PAK ಬೆದರಿಕೆಗೆ ಬಗ್ಗದ ICC – ಏಷ್ಯಾಕಪ್ ಬಹಿಷ್ಕರಿಸುತ್ತಾ ಪಾಕ್?
ಭಾರತ ಗೆದ್ದಿದ್ದಕ್ಕೆ ಟೂರ್ನಿಯಿಂದ ಔಟ್?

PAK ಬೆದರಿಕೆಗೆ ಬಗ್ಗದ ICC – ಏಷ್ಯಾಕಪ್ ಬಹಿಷ್ಕರಿಸುತ್ತಾ ಪಾಕ್?ಭಾರತ ಗೆದ್ದಿದ್ದಕ್ಕೆ ಟೂರ್ನಿಯಿಂದ ಔಟ್?

ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಯ ಆಟಗಾರರು ಶೇಕ್ ಹ್ಯಾಂಡ್ ಮಾಡದ ನಿರ್ಧಾರ ದೊಡ್ಡ ಮಟ್ಟದ ವಿವಾದ ಸೃಷ್ಟಿಸಿದೆ. ಭಾರತೀಯ ಆಟಗಾರರು ಕೈಕುಲುಕದೆ ಡ್ರೆಸ್ಸಿಂಗ್ ರೂಂ ಸೇರಿದ್ದು ಪಿಸಿಬಿಯನ್ನ ಅವಮಾನಕ್ಕೀಡು ಮಾಡಿದೆ. ಇದ್ರಿಂದ ಕೆರಳಿರುವ ಪಾಕ್ ಕ್ರಿಕೆಟ್ ಮಂಡಳಿ ಭಾರತ ವರ್ಸಸ್ ಪಾಕ್ ಪಂದ್ಯದ ಮ್ಯಾಚ್ ರೆಫರಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿದೆ. ಹಾಗೇ ಬೇಡಿಕೆ ಈಡೇರಿಸದೇ ಇದ್ರೆ ಯುಎಇ ವಿರುದ್ಧದ ಪಂದ್ಯವನ್ನು ಆಡುವುದಿಲ್ಲ ಎಂತಾ ಬೆದರಿಕೆ ಹಾಕಿದೆ. ಆದ್ರೆ ಪಾಕ್ ಬೇಡಿಕೆಗೆ ಐಸಿಸಿ ಕ್ಯಾರೇ ಎನ್ನದೇ ತಿರುಗೇಟು ಕೊಟ್ಟಿದೆ.

ಇದನ್ನೂ ಓದಿ : ಫ್ಯಾನ್ಸ್ ಸಿಟ್ಟು.. ಶೇಕ್ ಹ್ಯಾಂಡ್ ಗಿಮಿಕ್ – ಹಣಕ್ಕಾಗಿ ಬೇಕಿತ್ತಾ ಮ್ಯಾಚ್?

ಪಿಸಿಬಿ ಬೇಡಿಕೆಯನ್ನು ತಿರಸ್ಕರಿಸಿದ ಐಸಿಸಿ!

ಸೆಪ್ಟೆಂಬರ್ 14 ರಂದು ಭಾರತದ ವಿರುದ್ಧದ ಪಂದ್ಯದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ತೆಗೆದುಹಾಕುವಂತೆ ಐಸಿಸಿಗೆ ಮನವಿ ಮಾಡಿತ್ತು. ತೆಗೆದುಹಾಕದಿದ್ದರೆ ತಮ್ಮ ತಂಡವು ಪಂದ್ಯಾವಳಿಯನ್ನು ತೊರೆಯುತ್ತದೆ ಎಂದು ಪಾಕಿಸ್ತಾನ ಬೆದರಿಕೆ ಹಾಕಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ದೂರನ್ನು ತನಿಖೆ ಮಾಡಿದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ತನ್ನ ನಿರ್ಧಾರವನ್ನು ನೀಡಿದೆ. ಪಿಸಿಬಿ ನಿರ್ದೇಶಕರು ಸೇರಿದಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಕೆಲವು ಅಧಿಕಾರಿಗಳಿಗೆ ಟಾಸ್ ಸಮಯದಲ್ಲಿ ಇಬ್ಬರು ನಾಯಕರು ಕೈಕುಲುಕುವುದಿಲ್ಲ ಎಂದು ಈಗಾಗಲೇ ತಿಳಿದಿತ್ತು. ಐಸಿಸಿಗೆ ಬರೆದ ಪತ್ರದಲ್ಲಿ, ಪಿಸಿಬಿ ಆಂಡಿ ಪೈಕ್ರಾಫ್ಟ್ ಅವರನ್ನು ತೆಗೆದುಹಾಕದಿದ್ದರೆ, ಅವರು ತಮ್ಮ ತಂಡವನ್ನು ಪಂದ್ಯಾವಳಿಯಿಂದ ಹಿಂತೆಗೆದುಕೊಳ್ಳುವುದಾಗಿ ಸ್ಪಷ್ಟವಾಗಿ ಹೇಳಿತ್ತು. ಆದ್ರೆ ಪಾಕಿಸ್ತಾನದ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದೆ. ಹೀಗಾಗಿ ಪಾಕಿಸ್ತಾನ ಟೂರ್ನಿ ಬಹಿಷ್ಕಾರ ಮಾಡುತ್ತಾ ಅನ್ನೋ ಚರ್ಚೆಗಳು ಶುರುವಾಗಿವೆ.

 ಪಾಕಿಸ್ತಾನ ಟೂರ್ನಿ ಬಹಿಷ್ಕರಿಸಿದ್ರೆ ಯುಎಇಗೆ ಚಾನ್ಸ್!

ಸದ್ಯ ಪಾಕಿಸ್ತಾನ ಏಷ್ಯಾಕಪ್ ಟೂರ್ನಿಯಲ್ಲಿ ಇದುವರೆಗೆ 2 ಪಂದ್ಯಗಳನ್ನು ಆಡಿದೆ, ಅದರಲ್ಲಿ ಒಂದು ಪಂದ್ಯವನ್ನು ಗೆದ್ದಿದೆ ಮತ್ತು 2 ಅಂಕಗಳನ್ನು ಪಡೆದುಕೊಂಡಿದೆ. ಭಾರತದ ವಿರುದ್ಧ ಸೋಲು ಕಂಡಿದೆ. ಪಾಕಿಸ್ತಾನದ ಕೊನೆಯ ಲೀಗ್ ಪಂದ್ಯ ಯುಎಇ ವಿರುದ್ಧ. ಇಂಥಾ ಟೈಮಲ್ಲಿ ಪಾಕಿಸ್ತಾನ ತಂಡ ಯುಎಇ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ, ಯುಎಇ ವಾಕ್‌ಓವರ್ ಪಡೆಯುತ್ತದೆ. ಅಂದ್ರೆ ಪಾಕ್ ವಿರುದ್ಧದ ಪಂದ್ಯದಲ್ಲಿ ಯುಎಇ ಗೆದ್ದಂತೆ ಲೆಕ್ಕ. ಪಾಕಿಸ್ತಾನ ವಾಕ್‌ಓವರ್ ಮಾಡಿದರೆ ಅವರು ಟೂರ್ನಿಯಿಂದ ಹೊರಬೀಳುತ್ತಾರೆ. ಅಥವಾ ಪಾಕಿಸ್ತಾನ ಪಂದ್ಯ ಆಡೋಕೆ ತೀರ್ಮಾನ ಮಾಡಿದ್ರೆ ಸೆಪ್ಟೆಂಬರ್ 17ರಂದು ಅಂದ್ರೆ ಬುಧವಾರ ಯುಎಇ ವಿರುದ್ಧ ತನ್ನ ಮೂರನೇ ಪಂದ್ಯ ಆಡಲಿದೆ. ಈ ಮ್ಯಾಚಲ್ಲಿ ಗೆದ್ರೆ ಸೂಪರ್ 4ಗೆ ಸೆಲೆಕ್ಟ್ ಆಗ್ತಾರೆ. ಒಂದು ವೇಳೆ ಸೋತ್ರೆ ಟೂರ್ನಿಯಿಂದಲೇ ಹೊರ ಬೀಳ್ತಾರೆ.

ಭಾರತದ ವಿರುದ್ಧದ ಸೋಲಿನ ನಂತ್ರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಈಗಾಗ್ಲೇ ತಲೆದಂಡವಾಗಿದೆ. ಪಿಸಿಬಿ ನಿರ್ದೇಶಕ ಉಸ್ಮಾನ್ ವಹಾಲಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ಅಮಾನತುಗೊಳಿಸಿದೆ. ಪಂದ್ಯದ ನಂತರ ಕೈಕುಲುಕದ ಘಟನೆಯನ್ನು ನಿರ್ವಹಿಸುವಲ್ಲಿನ ಲೋಪಗಳಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದೀಗ ಐಸಿಸಿ ಮಟ್ಟದಲ್ಲೂ ಯಶಸ್ಸು ಸಿಕ್ಕಿಲ್ಲ. ಒಟ್ನಲ್ಲಿ ಏಷ್ಯಾಕಪ್​ನಲ್ಲಿ ಪಾಕಿಸ್ತಾನ ತಂಡ ಹೆಜ್ಜೆ ಹೆಜ್ಜೆಗೂ ಹಿನ್ನಡೆ ಅನುಭವಿಸಿದೆ. ಈಗ ಮ್ಯಾಚ್ ರೆಫರಿ ವಿಚಾರದಲ್ಲೂ ಸಕ್ಸಸ್ ಸಿಕ್ಕಿಲ್ಲ.

Shantha Kumari