ಅಶುತೋಷ್ ಅಬ್ಬರ ಶುರು- ಗಬ್ಬರ್ ಸಿಂಗ್ ಶಿಷ್ಯನ ದರ್ಬಾರ್
ಟೀಮ್ ಇಂಡಿಯಾಕ್ಕೆ ಎಂಟ್ರಿಯಾಗ್ತಾನಾ?

ಆಸೆ ಬಿಟ್ಟಿದ್ದ ಪಂದ್ಯವನ್ನೇ ಗೆಲ್ಲಿಸಿಕೊಟ್ಟ ರಣಧೀರ.. ಕಡೇ ಎರಡು ಓವರ್ಗಳಲ್ಲಿ ಕ್ರೀಸ್ನಲ್ಲಿ ನಿಂತು ತನ್ನ ಭುಜ ಬಲದ ಮೇಲೆಯೇ ನಂಬಿಕೆಯಿಟ್ಟು, ತಾನೇ ರಣತಂತ್ರ ರೂಪಿಸಿ ಮ್ಯಾಚ್ನ ಭವಿಷ್ಯವನ್ನೇ ಬದಲಿಸಿದ ಜಾದುಗಾರ.. ಇವನನ್ನು ಇನ್ನೂ ಯಾವ ಪದಗಳಿಂದ ಹೊಗಳಬೇಕೋ ಗೊತ್ತಿಲ್ಲ.. ಆದ್ರೆ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಶಿಷ್ಯ ಅಶುತೋಷ್ ಶರ್ಮಾ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಬ್ಬರಿಸಿದ ರೀತಿ, ಯಾವುದೇ ಅನುಭವಿ ಕ್ರಿಕೆಟ್ ಆಟಗಾರನ ಕೌಶಲ್ಯಕ್ಕಿಂತ ಕಮ್ಮಿ ಇರಲಿಲ್ಲ.. ಮತ್ತೊಮ್ಮೆ ಅಬ್ಬರಿಸಲು ಶುರು ಮಾಡಿ ಅಶುತೋಷ್ ಕಳೆದೊಂದು ವರ್ಷದಲ್ಲಿ ಇಂತಹ ಪಂದ್ಯಕ್ಕಾಗಿ ಕಾದುಕುಳಿತ್ತಿದ್ರು.
ಇದನ್ನೂ ಓದಿ: ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್! – ಇನ್ನುಮುಂದೆ ಪಿವಿಆರ್ ನಲ್ಲೂ ಕ್ರಿಕೆಟ್ ಪ್ರದರ್ಶನ?
ಲಕ್ನೋ ವಿರುದ್ಧದ ಡೆಲ್ಲಿ ಮ್ಯಾಚ್ ಮುಗಿದೋಯ್ತು ಅಂತ ಅರ್ಧದಲ್ಲೇ ಟಿವಿ ಆಫ್ ಮಾಡಿದವರು ಹಲವರು ಇರಬಹುದು.. ಆದ್ರೆ ನಂತರ ನೋಡಿದ್ರೆ ಮ್ಯಾಚ್ ಗೆದ್ದು ಬೀಗಿದೆ.. ಕಡೆಯ ಓವರ್ನಲ್ಲಿ ಗೆಲ್ಲೋದಿಕ್ಕೆ ಇದ್ದ ಅವಕಾಶವನ್ನು ಕೈಚೆಲ್ಲಿದ್ದು ರಿಷಬ್ ಪಂತ್ ಮಾಡಿಕೊಂಡ ಯಡವಟ್ಟಾದ್ರೆ.. ಸೋಲುವ ಪಂದ್ಯವನ್ನು ಬಾಚಿ ಡೆಲ್ಲಿಯ ಮಡಿಲಿಗೆ ತಂದು ಹಾಕಿದ್ದು ಮಾತ್ರ ಅಶುತೋಷ್ ಎಂಬ ದೈತ್ಯ ಪ್ರತಿಭೆ.. ಪಂದ್ಯ ಗೆಲ್ಲಲು ರಿಷಬ್ ಪಂತ್ಗೆ ಹಲವು ಅವಕಾಶಗಳಿದ್ದವು.. ಕಡೆಯ ಓವರ್ನ ಮೊದಲ ಎಸೆತದಲ್ಲೇ ಮೋಹಿತ್ ಶರ್ಮಾನನ್ನು ಸ್ಟಂಪ್ ಮಾಡುವ ಅದ್ಭುತ ಅವಕಾಶ ರಿಷಬ್ಗಿತ್ತು.. ಒಂದು ವೇಳೆ ಹಾಗೇನಾದರೂ ಮೋಹಿತ್ ಶರ್ಮಾ ಔಟಾಗಿರುತ್ತಿದ್ದರೆ, ಅಶುತೋಷ್ ಶರ್ಮಾನ ಅದ್ಭುತ ಸಾಧನೆಗೆ ಮೋಡವೇ ಕವಿಯುತ್ತಿತ್ತು.. ಆದ್ರೆ ಆಟದ ಜೊತೆ ಅದೃಷ್ಟವೂ ಸೇರಿಕೊಳ್ಳಬೇಕು ಎಂಬಂತೆ, ಅಶುತೋಷ್ಗೆ ತನ್ನ ಸಾಧನೆಯನ್ನು ಇಡೀ ದೇಶದ ಮುಂದಿಡಲು ಅದ್ಭುತ ವೇದಿಕೆ ವೈಜಾಕ್ನಲ್ಲಿ ನಡೆದ ಪಂದ್ಯದಲ್ಲಿ ಸೃಷ್ಟಿಯಾಗಿತ್ತು.. ಕೇವಲ 31 ಎಸೆತಗಳಲ್ಲಿ 61 ರನ್ ಗಳಿಸಿದ್ದ ಅಶುತೋಷ್ ಗೆಲುವಿನ ಕಿರೀಟವನ್ನು ಡೆಲ್ಲಿ ತಂಡಕ್ಕೆ ತೊಡಿಸಿದ್ದ.. 17 ಓವರ್ಗಳು ಮುಕ್ತಾಯವಾದ ವೇಳೆಗೆ 24 ಎಸೆತಗಳಲ್ಲಿ ಅಸುತೋಷ್ ಗಳಿಸಿದ್ದು 32 ರನ್ ಮಾತ್ರ.. ಆದ್ರೆ ಮುಂದಿನ ಏಳೇ ಏಳು ಎಸೆತಗಳಲ್ಲಿ ಆತ 34 ರನ್ ಗಳಿಸಿದ್ದ.. ಅಂದ್ರೆ ಒಂದು ಪಂದ್ಯ ಗೆಲ್ಲಬೇಕು ಎಂಬ ಛಲ ಹಾಗೂ ಅದಕ್ಕೆ ಆತ ಬಳಸಿದ ಬಾಹುಬಲ ಎಂತದ್ದು ಎನ್ನುವುದು ಅರ್ಥವಾಗುತ್ತದೆ.. ಅಶುತೋಷ್ ಸಾಮಾನ್ಯನಲ್ಲ.. ಇಷ್ಟಕ್ಕೂ ಐಪಿಎಲ್ನಲ್ಲಿ ಡೆಲ್ಲಿ ಪರ ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಅಶುತೋಷ್ ಹಿಂದಿನ ಶಕ್ತಿಯೇ ಗಬ್ಬರ್ ಸಿಂಗ್.. ಹೌದು.. ಶಿಖರ್ ಧವನ್ ಈ ಅಶುತೋಷ್ನ ಗುರು.. ಶಿಖರ್ ಧವನ್ ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ನ ಕ್ಯಾಪ್ಟನ್ ಆಗಿದ್ರು.. ಆಗಲೇ ಅಶುತೋಷ್ನ ಮೇಲೆ ಅಪಾರವಾದ ನಂಬಿಕೆ ಧವನ್ಗಿತ್ತು.. ನಿಮಗೆ ನೆನಪಿರಬಹುದು.. ಐಪಿಎಲ್ ನ ಪ್ರತಿಪಂದ್ಯವನ್ನು ಫಾಲೋ ಮಾಡುವ ಅಭಿಮಾನಿಗಳಿಗೆ ಸರಿಯಾಗಿ ಗೊತ್ತಿದೆ.
ಅಶುತೋಷ್ ಯಾವ ರೀತಿಯಲ್ಲಿ ಇಡೀ ಪಂದ್ಯದ ಗತಿಯನ್ನು ಏಕಾಂಗಿಯಾಗಿ ಬದಲಿಸಬಲ್ಲ ಎನ್ನುವುದು.. ಹೀಗಾಗಿಯೇ ನಿನ್ನೆ ಡೆಲ್ಲಿ ತಂಡ ವಿಕೆಟ್ಗಳ ಮೇಲೆ ವಿಕೆಟ್ ಕಳೆದುಕೊಳ್ಳುತ್ತಿದ್ದಾಗೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಶುತೋಷ್ ಎಂಟ್ರಿ ಕೊಟ್ಟಾಗ, ಈ ಹುಡುಗ ಇರೋವರೆಗೂ ಗೆಲ್ಲುವ ಕನಸು ಕಾಣಬಹುದು ಎಂಬ ರೀತಿಯಲ್ಲೇ ಅಭಿಮಾನಿಗಳು ಕಾಯ್ತಿದ್ದರು.. ಯಾಕಂದ್ರೆ ಕಳೆದ ಸೀಸನ್ನಲ್ಲಿ ಇದೇ ಅಶುತೋಷ್ ಗೆಲ್ಲಲು ಸಾಧ್ಯವಿಲ್ಲದ ಪಂದ್ಯಗಳನ್ನು ಗೆಲ್ಲಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನಪಟ್ಟಿದ್ದ.. ಅದರಲ್ಲೂ ಕಳೆದ ವರ್ಷ ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ ಕಡೆಯ ಓವರ್ನಲ್ಲಿ 29 ರನ್ಗಳು ಬೇಕಿದ್ದವು.. ಆಗ ಮೂರು ಸಿಕ್ಸರ್ಗಳೊಂದಿಗೆ ಒಟ್ಟು 25 ರನ್ಗಳಿಸಿದ್ದ ಇದೇ ಅಶುತೋಷ್.. ಪಂಜಾಬ್ ಪರವಾಗಿ ಶಶಾಂಕ್ ಸಿಂಗ್ ಜೊತೆಗೆ ಅಶುತೋಷ್ ಆಡಿದ್ದ ರೀತಿ, ಈ ಹುಡುಗನ ಭವಿಷ್ಯ ಗಟ್ಟಿಯಾಗಿದೆ ಎಂದು ತೋರಿಸಿತ್ತು.. ಅಂದು ಅಶುತೋಷ್ ಶರ್ಮಾ ಅವರು 15 ಬಾಲ್ಗೆ 33 ರನ್ ಹೊಡೆದರೂ ಗೆಲುವಿನ ನಗೆ ಬೀರಲು ಸಾಧ್ಯವಾಗಿರಲಿಲ್ಲ. ಇನ್ನು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಶಶಾಂಕ್ ಸಿಂಗ್ ಜೊತೆ ಸೇರಿ ಅದ್ಭುತ ಜೊತೆಯಾಟವಾಡಿದ್ದ ಅಶುತೋಷ್ ಶರ್ಮಾ, ಅಂದು 17 ಎಸೆತಗಳಲ್ಲಿ 31 ರನ್ ಹೊಡೆದು, ತಂಡವನ್ನು ಗೆಲುವಿನ ದಡ ಸೇರಿಸಿದ್ದ.. ಇಂತಹ ಅದ್ಭುತ ಪಂದ್ಯಗಳ ಮೂಲಕವೇ ಅಶುತೋಷ್ ಶರ್ಮಾ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದ.. ಕಳೆದ ಸೀಸನ್ನಲ್ಲಿ ಪಂಜಾಬ್ ಪರ ಮಿಂಚಿದ್ದ ಶಶಾಂಕ್ ಸಿಂಗ್ನನ್ನು ಉಳಿಸಿಕೊಂಡಿದ್ದ PBKS, ತಂಡದಲ್ಲಿ ಅಸುತೋಷ್ನನ್ನು ರಿಟೈನ್ ಮಾಡಿರಲಿಲ್ಲ.. ಹೀಗಾಗಿ ಡೆಲ್ಲಿ ಟೀಂ 3.8 ಕೋಟಿಗೆ ಬಿಡ್ ಮಾಡಿ ಖರೀದಿಸಿತ್ತು.. ಇದರ ನಡುವೆ ನಿರ್ಣಾಯಕ ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಲು ಸಾಧ್ಯವಾಗದ ಬಗ್ಗೆ ಅಶುತೋಷ್ಗೆ ಬೇಸರವಿತ್ತಂತೆ.. ಇದೇ ಕಾರಣಕ್ಕೆ ಕಳೆದೊಂದು ವರ್ಷದಿಂದ ಮ್ಯಾಚ್ ಫಿನಿಷ್ ಮಾಡೋದ್ರ ಬಗ್ಗೆಯೇ ವಿಪರೀತ ತಲೆಕೆಡಿಸಿಕೊಂಡು, ಅದಕ್ಕೆ ಪ್ರಾಕ್ಟೀಸ್ ಮಾಡುತ್ತಾ ಬಂದಿದ್ದ.. ಡೊಮೆಸ್ಟಿಕ್ ಟೂರ್ನಮೆಂಟ್ಗಳಲ್ಲೂ ಮ್ಯಾಚ್ ವಿನ್ನಿಂಗ್ ಕಡೆಗೆ ಹೆಚ್ಚು ಒತ್ತು ಕೊಟ್ಟಿದ್ದ.. ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದು ಶಿಖರ್ ಧವನ್.. ಟೀಂ ಇಂಡಿಯಾದ ಸ್ಫೋಟಕ ಓಪನರ್ ಆಗಿದ್ದ ಶಿಖರ್, ತನ್ನ ತಂಡದಲ್ಲಿ ಹಿಂದೆ ಆಡಿದ್ದ ಅಶುತೋಷ್ನ ಪ್ರತಿಭೆಯನ್ನು ಗುರುತಿಸಿದ್ರು.. ಹುಡುಗನ ತೋಳುಗಳಲ್ಲಿ ಶಕ್ತಿಯಿದೆ.. ಹೊಡೆಯುವ ಶೈಲಿಯೂ ಸಖತ್ತಾಗಿದೆ..
ಆದ್ರೆ ಆತನಿಗೆ ಬೇಕಿರೋದು ಮೆಂಟಲ್ ಸ್ಟ್ರೆಂತ್ ಅನ್ನೋದನ್ನು ಅರ್ಥ ಮಾಡಿಕೊಂಡಿದ್ದ ಶಿಖರ್, ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಹೇಗೆ ಆಡಬೇಕು ಎನ್ನುವುದರ ಬಗ್ಗೆಯೇ ಟಿಪ್ಸ್ ಕೊಡುತ್ತಿದ್ದರು.. ಬಿಗ್ ಶಾಟ್ಗೆ ಕೈಹಾಕಬೇಕಾದ ರೀತಿ.. ಅದರ ಜೊತೆಗೆ ಆಟವನ್ನು ಗೆಲ್ಲಿಸಿಕೊಳ್ಳಲು ಯೋಚಿಸಬೇಕಾದ ರೀತಿಯನ್ನೂ ತಿಳಿಹೇಳಿದ್ದರು.. ಇದೇ ಕಾರಣಕ್ಕೆ ಅಶುತೋಷ್ ನಿನ್ನೆ ಪಂದ್ಯ ಶ್ರೇಷ್ಠ ಪ್ರಶಸ್ತಿಯ ಗರಿಯನ್ನು ಶಿಖರ್ ಧವನ್ಗೆ ಅರ್ಪಿಸಿದ್ದಾರೆ.. ಶಿಖರ್ ಶಿಷ್ಯ ಈಗ ಟೀಂ ಇಂಡಿಯಾದ ಕದ ತಟ್ಟುವ ಹಂತಕ್ಕೆ ಬಂದು ನಿಂತಿದ್ದಾರೆ.. 26 ವರ್ಷದ ಅಶುತೋಷ್ ಎರಡು ಸೀಸನ್ನಲ್ಲಿ ಕ್ರೂಷಿಯಲ್ ಪಂದ್ಯಗಳಲ್ಲಿ ಆಡಿದ ರೀತಿ, ಈತನನ್ನು ಟೀಂ ಇಂಡಿಯಾದಲ್ಲೂ ಆಡಿಸಬಹುದಾ ಎಂಬ ಪ್ರಶ್ನೆಯನ್ನು ಬಹುಷಃ ಆಯ್ಕೆದಾರರ ಮನಸ್ಸಿನಲ್ಲೂ ಮೂಡಿಸಿರಬಹುದು.. ಲಕ್ನೋ ವಿರುದ್ಧದ ಪಂದ್ಯದಲ್ಲಿ ಮಿಂಚಿದ ರೀತಿಯಲ್ಲೇ ಈ ಸೀಸನ್ನ ಐಪಿಎಲ್ನಲ್ಲಿ ಅಶುತೋಷ್ ಆಡಬೇಕಿದೆ.. ಈತ ಭಾರತ ತಂಡಕ್ಕೆ ಒಳ್ಳೆಯ ಆಸ್ತಿ ಆಗೋದ್ರಲ್ಲಿ ಅನುಮಾನವೇ ಇಲ್ಲ..