಿರುವ ಹೌತಿಗಳು ಸರಕು ಸಾಗಣೆ ಜಾಲವನ್ನೇ ಲಾಕ್ ಮಾಡಿದ್ದಾರೆ. ಕಳೆದ ನಾಲ್ಕು ವಾರಗಳಲ್ಲಿ ಯೆಮೆನ್‌ನ ಹೌತಿ ಉಗ್ರಗಾಮಿಗಳು 12 ಬಾರಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಕೆಂಪು ಸಮುದ್ರಕ್ಕೆ ಅಷ್ಟೊಂದು ಮಹತ್ವ ಏಕೆ? ಹೌತಿ ಉಗ್ರರು ಕೆಂಪು ಸಮುದ್ರದಲ್ಲಿ ಆರ್ಭಟ ಮಾಡ್ತಿರೋದು ಏಕೆ? ಉಗ್ರರ ನಿಗ್ರಹಕ್ಕೆ ಏನೆಲ್ಲಾ ಕಾರ್ಯತಂತ್ರ ರೂಪಿಸಲಾಗ್ತಿದೆ? ಭಾರತದ ಮೇಲೆ ಏನೆಲ್ಲಾ ಎಫೆಕ್ಟ್ ಆಗ್ತಿದೆ..? ಎಂಬ ಬಗ್ಗೆ ವಿವರಣೆ ಇಲ್ಲಿದೆ.
ಇದನ್ನೂ ಓದಿ:ಅರಬ್ಬಿ ಸಮುದ್ರದಲ್ಲಿ ಮಾಲ್ಟಾ ನೌಕೆ ಹೈಜಾಕ್ – ನೆರವಿಗೆ ಧಾವಿಸಿದ ಭಾರತೀಯ ನೌಕಾಪಡೆಯ ಯುದ್ಧನೌಕೆ
ಜಗತ್ತಿನ ಪೂರ್ವ ಮತ್ತು ಪಶ್ಚಿಮ ದೇಶಗಳ ಪಾಲಿಗೆ ಕೆಂಪು ಸಮುದ್ರ ನಿಜಕ್ಕೂ ಒಂದು ರೀತಿಯ ವರ. ಅಮೆರಿಕ ಖಂಡದಿಂದ ಪಶ್ಚಿಮ ದೇಶಗಳ ಕಡೆಗೆ ಬರುವ ಹಡಗುಗಳು ಗಿಬ್ರಾಲ್ಟರ್ ಜಲಸಂಧಿ ಮೂಲಕ ಮೆಡಿಟರೇನಿಯನ್ ಸಮುದ್ರಕ್ಕೆ ಬರುತ್ತವೆ. ಅಲ್ಲಿಂದ ಸುಜೆಯ್ ಕಾಲುವೆ ಮೂಲಕ ಕೆಂಪು ಸಮುದ್ರ ಪ್ರವೇಶ ಮಾಡುತ್ತದೆ. ಕೆಂಪು ಸಮುದ್ರದಿಂದ ಅರಬ್ಬಿ ಸಮುದ್ರ ಮಾರ್ಗವಾಗಿ ಹಿಂದೂ ಮಹಾ ಸಾಗರದ ಮೂಲಕ ಪೂರ್ವ ಭಾಗದ ದೇಶಗಳನ್ನು ತಲುಪುತ್ತವೆ. ಯುರೋಪ್ ರಾಷ್ಟ್ರಗಳ ಹಡಗುಗಳೂ ಕೂಡಾ ಮೆಡಿಟರೇನಿಯನ್ ಸಮುದ್ರದಿಂದ ಸುಜೆಯ್ ಕಾಲುವೆ ದಾಟಿದ ಕೂಡಲೇ ಕೆಂಪು ಸಮುದ್ರಕ್ಕೇ ಬರಬೇಕು. ಕೆಂಪು ಸಮುದ್ರ ದಾಟಿದ ಬಳಿಕ ಭಾರತ ಸೇರಿದಂತೆ ಪೂರ್ವದ ದೇಶಗಳ ಸಂಪರ್ಕ ಸಾಧ್ಯ. ಒಂದು ವೇಳೆ ಕೆಂಪು ಸಮುದ್ರ ಹಾಗೂ ಸುಯೆಜ್ ಕಾಲುವೆ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ತೆರಳುತ್ತೇವೆ ಅಂದ್ರೆ ಅದು ಬಹುದೊಡ್ಡ ರಿಸ್ಕ್. ಯಾಕಂದ್ರೆ ವಾರಗಟ್ಟಲೆ ಇಡೀ ಆಫ್ರಿಕಾ ಖಂಡವನ್ನೇ ಸುತ್ತಾಕಿಕೊಂಡು ಪಶ್ಚಿಮದ ರಾಷ್ಟ್ರಗಳನ್ನು ತಲುಪಬೇಕಾಗುತ್ತದೆ. ನಮಗೆ ಜಲ ಮಾರ್ಗವೇ ಬೇಡ ಭೂಮಾರ್ಗವಾಗಿ ಹೋಗ್ತೀವಿ ಅಂದ್ರೆ ಅದು ಇದಕ್ಕಿಂತ ದೊಡ್ಡ ಸಮಸ್ಯೆ. ವಿಪರೀತ ಹಣ ಹಾಗೂ ಸಮಯ ಬೇಕಾಗುತ್ತೆ. ಇದೇ ಕಾರಣಕ್ಕೆ ಸುಯೆಜ್ ಕಾಲುವೆ ಹಾಗೂ ಕೆಂಪು ಸಮುದ್ರದ ಮಾರ್ಗವು ವಿಶ್ವದ ಪೂರ್ವ ಹಾಗೂ ಪಶ್ಚಿಮ ರಾಷ್ಟ್ರಗಳ ಪಾಲಿಗೆ ಬಹುದೊಡ್ಡ ಕಾಣಿಕೆಯಾಗಿದೆ.
ಕೆಂಪು ಸಮುದ್ರ ಹಾಗೂ ಸುಯೆಜ್ ಕಾಲುವೆ ಇಷ್ಟೊಂದು ಇಂಪಾರ್ಟೆಂಟ್ ಅನ್ನೋ ಕಾರಣಕ್ಕೇ ಹೌತಿಗಳು ಇಲ್ಲಿ ಬಾಲ ಬಿಚ್ಚುತ್ತಿದ್ದಾರೆ. ಇಸ್ರೇಲ್ ಮೇಲಿನ ಸಿಟ್ಟಿಗೆ ಇಡೀ ಜಗತ್ತಿಗೇ ತಲೆಬಿಸಿ ತಂದೊಡ್ಡುತ್ತಿದ್ದಾರೆ. ಹೌತಿ ಬಂಡುಕೋರರು ಕ್ಷಿಪಣಿ ಹಾಗೂ ಡ್ರೋನ್ ಮೂಲಕ ಹಡಗುಗಳ ಮೇಲೆ ದಾಳಿ ಮಾಡಿ ಅವುಗಳನ್ನ ಹೈಜಾಕ್ ಮಾಡ್ತಿದ್ದಾರೆ. ಹೌತಿಗಳ ಈ ಆಟಾಟೋಪಕ್ಕೆ ಬ್ರೇಕ್ ಹಾಕಲು ಅಮೆರಿಕ ಸಾರಥ್ಯದಲ್ಲಿ ಆಪರೇಷನ್ ಪ್ರಾಸ್ಪರಿಟಿ ಗಾರ್ಡಿಯನ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಇತರೆ ರಾಷ್ಟ್ರಗಳು ಅಮೆರಿಕಕ್ಕೆ ಬೆಂಬಲ ನೀಡುತ್ತಿಲ್ಲ. ದಿನದಿಂದ ದಿನಕ್ಕೆ ಹೌತಿಗಳ ಉಪಟಳ ಹೆಚ್ಚಾಗ್ತಿದ್ದು ಭಾರತಕ್ಕೂ ಬಹುದೊಡ್ಡ ಹೊಡೆತ ಬೀಳ್ತಿದೆ.
ಸೌದಿ ಅರೇಬಿಯಾ ದೇಶದಿಂದ ಬರುವ ತೈಲೋತ್ಪನ್ನ ತುಂಬಿದ ಹಡಗುಗಳು ಕೆಂಪು ಸಮುದ್ರ ಮಾರ್ಗವಾಗಿ ಅರಬ್ಬಿ ಸಮುದ್ರಕ್ಕೆ ಬಂದು ಭಾರತ ಪ್ರವೇಶ ಮಾಡುತ್ತವೆ. ಹಾಗೇ ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಿಂದ ಬರುವ ಹಡಗುಗಳೂ ಭಾರತಕ್ಕೆ ಬರಬೇಕು ಅಂದ್ರೆ ಕೆಂಪು ಸಮುದ್ರವೇ ಬೇಕು. ಇಂಥಾ ಆಯಕಟ್ಟಿನ ಸ್ಥಳದಲ್ಲೇ ಯೆಮನ್ ದೇಶದ ಹೌತಿ ಉಗ್ರರು ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸುತ್ತಿದ್ದಾರೆ. ಹೀಗಾಗಿ, ಸಪ್ಲೈ ಚೈನ್ ಎಂದೇ ಹೇಳಲಾಗುವ ಸರಕು ಸಾಮಗ್ರಿ ಸಾಗಣೆ ಜಾಲದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಅಡ್ಡಿ ಆತಂಕಗಳು ಹೆಚ್ಚಾದಷ್ಟೂ ಭಾರತಕ್ಕೆ ಪೆಟ್ರೋಲಿಯಂ ಸೇರಿದಂತೆ ಅಗತ್ಯ ವಸ್ತುಗಳ ಆಮದು ಕಡಿಮೆ ಆಗುತ್ತದೆ. ಹೀಗಾಗಿ, ದೇಶದಲ್ಲಿ ಹಲವು ವಸ್ತುಗಳ ಬೆಲೆ ಏರಿಕೆ ಆಗುವ ಆತಂಕ ಎದುರಾಗಿದೆ.
ಹೌತಿ ಬಂಡುಕೋರರು ಇಷ್ಟೆಲ್ಲಾ ಹಾರಾಡುತ್ತಿದ್ರೂ ಜಗತ್ತಿನ ಬಲಿಷ್ಠ ರಾಷ್ಟ್ರಗಳಿಗೆ ಕಡಿವಾಣ ಹಾಕೋಕೆ ಯಾಕೆ ಆಗ್ತಿಲ್ಲ ಅನ್ನಿಸಬಹುದು. ನಿಜ. ಅಮೆರಿಕ, ಭಾರತದಂತಹ ರಾಷ್ಟ್ರಗಳಿಗೆ ಹೌತಿಗಳನ್ನ ಮಟ್ಟ ಹಾಕೋದು ಒಂದು ದಿನದ ಕೆಲಸ. ನೌಕಾ ಪಡೆ, ವಾಯು ಪಡೆ ಹಾಗೂ ಕ್ಷಿಪಣಿ ಸಾಮರ್ಥ್ಯದ ಮುಂದೆ ಹೌತಿಗಳು ಏನೇನು ಅಲ್ಲ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪರಿಣಾಮಗಳು ಬೀರುವ ದೃಷ್ಟಿಯಿಂದ ಇತರೆ ರಾಷ್ಟ್ರಗಳು ಹಿಂದೇಟು ಹಾಕುತ್ತಿದೆ.