ಅಸಿಮ್ ಮುನೀರ್‌ಗೆ ಮತ್ತಷ್ಟು ಬಲ – ಪಾಕಿಸ್ತಾನ ರಕ್ಷಣಾ ಪಡೆಗಳ  ಮೊದಲ ಮುಖ್ಯಸ್ಥರಾಗಿ ನೇಮಕ

ಅಸಿಮ್ ಮುನೀರ್‌ಗೆ ಮತ್ತಷ್ಟು ಬಲ – ಪಾಕಿಸ್ತಾನ ರಕ್ಷಣಾ ಪಡೆಗಳ  ಮೊದಲ ಮುಖ್ಯಸ್ಥರಾಗಿ ನೇಮಕ

ಪಾಕಿಸ್ತಾನದ ಮಿಲಿಟರಿ ನಾಯಕತ್ವದಲ್ಲಿ ದೊಡ್ಡ  ಬದಲಾವಣೆ ಮಾಡಲಾಗಿದೆ. ಅಸಿಮ್ ಮುನೀರ್ ಗೆ ಮತ್ತಷ್ಟು ಬಲ ಸಿಕ್ಕಿದೆ.  ದೇಶದ ರಕ್ಷಣಾ ಪಡೆಗಳ  ಮೊದಲ ಮುಖ್ಯಸ್ಥರನ್ನಾಗಿ ಅಸಿಮ್ ಮುನೀರ್  ಅವರ ನೇಮಕ ಮಾಡಿ ಪಾಕಿಸ್ತಾನ ಪ್ರಧಾನಿ ಶೆಹ್ಬಾಜ್ ಷರೀಫ್   ಸರ್ಕಾರವು ಘೋಷಣೆ ಮಾಡಿದೆ. ಮುನೀರ್ ಅವರನ್ನು ಪಾಕಿಸ್ತಾನ ಮಿಲಿಟರಿಯ ಮುಖ್ಯಸ್ಥ ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಬಡ್ತಿ ನೀಡಲು ಶೆಹ್ಬಾಜ್ ಷರೀಫ್ ಅವರು ಅನುಮೋದನೆ ನೀಡಿದ್ದು, ಈ ಹೊಸ ಹುದ್ದೆಯ ಅವಧಿ ಐದು ವರ್ಷಗಳದ್ದಾಗಿದೆ. ವರ್ಷದ ಆರಂಭದಲ್ಲಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದಿದ್ದ ಅಸಿಮ್ ಮುನೀರ್ ಅವರು ಇದೀಗ ಆ ಹುದ್ದೆಯೊಂದಿಗೆ ಉನ್ನತ ಸೇನಾ ಅಧಿಕಾರಿ ಮತ್ತು ಸೇನಾ ಮುಖ್ಯಸ್ಥ ಹುದ್ದೆಯನ್ನು ಕೂಡ ಅಲಂಕರಿಸಲಿದ್ದಾರೆ ಎಂದು ಪಾಕಿಸ್ತಾನ ಅಧ್ಯಕ್ಷರ ಕಚೇರಿಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಶಾಂತಿಯಿಂದ ಹೋಗೋಣ, ಯುದ್ಧ ಬೇಡ – ಭಾರತಕ್ಕೆ ಬಂದ ಪುಟಿನ್‌ಗೆ ಮೋದಿ ಕಿವಿಮಾತು

ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಪ್ರಧಾನ ಮಂತ್ರಿ ಕಚೇರಿಯಿಂದ ಕಳುಹಿಸಲಾದ ಹೊಸ ಹುದ್ದೆಯ ಬೇಡಿಕೆಯನ್ನು ಅನುಮೋದಿಸಿದ್ದು ಇದರಿಂದ ಸೇನಾ ಮುಖ್ಯಸ್ಥರಾದ ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ಎನ್ಐ(ಎಂ), ಎಚ್ ಜೆ ಅವರು ಮುಂದಿನ ಐದು ವರ್ಷಗಳ ಕಾಲ ರಕ್ಷಣಾ ಪಡೆಗಳ ಮುಖ್ಯಸ್ಥರನ್ನಾಗಿ ನೇಮಕಗೊಳಿಸಲು ಅನುಮೋದನೆ ನೀಡಿದೆ. ಮುನೀರ್ ಅವರಿಗೆ ನೀಡಿರುವ ಹೊಸ ಹುದ್ದೆಯು ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯಲ್ಲಿ ಅತ್ಯುನ್ನತ ಮಟ್ಟದಲ್ಲಿ ಕಮಾಂಡ್‌ ಹುದ್ದೆಯಾಗಿದೆ. ಇದು ಅವರ ಸಾಮರ್ಥ್ಯವನ್ನು ಹೆಚ್ಚಿಸುವ, ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಈ ಮೂಲಕ ಅವರು ಸಿಒಎಎಸ್ ಮತ್ತು ಸಿಡಿಎಫ್ ಹುದ್ದೆಗಳನ್ನು ಏಕಕಾಲದಲ್ಲಿ ಹೊಂದಿರುವ ಮೊದಲ ಮಿಲಿಟರಿ ಅಧಿಕಾರಿಯಾಗಿ ಗುರುತಿಸಿಕೊಳ್ಳಲಿದ್ದಾರೆ.

ಈ ನಡುವೆಯೇ ಮುನೀರ್ ಅವರು ಏರ್ ಚೀಫ್ ಮಾರ್ಷಲ್ ಜಹೀರ್ ಅಹ್ಮದ್ ಬಾಬರ್ ಸಿಧು ಅವರ ಎರಡು ವರ್ಷಗಳ ಅಧಿಕಾರ ವಿಸ್ತರಣೆಯನ್ನು ಅನುಮೋದಿಸಿದ್ದಾರೆ. 2026ರ ಮಾರ್ಚ್ ತಿಂಗಳಲ್ಲಿ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಈ ಬಳಿಕ ಅವರ ವಿಸ್ತರಣೆಯ ಅಧಿಕಾರಾವಧಿ ಪ್ರಾರಂಭವಾಗಲಿದೆ.

Kishor KV