ಬಿಜೆಪಿ ಹೀನಾಯ ಸೋಲಿಗೆ ಕಾರಣ ಕೇಳಿದ ಪ್ರಧಾನಿ – ಹಿರಿಯ ನಾಯಕರು ನೀಡಿದ ಮಾಹಿತಿಗಳೇನು?

ಬಿಜೆಪಿ ಹೀನಾಯ ಸೋಲಿಗೆ ಕಾರಣ ಕೇಳಿದ ಪ್ರಧಾನಿ – ಹಿರಿಯ ನಾಯಕರು ನೀಡಿದ ಮಾಹಿತಿಗಳೇನು?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿರುವ ಬಿಜೆಪಿ ಇನ್ನೂ ಆಘಾತದಿಂದ ಹೊರ ಬಂದಿಲ್ಲ. ಸೋಲಿನ ಕಾರಣಗಳ ಬಗ್ಗೆ ನಾಯಕರೆಲ್ಲಾ ಚರ್ಚೆ ನಡೆಸುತ್ತಿದ್ದಾರೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ನಾಯಕರೊಬ್ಬರಿಂದ ಸೋಲಿನ ಕಾರಣಗಳ ಬಗ್ಗೆ ವಿವರ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲಿನ ಬಗ್ಗೆ ಎರಡು ದಿನಗಳ ಹಿಂದೆ ರಾಜ್ಯದ ಹಿರಿಯ ನಾಯಕರೊಬ್ಬರು ಮೋದಿ ಅವರಿಗೆ ಸೋಲಿನ ಕಾರಣಗಳ ಮಾಹಿತಿ ನೀಡಿದ್ದಾರಂತೆ. ಸುಮಾರು ಒಂದೂವರೆ  ಗಂಟೆಗಳ ಕಾಲ ಮೋದಿ ಜತೆ ಮಾತುಕತೆ ನಡೆಸಿದ್ದಾರೆ. ಟಿಕೆಟ್ ಹಂಚಿಕೆ ಸರಿಯಾಗಿ ನಡೆದಿಲ್ಲ. ಸರ್ಕಾರ ಅಸ್ತಿತ್ವದಲ್ಲಿದ್ದಾಗ ಪಕ್ಷದ ನಾಯಕರು ಕಾರ್ಯಕರ್ತರ ಕಡೆ ಗಮನ ನೀಡಿಲ್ಲ. ಪರಿಣಾಮವಾಗಿ ಈ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಉತ್ಸಾಹವೇ ಇರಲಿಲ್ಲ. ಪಕ್ಷದ ನಾಯಕರು ಒಬ್ಬರನ್ನೊಬ್ಬರು ಸೋಲಿಸಲು ತಲ್ಲಿನರಾದರು. ಕೊನೆಗೆ ತಾವೂ ಸೋತು ಇನ್ನೊಬ್ಬರನ್ನು ಸೋಲಿಸಿದರು. ಕಾಂಗ್ರೆಸ್ ಮಾಡಿದ 40% ಕಮಿಷನ್ ಆರೋಪಕ್ಕೆ ಸರಿಯಾದ ಪ್ರತ್ಯುತ್ತರ ನೀಡಲಿಲ್ಲ. ನೀವು ರಾಜ್ಯದಲ್ಲಿ ಬಂದು ಹೆಚ್ಚು ಪ್ರಚಾರ ಮಾಡದೆ ಇದ್ದರೆ 35 ಸೀಟುಗಳನ್ನು ಪಡೆಯುವುದೂ ಕಷ್ಟವಾಗುತ್ತಿತ್ತು ಎಂದು ಬಿಜೆಪಿ ಹಿರಿಯ ನಾಯಕ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ :  ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಶುರುವಾಯ್ತು ಪೈಪೋಟಿ – ಯಾರ್ಯಾರು ಲಾಬಿ ನಡೆಸಿದ್ದಾರೆ ಗೊತ್ತಾ..?

ಮೇ 13ರಂದು ಹೊರಬಿದ್ದ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ 135 ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಿತ್ತು. ಆಡಳಿತಾರೂಢ ಬಿಜೆಪಿ ಕೇವಲ 65 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿತ್ತು. ಕೊನೆಯ ಹಂತದಲ್ಲಿ ಮೋದಿ ಅವರ ಬಿರುಸಿನ ಪ್ರಚಾರದ ಹೊರತಾಗಿಯೂ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದ್ದು, ಪಕ್ಷದ ವರಿಷ್ಠರನ್ನು ಚಿಂತೆಗೀಡು ಮಾಡಿತ್ತು. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಖುದ್ದು ಮೋದಿ ಅವರೇ ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ವಿಮರ್ಶೆ ನಡೆಸಿದ್ದಾರೆ ಎನ್ನಲಾಗಿದೆ.

suddiyaana