ಢಾಕಾ ಸಭೆ ಸ್ಥಳಾಂತರದ ಬಗ್ಗೆ ಎಸಿಸಿ ಮೊಂಡುತನ – ಏಷ್ಯಾಕಪ್ ಬಹಿಷ್ಕಾರ ಮಾಡುತ್ತಾ BCCI?

ಢಾಕಾ ಸಭೆ ಸ್ಥಳಾಂತರದ ಬಗ್ಗೆ ಎಸಿಸಿ ಮೊಂಡುತನ – ಏಷ್ಯಾಕಪ್ ಬಹಿಷ್ಕಾರ ಮಾಡುತ್ತಾ BCCI?

ಭಾರತ ಮತ್ತು ಪಾಕ್ ನಡುವೆ ದ್ವಿಪಕ್ಷೀಯ ಸರಣಿ ನಡೆದು ವರ್ಷಗಳೇ ಕಳೆದಿವೆ. ಕೇವಲ ಐಸಿಸಿ ಮತ್ತು ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಇತ್ತೀಚೆಗೆ ನಡೆದ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿತ್ತು. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿತ್ತು. ಹೀಗಾಗಿ ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು. ಇದೀಗ ಭಾರತದಲ್ಲೇ ಏಷ್ಯಾಕಪ್ ಟೂರ್ನಿ ನಡೆಸೋಕೆ ಪ್ಲ್ಯಾನ್ ಮಾಡಲಾಗಿತ್ತು. ಸೆಪ್ಟೆಂಬರ್​ನಲ್ಲಿ ನಡೆಯಬೇಕಿದ್ದ ಟೂರ್ನಿಯನ್ನ ಭಾರತ ಬಹಿಷ್ಕರಿಸೋ ಸಾಧ್ಯತೆ ಇದೆ.

ಇದನ್ನೂ ಓದಿ : 4 ವರ್ಷಗಳ ಬಳಿಕ ಮೈದಾನಕ್ಕೆ ಎಬಿ ಡಿವಿಲಿಯರ್ಸ್ – ದಿಗ್ಗಜರ ಜಟಾಪಟಿಗೆ ಕೌಂಟ್ ಡೌನ್!

ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಂತೆಯೇ ಭಾರತ ಮತ್ತು ಬಾಂಗ್ಲಾದೇಶದ ನಡುವೆಯೂ ಸಾಕಷ್ಟು ವಿಚಾರಗಳಲ್ಲಿ ಮನಸ್ತಾಪವಿದೆ. ಇದರ ಲೇಟೆಸ್ಟ್ ಅಪ್​ಡೇಟ್ ಅಂದ್ರೆ  2025ರ ಏಷ್ಯಾಕಪ್​ ಆಡದಿರಲು ಮತ್ತು ಟೂರ್ನಿಯನ್ನು ಭಾರತದಲ್ಲಿ ಆಯೋಜನೆ ಮಾಡದಿರಲು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ನಿರ್ಧಾರ ಕೈಗೊಳ್ಳೋ ಸಾಧ್ಯತೆ ಇದೆ. ಇದಕ್ಕೆ ಮುಖ್ಯ ಕಾರಣ ಭಾರತೀಯ ಕ್ರಿಕೆಟ್ ಮಂಡಳಿಯ ಮನವಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕೇರ್​ಲೆಸ್ ಮಾಡಿರೋದು. ವಿಷ್ಯ ಏನಂದ್ರೆ ಈ ಬಾರಿಯ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ವಾರ್ಷಿಕ ಮಹಾಸಭೆಯನ್ನು ಢಾಕಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಆದರೆ ಭಾರತ ಮತ್ತು ಬಾಂಗ್ಲಾದೇಶ್ ನಡುವೆ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಹೀಗಾಗಿ ಢಾಕಾದಿಂದ ವಾರ್ಷಿಕ ಮಹಾಸಭೆಯನ್ನು ಸ್ಥಳಾಂತರಿಸಬೇಕೆಂದು ಬಿಸಿಸಿಐ ಮನವಿ ಮಾಡಿದೆ. ಹಾಗೇ  ಢಾಕಾದಲ್ಲಿ ಎಸಿಸಿ ಸಭೆ ನಡೆದ್ರೆ ಬಿಸಿಸಿಐ ಭಾಗವಹಿಸುವುದಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹಾಗೂ ಪಿಸಿಬಿ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಅವರಿಗೆ ಖಡಕ್ ಆಗಿ ಹೇಳಿದೆ. ಆದ್ರೆ ಎಸಿಸಿ ಈವರೆಗೆ ಯಾವುದೇ ಉತ್ತರ ನೀಡಿಲ್ಲ. ಇದ್ರಿಂದ ಬಿಸಿಸಿಐ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಸಭೆ ಹಾಗೂ ಏಷ್ಯಾಕಪ್​​ನಿಂದ ಹಿಂದೆ ಸರಿಯುವ ಸಾಧ್ಯತೆಯಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತನ್ನ ನಿರ್ಧಾರವನ್ನು ಬದಲಿಸದಿದ್ದರೆ, ಬಿಸಿಸಿಐ ಈ ಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ. ಅಲ್ಲದೆ ಮುಂಬರುವ ಏಷ್ಯಾಕಪ್​ನಿಂದಲೂ ಹಿಂದೆ ಸರಿಯುವ ಸಾಧ್ಯತೆಯಿದೆ. ಅಲ್ಲದೆ ಪ್ರಮುಖ ಸದಸ್ಯ ಮಂಡಳಿಗಳು ಭಾಗವಹಿಸದೆ ಢಾಕಾದಲ್ಲಿ ನಡೆಯುವ ಸಭೆಯಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳನ್ನು ಅಮಾನ್ಯವೆಂದು ಬಿಸಿಸಿಐ ಪರಿಗಣಿಸಲಿದೆ.

ವಿಶ್ವಕ್ರಿಕೆಟ್​ನ ದೊಡ್ಡಣ್ಣನಾಗಿರೋ ಬಿಸಿಸಿಐ ನಿರ್ಧಾರಕ್ಕೆ ಶ್ರೀಲಂಕಾ, ಒಮಾನ್ ಹಾಗೂ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಗಳು ಕೈ ಜೋಡಿಸಿವೆ. ಹೀಗಾಗಿ ಢಾಕಾದಲ್ಲಿ ಸಭೆ ನಡೆದರೆ ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ್ ಕ್ರಿಕೆಟ್ ಮಂಡಳಿಯ ಸದಸ್ಯರು ಮಾತ್ರ ಭಾಗವಹಿಸಲಿದ್ದಾರೆ. ನಿಗದಿತ ಸಭೆಗೆ ಕೇವಲ 4 ದಿನಗಳು ಬಾಕಿ ಉಳಿದಿದ್ದು, ಸ್ಥಳ ಬದಲಾವಣೆಯ ಕುರಿತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ  ಏಷ್ಯಾ ಕಪ್‌ನ ಭವಿಷ್ಯ ಕೂಡ ಗೊಂದಲದಲ್ಲಿದೆ. ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿ, ಏಷ್ಯಾಕಪ್ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದನ್ನು ಏಷ್ಯಾದ ಉಳಿದ ಕ್ರಿಕೆಟ್ ಮಂಡಳಿಗಳು ಒಪ್ಪುವ ಸಾಧ್ಯತೆ ಇಲ್ಲ. ಹೀಗಾಗಿ ಈ ಬಾರಿಯ ಏಷ್ಯಾಕಪ್ ನಡೆಯುತ್ತಾ ಇಲ್ವಾ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಈ ಬಾರಿಯ ಏಷ್ಯಾಕಪ್ ನಡೆಯಲಿರುವುದು ಭಾರತದಲ್ಲಿ. ಇದೇ ಪಾಕಿಸ್ತಾನದ ಸಿಟ್ಟಿಗೆ ಕಾರಣ ಆಗಿದೆ. ಯಾಕಂದ್ರೆ ಎಸಿಸಿ ಅಧ್ಯಕ್ಷ ಆಗಿರೋದು ಪಾಕಿಸ್ತಾನದ ಮೊಹ್ಸಿನ್ ನಖ್ವಿ. ಹೀಗಾಗಿ ಭಾರತದಲ್ಲಿ ಟೂರ್ನಿ ಆಡಲು ಪಾಕಿಸ್ತಾನ್ ಹಿಂದೇಟು ಹಾಕುತ್ತಿದೆ. ಕಳೆದ ಬಾರಿಯ ಚಾಂಪಿಯನ್ಸ್ ಟ್ರೋಫಿ ವೇಳೆ ಪಾಕ್​ನಲ್ಲಿ ಟೂರ್ನಿ ಆಡಲು ಭಾರತ ಹಿಂದೇಟು ಹಾಕಿತ್ತು. ಅಲ್ಲದೆ ಐಸಿಸಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಬಿಸಿಸಿಐ ಹಾಗೂ ಪಿಸಿಬಿ ನಡುವೆ ಒಪ್ಪಂದವಾಗಿದ್ದು, ಈ ಒಪ್ಪಂದದಂತೆ ಉಭಯ ತಂಡಗಳ ಪಂದ್ಯಗಳನ್ನು ತಟಸ್ಥ ಮೈದಾನದಲ್ಲಿ ಆಯೋಜಿಸಬೇಕಾಗುತ್ತದೆ. ಇದೇ ಕಾರಣದಿಂದಾಗಿ ಕಳೆದ ಬಾರಿಯ ಚಾಂಪಿಯನ್ಸ್ ಟ್ರೋಫಿಯನ್ನು ಟೀಮ್ ಇಂಡಿಯಾ ದುಬೈನಲ್ಲಿ ಆಡಿತ್ತು. ಹೀಗಾಗಿ ಏಷ್ಯಾಕಪ್ ಅನ್ನು ಕೂಡ ಬಿಸಿಸಿಐ, ಹೈಬ್ರಿಡ್ ಮಾದರಿಯಲ್ಲೇ ಆಯೋಜಿಸಬೇಕಾಗುತ್ತದೆ. ಅದರಂತೆ ಪಾಕಿಸ್ತಾನ್ ತಂಡದ ಪಂದ್ಯಗಳು ಯುಎಇ ನಲ್ಲಿ ಆಯೋಜನೆಗೊಳ್ಳುವ ಸಾಧ್ಯತೆ ಇದೆ.

ತಟಸ್ಥ ಸ್ಥಳಗಳಲ್ಲಷ್ಟೇ ಭಾರತ-ಪಾಕ್ ಫೈಟ್!

ಭಾರತ ಮತ್ತು ಪಾಕಿಸ್ತಾನ ಒಂದು ದಶಕದಿಂದಲೂ ದ್ವಿಪಕ್ಷೀಯ ಸರಣಿ ಆಡಿಲ್ಲ

2012-13 ರಲ್ಲಿ, ಮತ್ತು ಭಾರತ ಕೊನೆಯದಾಗಿ 2005-06 ರಲ್ಲಿ ಪ್ರವಾಸ

2023 ರ ಏಷ್ಯಾ ಕಪ್ ಮತ್ತು 2025 ರ ಚಾಂಪಿಯನ್ಸ್ ಟ್ರೋಫಿ ನಿರಾಕರಣೆ

ಪಾಕಿಸ್ತಾನ 2023 ರ ODI ವಿಶ್ವಕಪ್‌ಗಾಗಿ ಭಾರತಕ್ಕೆ, ಇನ್ಮುಂದೆ ತಟಸ್ಥ ಸ್ಥಳ

ಭಾರತ, ಪಾಕಿಸ್ತಾನ್, ಅಫ್ಘಾನಿಸ್ತಾನ್, ಶ್ರೀಲಂಕಾ, ಬಾಂಗ್ಲಾದೇಶ್, ಯುಎಇ

2026ರ ಟಿ20 ವಿಶ್ವಕಪ್​ ಅನ್ನು ಗಮನದಲ್ಲಿರಿಸಿ ಚುಟುಕು ಸ್ವರೂಪದಲ್ಲಿ ಏಷ್ಯಾಕಪ್

ಸೆಪ್ಟೆಂಬರ್‌ನಲ್ಲಿ ನಡೆಯಬೇಕಿರುವ ಏಷ್ಯಾ ಕಪ್ 2025ರ ಸಮಸ್ಯೆ ಬಗೆಹರಿಯದಿದ್ದರೆ

ಢಾಕಾದಲ್ಲಿ ಸಭೆಯನ್ನು ನಡೆಸುವ ನಖ್ವಿ ಅವರ ಮೊಂಡುತನ ಪಂದ್ಯಾವಳಿ ಮೇಲೆ ಪರಿಣಾಮ

ಇನ್ನು ಕೊನೆಯ ಬಾರಿ 2023 ರಲ್ಲಿ ನಡೆದಿದ್ದ ಏಷ್ಯಾಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧ ಜಯಗಳಿಸಿತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 50 ರನ್‌ಗಳಿಗೆ ಆಲೌಟ್ ಆಗಿತ್ತು. ಟೀಂ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ಮಾಡಿ 6 ವಿಕೆಟ್‌ಗಳನ್ನು ಕಬಳಿಸಿದರೆ, ಹಾರ್ದಿಕ್ ಪಾಂಡ್ಯ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 6.1 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಪಂದ್ಯವನ್ನು ಗೆದ್ದುಕೊಂಡಿತು.

Shantha Kumari