ಭಯಂಕರ ಬರ.. ನೀರು, ಆಹಾರವಿಲ್ಲದೆ 100ಕ್ಕೂ ಹೆಚ್ಚು ಆನೆಗಳು ಸಾವು – ನದಿಯೇ ಇಲ್ಲದ ಕಾಡಿನಲ್ಲಿ ಮೂಲಪ್ರಾಣಿಗಳ ವೇದನೆ
ಮನುಷ್ಯ ಜಗತ್ತಿನ ಅತೀ ಬುದ್ಧಿವಂತ ಜೀವಿ. ಭೂಮಿಯಿಂದ ಚಂದ್ರನವರೆಗೂ ತನ್ನ ಹೆಜ್ಜೆ ಗುರುತು ಮೂಡಿಸಿದ್ದಾನೆ. ವೈಜ್ಞಾನಿಕ ಕ್ಷೇತ್ರದಲ್ಲಿ ಇತಿಹಾಸ ಬರೆದಿದ್ದಾನೆ. ಇಷ್ಟೆಲ್ಲಾ ಸಾಧನೆ ಮಾಡಿದ್ರೂ ಪ್ರಕೃತಿಯ ಮುನಿಸಿನ ಮುಂದೆ ಆತನ ಆಟ ಏನೇನೂ ನಡೆಯಲ್ಲ ಅನ್ನೋದು ಪದೇಪದೆ ಸಾಬೀತಾಗುತ್ತಿದೆ. ಧಾರಾಕಾರ ಮಳೆ, ಭೀಕರ ಬರ, ಕಾಡ್ಗಿಚ್ಚು, ಭೂಕಂಪ, ಜ್ವಾಲಾಮುಖಿ, ಸುನಾಮಿ, ಚಂಡಮಾಡುತದಂತಹ ಪ್ರಕೃತಿ ವಿಕೋಪಗಳು ಕ್ಷಣಮಾತ್ರದಲ್ಲೇ ಎಲ್ಲವನ್ನೂ ಸರ್ವನಾಶ ಮಾಡಿಬಿಡುತ್ತವೆ. ನಿಸರ್ಗದ ಸಿಟ್ಟಿಗೆ ಸಿಲುಕಿ ಜಿಂಬಾಬ್ವೆಯ ಸ್ಥಿತಿಯೂ ಹಾಗೇ ಆಗಿದೆ. ಎಲ್ಲೆಲ್ಲೂ ಭಯಾನಕ ಬರ ಆವರಿಸಿದ್ದು ಆನೆಗಳ ಮಾರಣಹೋಮವೇ ನಡೆದಿದೆ. ಹತ್ತಾರು ಜಾತಿಯ ಪ್ರಾಣಿಗಳು ಪ್ರಾಣ ಬಿಟ್ಟಿವೆ.
ಇದನ್ನೂ ಓದಿ : ಅರಬ್ಬಿ ಸಮುದ್ರದಲ್ಲಿ ಮಾಲ್ಟಾ ನೌಕೆ ಹೈಜಾಕ್ – ನೆರವಿಗೆ ಧಾವಿಸಿದ ಭಾರತೀಯ ನೌಕಾಪಡೆಯ ಯುದ್ಧನೌಕೆ
ಜಿಂಬಾಬ್ವೆಯ ಅತಿದೊಡ್ಡ ಸಂರಕ್ಷಿತ ಅರಣ್ಯ ಪ್ರದೇಶವಾದ ಹ್ವಾಂಗೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡು ಕೇಳರಿಯದ ಬರ ಆವರಿಸಿದೆ. ನೀರಿನ ಕೊರತೆ, ಆಹಾರದ ಕೊರತೆ ಉಂಟಾಗಿ 100ಕ್ಕೂ ಹೆಚ್ಚು ಆನೆಗಳು ಮೃತಪಟ್ಟಿರುವ ಆಘಾತಕಾರಿ ಸುದ್ದಿ ಹೊರ ಬಿದ್ದಿದೆ. ಅಂತಾರಾಷ್ಟ್ರೀಯ ಪ್ರಾಣಿ ಕಲ್ಯಾಣ ಮತ್ತು ಸಂರಕ್ಷಣಾ ಸಂಘಟನೆಯೇ ಇಂಥಾದ್ದೊಂದು ಬೆಚ್ಚಿ ಬೀಳಿಸುವ ವರದಿ ನೀಡಿದೆ. ಸುಮಾರು 45,000 ಆನೆಗಳಿಗೆ ನೆಲೆಯಾಗಿರುವ ಜಿಂಬಾಬ್ವೆಯ ಅತಿದೊಡ್ಡ ಸಂರಕ್ಷಿತ ಅರಣ್ಯವಾದ ಹ್ಯಾಂಗೆ ರಾಷ್ಟ್ರೀಯ ಉದ್ಯಾನದಲ್ಲಿ ಈಗಾಗಲೇ ಡಜನ್‌ಗಟ್ಟಲೆ ಆನೆಗಳು ಸಾವನ್ನಪ್ಪಿವೆ. ವಿದ್ಯಮಾನದಿಂದಾಗಿ ಬೇಸಿಗೆ ಮಳೆ ಐದು ವಾರ ತಡವಾಗಿರುವುದು ಆನೆಗಳ ಸಾವಿಗೆ ಕಾರಣವಾಗಿದೆ ಎಂದು ಅಂತಾರಾಷ್ಟ್ರೀಯ ಪ್ರಾಣಿ ಕಲ್ಯಾಣ ನಿಧಿ ಹೇಳಿಕೆಯಲ್ಲಿ ತಿಳಿಸಿದೆ. ನೀರಿನ ಕೊರತೆಯಿಂದಾಗಿ ಕನಿಷ್ಠ 100 ಆನೆಗಳು ಈಗಾಗಲೇ ಸಾವನ್ನಪ್ಪಿವೆ. ಉದ್ಯಾನದಲ್ಲಿರುವ 104 ಸೌರಶಕ್ತಿ ಚಾಲಿತ ಕೊಳವೆಬಾವಿಗಳು ಪ್ರಾಣಿಗಳಿಗೆ ಅಗತ್ಯ ಇರುವಷ್ಟು ನೀರು ಪೂರೈಸಲು ಸಾಕಾಗುತ್ತಿಲ್ಲ. ಹೀಗಾಗಿ ಪ್ರಾಣಿಗಳು ನೀರು ಅರಸುತ್ತ ಬಹಳ ದೂರದವರೆಗೆ ನಡೆಯುತ್ತ ಸಾಗುತ್ತಿವೆ. ಹ್ಯಾಂಗೆಯಲ್ಲಿ 45,000 ಆನೆಗಳಿವೆ. ಸಂಪೂರ್ಣವಾಗಿ ಬೆಳೆದ ಆನೆಗೆ ನಿತ್ಯ 200 ಲೀಟರ್ ನೀರು ಬೇಕಾಗುತ್ತದೆ. ಆದರೆ, ನೀರಿನ ಮೂಲಗಳು ಕ್ಷೀಣಿಸುತ್ತಿರುವುದರಿಂದ ಕೊಳವೆಬಾವಿಗಳು ಅಥವಾ ಬಾವಿಗಳಲ್ಲಿನ ಸೌರಶಕ್ತಿ ಚಾಲಿತ ಪಂಪ್ ಗಳಿಗೆ ಸಾಕಷ್ಟು ನೀರನ್ನು ಮೇಲಕ್ಕೆತ್ತಲು ಸಾಧ್ಯವಾಗುತ್ತಿಲ್ಲ. ಹಾಗೂ ಹ್ಯಾಂಗೆಯಲ್ಲಿ ಯಾವುದೇ ಪ್ರಮುಖ ನದಿ ಇಲ್ಲ, ಹೀಗಾಗಿ ಪ್ರಾಣಿಗಳು ಸೌರಶಕ್ತಿ ಚಾಲಿತ ಕೊಳವೆಬಾವಿಗಳನ್ನು ಅವಲಂಬಿಸಿವೆ. ಆದ್ರೆ ತೀವ್ರ ಬರದಿಂದ ಆನೆಗಳಂಥ ನೀರು ಅವಲಂಬಿತ ಸಸ್ತನಿಗಳು ಹೆಚ್ಚು ಬಾಧಿತವಾಗಿವೆ ಮತ್ತು ಶೀಘ್ರದಲ್ಲೇ ಮಳೆ ಬರದಿದ್ದರೆ ಆನೆ ಸೇರಿದಂತೆ ಇತರ ವನ್ಯಜೀವಿಗಳ ಜೀವಕ್ಕೂ ಸಂಚಕಾರ ಉಂಟಾಗಲಿದೆ.
ಜಿಂಬಾಬ್ವೆಯಲ್ಲಿ ಈ ರೀತಿ ತೀವ್ರ ಬರಕ್ಕೆ ಸಿಲುಕಿ ಆನೆಗಳ ಮಾರಣಹೋಮ ನಡೆಯುತ್ತಿರುವುದು ಇದೇ ಮೊದಲೇನಲ್ಲ. 2019ರಲ್ಲಿ ಜಿಂಬಾಬ್ವೆಯಲ್ಲಿ 200 ಕ್ಕೂ ಹೆಚ್ಚು ಆನೆಗಳು ತೀವ್ರ ಬರಗಾಲದಿಂದ ಸಾವನ್ನಪ್ಪಿದ್ದವು. ಐಎಫ್‌ಎಡಬ್ಲ್ಯೂ ಪ್ರಕಾರ ಈ ಪ್ರಕೃತಿ ವಿಕೋಪವು ಪುನರಾವರ್ತನೆಯಾಗುತ್ತಿರುವುದು ಆತಂಕಕ್ಕೀಡು ಮಾಡಿದೆ. ಜಿಂಬಾಬ್ವೆಯಲ್ಲಿ ಆನೆಗಳ ಸಾವುಗಳು ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲಾಗಿದೆ ಎಂದಿದೆ. ಸಾಮಾನ್ಯವಾಗಿ ಜಿಂಬಾಬ್ವೆಯಲ್ಲಿ ನವೆಂಬರ್ ನಿಂದ ಮಾರ್ಚ್ ವರೆಗೆ ಮಳೆಗಾಲವಿರುತ್ತದೆ. ಆದರೆ ಈ ವರ್ಷ ಇಲ್ಲಿಯವರೆಗೂ ಮಳೆಯಾಗಿಲ್ಲ. ಜಿಂಬಾಬ್ವೆ ಹವಾಮಾನ ಇಲಾಖೆಯ ಪ್ರಕಾರ 2024 ರವರೆಗೆ ಬರಗಾಲ ಮುಂದುವರಿಯುವ ನಿರೀಕ್ಷೆಯಿದೆ. ಹೀಗಾಗಿ ಉಳಿದ ಪ್ರಾಣಿಗಳಿಗೂ ಜೀವಪಾಯ ಎದುರಾಗುವ ಆತಂಕ ಎದುರಾಗಿದೆ.
ಜಿಂಬಾಬ್ವೆಯ ಹ್ವಾಂಗೆ ರಾಷ್ಟ್ರೀಯ ಉದ್ಯಾನವನವು 14,600 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿದೆ. 50 ಸಾವಿರಕ್ಕೂ ಹೆಚ್ಚು ಆನೆಗಳು ಇಲ್ಲಿ ವಾಸಿಸುತ್ತಿವೆ. 19ಕ್ಕೂ ಹೆಚ್ಚು ಜಾತಿಯ ಸಸ್ಯಾಹಾರಿ ಪ್ರಾಣಿಗಳು, 8 ಬಗೆಯ ಮಾಂಸಾಹಾರಿ ಪ್ರಾಣಿಗಳು ಸೇರಿದಂತೆ 100ಕ್ಕೂ ಹೆಚ್ಚು ಸಸ್ತನಿಗಳನ್ನ ಹೊಂದಿದೆ. ಹಾಗೂ 400ಕ್ಕೂ ಹೆಚ್ಚು ಪಕ್ಷಿ ಪ್ರಬೇಧಗಳು ಇಲ್ಲಿ ಜೀವಿಸುತ್ತಿವೆ. ಹ್ವಾಂಗೆ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿಗಳಿಗೆ ನೀರು ಪೂರೈಸಲು ಒಟ್ಟು 105 ಕೊಳವೆಬಾವಿಗಳನ್ನ ನಿರ್ಮಾಣ ಮಾಡಲಾಗಿದೆ. ಅವುಗಳಲ್ಲಿ ಹೆಚ್ಚಿನವು ಸೌರಶಕ್ತಿಯಿಂದ ಕಾರ್ಯನಿರ್ವಹಿಸುತ್ತವೆ. ಆದ್ರೆ ಮಳೆ ಕೊರತೆ ಮತ್ತು ಬಿಸಿಲಿನ ತಾಪಮಾನ ಹೆಚ್ಚಳದಿಂದ ಬೇಡಿಕೆ ಇರುವಷ್ಟು ನೀರು ಪೂರೈಸಲು ಸಾಧ್ಯವಾಗ್ತಿಲ್ಲ. ಈಗಾಗಲೇ ಬರ ಪರಿಸ್ಥಿತಿ ತೀವ್ರವಾಗಿರೋದ್ರಿಂದ ಆನೆಗಳು, ಎಮ್ಮೆಗಳು, ಜೀಬ್ರಾಗಳು ಸೇರಿದಂತೆ ಇತರೆ ಪ್ರಾಣಿಗಳು ದಕ್ಷಿಣ ಆಫ್ರಿಕಾದತ್ತ ವಲಸೆ ಹೋಗುತ್ತಿವೆ. ಹೀಗಾಗಿ ಅಲ್ಲಿನ ಆಡಳಿತ ಮಂಡಳಿ ಸುಮಾರು 400 ಆನೆಗಳು, 2,000 ಇಂಪಾಲಾಗಳು, 70 ಜಿರಾಫೆಗಳು, 50 ಎಮ್ಮೆಗಳು, 50 ಕಾಡುಕೋಣಗಳು, 50 ಜೀಬ್ರಾಗಳು, 50 ಎಲ್ಯಾಂಡ್‌ಗಳು, 10 ಸಿಂಹಗಳು ಮತ್ತು 10 ಕಾಡು ನಾಯಿಗಳ ಗುಂಪನ್ನು ಮೂರು ಉತ್ತರ ಸಂರಕ್ಷಣಾ ಪ್ರದೇಶಗಳಿಗೆ ಸ್ಥಳಾಂತರಿಸಿದೆ.