ಮೇ 10 ರಂದು ಪ್ರವಾಸಿ ತಾಣಗಳು ಬಂದ್! – ಕಾರಣವೇನು ಗೊತ್ತಾ?
ಬೆಂಗಳೂರು: ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಸರ್ಕಾರಿ ಕಚೇರಿ, ಖಾಸಗಿ ಕಚೇರಿಗಳಲ್ಲಿ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಲಾಗುತ್ತದೆ. ಹೀಗಾಗಿ ಅನೇಕರು ಮತದಾನ ಮಾಡುವುದನ್ನು ತಪ್ಪಿಸಿ ಹೊರಗಡೆ ಸುತ್ತಾಡಲು ಹೋಗುತ್ತಾರೆ. ಇದನ್ನು ತಪ್ಪಿಸಲು ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದ್ದು, ಚುನಾವಣೆಯಂದು ಬಹುತೇಕ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ನಿರ್ಧರಿಸಿದೆ.
ಕಡ್ಡಾಯವಾಗಿ ಮತದಾರರು ಮೇ 10 ರಂದು ತಮ್ಮ ಹಕ್ಕು ಚಲಾಯಿಸಬೇಕೆಂಬುದು ಚುನಾವಣಾ ಆಯೋಗ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರವಾಸಿ ತಾಣಗಳು ಮಾತ್ರವಲ್ಲದೆ ಹೋಟೆಲ್ ಗಳು, ರೆಸಾರ್ಟ್ ಗಳನ್ನು ಬಂದ್ ಮಾಡಲು ನಿರ್ಧರಿಸಿದೆ. ಮೇ 10ರಂದು ಹೋಟೆಲ್, ರೆಸಾರ್ಟ್ ಬುಕ್ಕಿಂಗ್ ಗೆ ಅವಕಾಶವಿರುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದನ್ನೂ ಓದಿ: ಮೇ 5 ರಿಂದ 9 ದಿನಗಳ ಕಾಲ BMTC, KSRTC ಬಸ್ ಸೇವೆಯಲ್ಲಿ ವ್ಯತ್ಯಯ!
ಚುನಾವಣಾ ಆಯೋಗದ ಈ ನಿರ್ಧಾರಕ್ಕೆ ಕೆಲ ಸಂಸ್ಥೆಗಳು ಕೂಡ ಕೈ ಜೋಡಿಸಿವೆ. ಜನರು ಮತ ಚಲಾಯಿಸಿ ಬಂದು ಹೋಟೆಲ್, ರೆಸಾರ್ಟ್ ಬುಕ್ಕಿಂಗ್ ಮಾಡಿದರೆ ವಿಶೇಷ ರಿಯಾಯಿತಿ ನೀಡಲು ಅನೇಕ ಸಂಸ್ಥೆಗಳು, ಪ್ರವಾಸಿ ತಾಣಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮುಂದಾಗಿವೆ. ಆಯಾ ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳನ್ನು ಮೇ 10ರಂದು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜೋಗ್ ಫಾಲ್ಸ್ ನ್ನು ಮೇ 10ರಂದು ಮುಚ್ಚಲಾಗುವುದು ಎಂದು ಶಿವಮೊಗ್ಗ ಡಿಸಿ ತಿಳಿಸಿದ್ದಾರೆ.
ಮೇ 10 ಕ್ಕೆ ಶೇ. 17 ರಷ್ಟು ಬುಕ್ಕಿಂಗ್ ಆಗಿವೆ. ಅವರಲ್ಲಿ ಹೆಚ್ಚಿನವರು ಕರ್ನಾಟಕದ ಹೊರಗಿನವರು. ಹೊಟೇಲ್ ನಲ್ಲಿ ಬುಕ್ಕಿಂಗ್ ಮಾಡಿದವರು ಮೇ 9 ಅಥವಾ ಮೇ 10 ರ ಮುಂಜಾನೆ ಹೊರಡುತ್ತಿದ್ದಾರೆ. ಆಡಳಿತ ಮಂಡಳಿಯು ತಮ್ಮ ಸಿಬ್ಬಂದಿಗೆ ಮತ ಚಲಾಯಿಸಲು ರಜೆ ನೀಡುತ್ತಿದೆ. ಅಲ್ಲದೇ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಿಬ್ಬಂದಿಗೆ ರಜೆ ನೀಡಲಾಗುವುದು. ಮೇ 10 ರಂದು ಮೃಗಾಲಯಗಳನ್ನು ಮುಚ್ಚಲಾಗುವುದು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ತಿಳಿಸಿದೆ.