ಅಸ್ಸಾಂನಲ್ಲಿ ಕೇಸರಿ ಅಲೆ! –  98 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ!

ಅಸ್ಸಾಂನಲ್ಲಿ ಕೇಸರಿ ಅಲೆ! –  98 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ!

ರಾಷ್ಟ್ರ ರಾಜಕಾರಣದ ಗಮನ ಸೆಳೆದಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುಚುಚೇರಿ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಇಂದು ನಡೆದಿದ್ದು, ಇದೀಗ ಫಲಿತಾಂಶ ಪ್ರಕಟವಾಗಿದೆ. ಈಶಾನ್ಯ ರಾಜ್ಯದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಅಸ್ಸಾಂನ ಬಿಜೆಪಿ ವಶಪಡಿಸಿಕೊಂಡಿದೆ.

ಇದನ್ನೂ ಓದಿ: ಸ್ಟಾಲಿನ್ ಗೆ ಸೋಲು.. ಸಚಿವರಿಗೂ ಮಣ್ಣು ಮುಕ್ಕಿಸಿದ ಮತದಾರರು – ತಮಿಳುನಾಡಿನಲ್ಲಿ ದಳಪತಿ ವಿಜಯ್ ದರ್ಬಾರ್!

ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, 722 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ NDA ಮೈತ್ರಿಕೂಟ ಮತ್ತು ಗೌರವ್ ಗೊಗೊಯ್ ನೇತೃತ್ವದ ಅಸ್ಸೋಮ್ ಸನ್ಮಿಲಿಟೊ ಮೋರ್ಚಾ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಇದೀಗ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಅಸ್ಸಾಂನಲ್ಲಿ ಬಿಜೆಪಿ ಒಟ್ಟು 98 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಪ್ರತಿಪಕ್ಷ ಕಾಂಗ್ರೆಸ್ ಕೇವಲ 26 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.

ಆಸ್ಸಾಂನಲ್ಲಿ 15 ವಿಧಾನಸಭಾ ಚುನಾವಣೆಗಳು ನಡೆದಿವೆ. ಇದರಲ್ಲಿ 1952ರಿಂದ 1972ರ ವರೆಗೆ ಕಾಂಗ್ರೆಸ್ ಅಧಿಕಾರ ನಡೆಸಿದ್ದು, 1978ರಿಂದ 2016ರ ವರೆಗೆ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ಅಸ್ಸಾಂ ಗಣ ಪರಿಷತ್, ಕಾಂಗ್ರೆಸ್ ಅಧಿಕಾರ ನಡೆಸಿವೆ. 2001ರಿಂದ 2011ರ ವರೆಗೆ ಸತತ ಮೂರು ಬಾರಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ.

ಅಂದ್ಹಾಗೆ 2016, 2021ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಸತತ ಎರಡು ಬಾರಿ ಆಡಳಿತ ನಡೆಸಿದೆ. 2011ರಲ್ಲಿ ನಡೆದ ಚುನಾವಣೆಯಲ್ಲಿ ಶೇ 76ರಷ್ಟು ಮತದಾನದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿತ್ತು.

2016ರಲ್ಲಿ ಶೇ 84.72ರಷ್ಟು ಮತದಾನವಾಗಿತ್ತು. ಈ ಮೂಲಕ 2011ಕ್ಕಿಂತ ಸುಮಾರು ಶೇ 8ರಷ್ಟು ಹೆಚ್ಚು ಮತದಾನ ನಡೆದಿತ್ತು. 2016ರಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಸೋಲಿಸಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೇರಿತ್ತು.

2021ರಲ್ಲಿ ಶೇ 82ರಷ್ಟು ಮತದಾನ ನಡೆದಿತ್ತು. ಶೇ 2ರಷ್ಟು ಮತ ಪ್ರಮಾಣ ಕುಸಿದರೂ ಬಿಜೆಪಿ ಮರಳಿ ಅಧಿಕಾರಕ್ಕೇರಿತ್ತು. 2026ರಲ್ಲಿ ಶೇ 85.64ರಷ್ಟು ಮತದಾನವಾಗಿದೆ. ಈ ಬಾರಿಯೂ ಮತದಾರ ಬಿಜೆಪಿ ಕೈ ಹಿಡಿಯುವ ಲಕ್ಷಣಗಳು ನಿಚ್ಚಳವಾಗಿದೆ.

Shwetha M