197 ರನ್‌ಗಳಿಗೆ ಕಾಂಗರೂಗಳನ್ನು ಕಟ್ಟಿಹಾಕಿದ ಭಾರತ – ಕಪಿಲ್ ದೇವ್ ದಾಖಲೆ ಮುರಿದ ಅಶ್ವಿನ್

197 ರನ್‌ಗಳಿಗೆ ಕಾಂಗರೂಗಳನ್ನು ಕಟ್ಟಿಹಾಕಿದ ಭಾರತ – ಕಪಿಲ್ ದೇವ್ ದಾಖಲೆ ಮುರಿದ ಅಶ್ವಿನ್

ಇಂದೋರ್‌ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್‌ನಲ್ಲಿ ಮೊದಲ ದಿನ ಟೀಂ ಇಂಡಿಯಾವನ್ನು 109 ರನ್‌ಗಳಿಂದ ಕಟ್ಟಿಹಾಕಿದ ಕಾಂಗರೂ ಪಡೆ, ಎರಡನೇ ದಿನದಲ್ಲಿ ಹೆಚ್ಚು ರನ್ ಗಳಿಸಲಾಗದೇ ಕಂಗೆಟ್ಟಿದೆ. ಆಸೀಸ್ ಟೀಮ್ ಕೇವಲ 197 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್‌ ನ್ನು ಮುಗಿಸಿದೆ. ಮೊದಲ ದಿನದಾಟದಲ್ಲಿ ಜಡೇಜಾ ದಾಳಿಗೆ ನಲುಗಿದ್ದ ಆಸೀಸ್ ಪಡೆ, 2ನೇ ದಿನದಾಟದಲ್ಲಿ ವೇಗಿ ಉಮೇಶ್ ಯಾದವ್ ಹಾಗೂ ಅಶ್ವಿನ್ ಬೌಲಿಂಗ್ ಮುಂದೆ ಮಂಡಿಯೂರಿತು. ಸ್ಪಿನ್ ಮೋಡಿ ಮಾಡಿದ ಅಶ್ವಿನ್ 44 ರನ್‌ಗೆ 3 ವಿಕೆಟ್ ಕಬಳಿಸುವ ಮೂಲಕ ಕಾಂಗರೂ ಪಡೆಯನ್ನು ಕಟ್ಟಿಹಾಕಿದ್ರು. ಈ ಮೂರು ವಿಕೆಟ್‌ಗಳೊಂದಿಗೆ ರವಿ ಅಶ್ವಿನ್ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅದು ಕೂಡ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರ ದಾಖಲೆಯನ್ನು ಅಶ್ವಿನ್ ಹಿಂದಿಕ್ಕಿದ್ದಾರೆ.

ಇದನ್ನೂ ಓದಿ: ಮೊದಲದಿನವೇ ಟೀಮ್ ಇಂಡಿಯಾ ಆಟಗಾರರ ಪೆವಿಲಿಯನ್ ಪರೇಡ್ – 109 ರನ್‌ಗಳಿಗೆ ಭಾರತ ಆಲ್ ಔಟ್

ಆಸೀಸ್ ತಂಡ ತನ್ನ ಮೊದಲ ಇನ್ನಿಂಗ್ಸ್ ಅನ್ನು 197 ರನ್‌ಗಳಿಗೆ ಮುಗಿಸಿ, ಭಾರತ ವಿರುದ್ಧ 88 ರನ್‌ಗಳ ಮುನ್ನಡೆ ಸಾಧಿಸಿದೆ. ಮೊದಲ ದಿನದಾಟದಲ್ಲಿ 4 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾಗೆ ಅಶ್ವಿನ್ ಶಾಕ್ ಮೇಲೆ ಶಾಕ್ ನೀಡಿದ್ದರು. ಆಸೀಸ್ ತಂಡದ ಪ್ರಮುಖ 3 ವಿಕೆಟ್ ಕಬಳಿಸಿದ ಅಶ್ವಿನ್ ವಿಶೇಷ ದಾಖಲೆ ತನ್ನ ಹೆಸರಿಗೆ ಬರೆಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಕಪಿಲ್ ದೇವ್ ಹೆಸರಲ್ಲಿತ್ತು. ಭಾರತದ ಪರ 356 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕಪಿಲ್ ದೇವ್ ಒಟ್ಟು 687 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ಅತ್ಯಧಿಕ ವಿಕೆಟ್ ಪಡೆದ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ಇದೀಗ ರವಿಚಂದ್ರನ್ ಅಶ್ವಿನ್ 269ನೇ ಅಂತಾರಾಷ್ಟ್ರೀಯ ಪಂದ್ಯದಿಂದ ಒಟ್ಟು 689 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.

suddiyaana