‘ಕೈ’ ಪಾಳಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ
ಒಬ್ಬ ಆಕಾಂಕ್ಷಿ, ಟಿಕೆಟ್ ಗಾಗಿ ಐದು ಕ್ಷೇತ್ರಗಳಿಗೆ ಅರ್ಜಿ!

‘ಕೈ’ ಪಾಳಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿಒಬ್ಬ ಆಕಾಂಕ್ಷಿ, ಟಿಕೆಟ್ ಗಾಗಿ ಐದು ಕ್ಷೇತ್ರಗಳಿಗೆ ಅರ್ಜಿ!

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆಗೆ ಇವತ್ತು ಕೊನೆಯ ದಿನ. ಈಗಾಗಲೇ 400 ಮಂದಿ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಕೆಲ ಅಭ್ಯರ್ಥಿ ಆಕಾಂಕ್ಷಿಗಳು ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ಒಬ್ಬರು ಟಿಕೆಟ್‌ಗಾಗಿ ಐದು ಕ್ಷೇತ್ರಗಳಿಗೆ ಅರ್ಜಿ ಸಲ್ಲಿಸಿದ್ರೆ, ಇನ್ನು ಒಂದೇ ಕುಟುಂಬದ ಮೂವರು ಒಂದೇ ಕ್ಷೇತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದೂ ಕೂಡಾ ಇದೆ.

ಇದನ್ನೂ ಓದಿ: ‘ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ವಿವೇಕಾನಂದರ ನೆಪ’ – ಕಾಂಗ್ರೆಸ್ ಟ್ವೀಟ್

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​​ ಟಿಕೆಟ್​​ಗಾಗಿ ಗುದ್ದಾಟ ಶುರುವಾಗಿದೆ. ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕರಾಗಿರುವ ಕಿಮ್ಮನೆ ರತ್ನಾಕರ್ ಹಾಗೂ ಅದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಮಂಜುನಾಥ್​​ ಗೌಡ ಇಬ್ಬರೂ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ, ಒಬ್ಬರೇ ಆಕಾಂಕ್ಷಿ ಸಚಿನ್ ಮಿಗಾರಿಂದ ಐದು ಕ್ಷೇತ್ರಗಳ ಟಿಕೆಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಚಿಕ್ಕಮಗಳೂರು, ಶೃಂಗೇರಿ, ತೀರ್ಥಹಳ್ಳಿ, ಪಾಂಡವಪುರ, ದೇವರಹಿಪ್ಪರಗಿ ಸೇರಿದಂತೆ ಒಟ್ಟು 5ಕ್ಷೇತ್ರಗಳ ಟಿಕೆಟ್​ಗೆ ಇವರೊಬ್ಬರೇ ಅರ್ಜಿ ಸಲ್ಲಿಸಿದ್ದಾರೆ.

ಕಾಗೋಡು ತಿಮ್ಮಪ್ಪ, ಕಾಗೋಡು ಪುತ್ರಿ ಡಾ.ರಾಜನಂದಿನಿ, ಅಳಿಯ ಬೇಳೂರು ಗೋಪಾಲಕೃಷ್ಣ  ಸೇರಿದಂತೆ ಒಂದೇ ಕುಟುಂಬದ ಮೂವರು ಸಾಗರ ಕಾಂಗ್ರೆಸ್ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರ ಜೊತೆಗೆ ಬಿ.ಆರ್ ಜಯಂತ್, ರತ್ನಾಕರ್ ಹೊನಗೋಡು ಅವರೂ ಕೂಡ ಸಾಗರ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಪುಲಕೇಶಿ ನಗರ ಕ್ಷೇತ್ರದ ಟಿಕೆಟ್​ಗಾಗಿ ಇಬ್ಬರು ಅರ್ಜಿ ಸಲ್ಲಿಸಿದ್ದು ಅಖಂಡ ಶ್ರೀನಿವಾಸ ಮೂರ್ತಿಗೆ ಪ್ರಸನ್ನ ಕುಮಾರ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಇನ್ನು ಕಲಘಟಕಿ ಕ್ಷೇತ್ರದಲ್ಲೂ ತೀವ್ರ ಪೈಪೋಟಿ ಇದ್ದು ನಾಗರಾಜ್ ಛಬ್ಬಿ ಹಾಗೂ ಸಂತೋಷ್ ಲಾಡ್ ಕಲಘಟಕಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜೊತೆಗೆ ಸಂತೋಷ್ ಲಾಡ್ ಅವರು ಬಳ್ಳಾರಿ ನಗರದ ಟಿಕೆಟ್ ಕೂಡ ಕೇಳುತ್ತಿದ್ದಾರೆ. ಕೋಲಾರ ಕ್ಷೇತ್ರಕ್ಕೆ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಅರ್ಜಿ ಪಡೆದಿದ್ದರು. ಆದರೆ ಸಿದ್ದರಾಮಯ್ಯ ಸ್ಪರ್ಧೆ ಖಚಿತವಾದ ಬಳಿಕ ಅರ್ಜಿ ಸಲ್ಲಿಸಲು ಅವರು ಹಿಂದೇಟು ಹಾಕಿದರು. ನಂಜನಗೂಡು ಕ್ಷೇತ್ರಕ್ಕೆ ಎಚ್.ಸಿ.ಮಹಾದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅರ್ಜಿ ಸಲ್ಲಿಸಿದ್ದಾರೆ. ಮೂಡಿಗೆರೆ ಕ್ಷೇತ್ರಕ್ಕೆ ಹಿರಿಯ ನಾಯಕಿ ಮೋಟಮ್ಮ ಅವರ ಪುತ್ರಿ ನಯನಾ ಮೋಟಮ್ಮ ಅರ್ಜಿ ಸಲ್ಲಿಸಿದ್ದಾರೆ. ಮಂಗಳೂರು ದಕ್ಷಿಣಕ್ಕೆ ಐವನ್ ಡಿಸೋಜ, ಮಂಗಳೂರು ಉತ್ತರಕ್ಕೆ ಮೋಯಿದ್ದೀನ್ ಬಾವಾ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ 30 ಶಾಸಕರು ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಟಿಕೆಟ್​ಗಾಗಿ ಅರ್ಜಿಗೆ ₹ 5,000 ಶುಲ್ಕ ನಿಗದಿಪಡಿಸಿದೆ. ಅರ್ಜಿಯೊಂದಿಗೆ ₹ 2 ಲಕ್ಷ ಡಿಡಿ ನೀಡಬೇಕು ಎಂದು ಕಾಂಗ್ರೆಸ್ ಪಕ್ಷವು ಷರತ್ತು ವಿಧಿಸಿದೆ.

suddiyaana