ಸಿಲಿಕಾನ್ ಸಿಟಿಯಲ್ಲಿ ಕಂಬಳದ ಕಲರವ – ಕಂಬಳ ಕರೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಬಳದ ಕಲರವ ಜೋರಾಗಿದೆ. ಅರಮನೆ ಮೈದಾನದಲ್ಲಿ ಶನಿವಾರ ಹಾಗೂ ಭಾನುವಾರ ಕಂಬಳ ನಡೆಯುತ್ತಿದ್ದು, ಐತಿಹಾಸಿಕ ಬೆಂಗಳೂರು ಕಂಬಳಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಬೆಂಗಳೂರು ಕಂಬಳದ ಜೋಡು ಕರೆಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ರಾಜ ಮಹರಾಜ ಹೆಸರಿನ ಕಂಬಳ ಕರೆಗೆ ಅರ್ಚಕರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೈವ, ದೇವರ ಪ್ರಸಾದ ಕಂಬಳ ಕರೆಯ ನೀರಿಗೆ ಅರ್ಪಣೆ ಮಾಡಿದರು. ಯಾವುದೇ ಅಡ್ಡಿ ಆತಂಕ ಎದುರಾಗದಂತೆ ಪ್ರಾರ್ಥನೆ ಮಾಡಿದರು. ದೀಪ ಬೆಳಗಿಸಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕಂಬಳಕ್ಕೆ ಚಾಲನೆ ನೀಡಿದರು. ಗಂಗಾರತಿ ಮಾಡುವ ಮೂಲಕ ಕಂಬಳ ಕರೆಗೆ ಪೂಜೆ ಮಾಡಲಾಯಿತು.
ಇದನ್ನೂ ಓದಿ: ಶನಿವಾರದಿಂದ ಬೆಂಗಳೂರು ಕಂಬಳ – ಕಂಬಳ ಕೆರೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಚಾಲನೆ!
ಬಳಿಕ ಕಂಬಳದ ಪುನೀತ್ ರಾಜ್ ಕುಮಾರ್ ವೇದಿಕೆ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನವರು ಚಾಲನೆ ನೀಡಿದರು. ಈ ವೇಳೆ ಶಾಸಕ ಎಸ್.ಆರ್.ವಿಶ್ವನಾಥ್, ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಉಮೇಶ್ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ನಮ್ಮ ಕಂಬಳ ಘೋಷವಾಕ್ಯದೊಂದಿಗೆ ಸಿಲಿಕಾನ್ ಸಿಟಿಯಲ್ಲಿ ಕಂಬಳ ನಡೆಯುತ್ತಿದ್ದು, 200 ಜೋಡಿ ಕೋಣಗಳು ಓಟದ ರಂಗು ಬೀರಲು ಸಿದ್ಧವಾಗಿವೆ. ಶನಿವಾರ ಮಧ್ಯಾಹ್ನದ ನಂತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬಳಕ್ಕೆ ಚಾಲನೆ ಕೊಡಲಿದ್ದಾರೆ.
ಸಾರ್ವಜನಿಕರಿಗೆ ಉಚಿತ ಪ್ರವೇಶ
ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳದಲ್ಲಿ ಲಕ್ಷಾಂತರ ಜನರು ಭಾಗಿಯಾಗಲಿದ್ದಾರೆ. ಮಿಂಚಿನ ಓಟದಲ್ಲಿ ಓಡಿ ಪ್ರಶಸ್ತಿ ಮುಡಿಗೇರಿಸಲು 200 ಜೋಡಿ ಕೋಣಗಳು ಸಜ್ಜಾಗಿವೆ. ಕಂಬಳ ವೀಕ್ಷಿಸಲು ವಿವಿಐಪಿಗಳಿಗೆ ಫನ್ ವರ್ಲ್ಡ್ ಕಡೆಯಿಂದ ಪ್ರತ್ಯೇಕ ಎಂಟ್ರಿ ವ್ಯವಸ್ಥೆ ಮಾಡಲಾಗಿದೆ. ಅರಮನೆ ಮೈದಾನದ ಗೇಟ್ ನಂಬರ್ 1, 2, 3 ಹಾಗೂ 4ರಲ್ಲಿ ಸಾರ್ವಜನಿಕರಿಗೆ ಎಂಟ್ರಿ ಇರಲಿದೆ. ಮುಖ್ಯವಾಗಿ ಪ್ರವೇಶ ಉಚಿತವಾಗಿರಲಿದೆ. ಯಾವುದೇ ಟಿಕೆಟ್ ಇಲ್ಲದೆ ಉಚಿತವಾಗಿ ಪ್ರವೇಶ ಮಾಡಬಹುದು. ಸಾರ್ವಜನಿಕರು ಯಾವುದೇ ಪಾಸ್ ತೋರಿಸುವ ಅಗತ್ಯವೂ ಇಲ್ಲ. ಆದರೆ ವಿಐಪಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಂಬಳವನ್ನು ನೋಡಲು ಜನರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. 6 ರಿಂದ 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದು.
ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳ ನಡೆಯುತ್ತಿದ್ದು, ಸುಮಾರು ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆಯಿದೆ. ಗಣ್ಯರು, ಸೆಲೆಬ್ರಿಟಿಗಳು ಮತ್ತು ರಾಜಕೀಯ ನಾಯಕರಿಗೂ ಆಹ್ವಾನವಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ.
- ಸಂಚಾರ ನಿರ್ಬಂಧ, ಪಾರ್ಕಿಂಗ್ ವಿವರ ಹೀಗಿದೆ
- ಅರಮನೆ ರಸ್ತೆ: ಮೈಸೂರು ಬ್ಯಾಂಕ್ ವೃತ್ತದಿಂದ ವಸಂತನಗರ ಅಂಡರ್ ಪಾಸ್ ವರೆಗೆ.
- ಎಂವಿ ಜಯರಾಮ್ ರಸ್ತೆ: ಬಿಡಿಎ ಜಂಕ್ಷನ್ ಅರಮನೆ ರಸ್ತೆಯಿಂದ ಚಕ್ರವರ್ತಿ ಲೇಔಟ್‌ನಿಂದ ವಸಂತನಗರ ಅಂಡರ್‌ಪಾಸ್‌ನಿಂದ ಹಳೆ ಉದಯ ಟಿವಿ ಜಂಕ್ಷನ್‌ವರೆಗೆ. (ಎರಡೂ ದಿಕ್ಕುಗಳು)
- ಬಳ್ಳಾರಿ ರಸ್ತೆ: ಮೇಖ್ರಿ ವೃತ್ತದಿಂದ ಎಲ್‌ಆರ್‌ಡಿಇ ಜಂಕ್ಷನ್‌ವರೆಗೆ.
- ಕನ್ನಿಂಗ್‌ಹ್ಯಾಮ್ ರಸ್ತೆ: ಬಾಳೆಕುಂದ್ರಿ ಜಂಕ್ಷನ್‌ನಿಂದ ಲೆ ಮೆರಿಡಿಯನ್ ಅಂಡರ್‌ಪಾಸ್‌ವರೆಗೆ.
- ಮಿಲ್ಲರ್ಸ್ ರಸ್ತೆ: ಹಳೆ ಉದಯ ಟಿವಿ ಜಂಕ್ಷನ್‌ನಿಂದ ಎಲ್‌ಆರ್‌ಡಿಇ ಜಂಕ್ಷನ್‌ವರೆಗೆ.
- ಜಯಮಹಲ್ ರಸ್ತೆ: ಬೆಂಗಳೂರಿನ ಸುತ್ತಮುತ್ತಲಿನ ರಸ್ತೆಗಳು ಸೇರಿದಂತೆ ಜಯಮಹಲ್ ರಸ್ತೆ
ಈ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧ
ಅರಮನೆ ರಸ್ತೆ, ಜಯಮಹಲ್ ರಸ್ತೆ, ಎಂ.ವಿ.ಜಯರಾಮ್ ರಸ್ತೆ, ಸಿ.ವಿ.ರಾಮನ್ ರಸ್ತೆ, ವಸಂತನಗರ ರಸ್ತೆ, ಬಳ್ಳಾರಿ ರಸ್ತೆ, ತರಳಬಾಳು ರಸ್ತೆ, ರಮಣ ಮಹರ್ಷಿ ರಸ್ತೆ, ನಂದಿದುರ್ಗ ರಸ್ತೆ, ಮೌಂಟ್ ಕಾರ್ಮೆಲ್ ಕಾಲೇಜು ರಸ್ತೆ.
ನಗರದ ಮಧ್ಯ ಭಾಗದಲ್ಲಿ ದಟ್ಟಣೆ ಉಂಟಾಗದಂತೆ ಬೆಳಗ್ಗೆ ಮತ್ತು ಸಂಜೆ ವೇಳೆ ಭಾರೀ ವಾಹನಗಳ ಸಂಚಾರವನ್ನು ಸಹ ನಿಷೇಧಿಸಲಾಗಿದೆ. ಕರ್ನಾಟಕ ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಮೊದಲ ನಮ್ಮ ಕಂಬಳ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ.