ಇನ್ನು ಮುಂದೆ ಈ ರಾಜ್ಯದಲ್ಲೂ 100 ಯೂನಿಟ್ ವಿದ್ಯುತ್ ಉಚಿತ!
ರಾಜಸ್ಥಾನ: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ 200 ಯೂನಿಟ್ ವಿದ್ಯುತ್ ಉಚಿತ ನೀಡುವುದಾಗಿ ಗ್ಯಾರಂಡಿ ಕಾರ್ಡ್ ಹಂಚಿತ್ತು. ಇದೀಗ ರಾಜಸ್ಥಾನ ಸರ್ಕಾರ ಕೂಡ 100 ಯೂನಿಟ್‌ವರೆಗೆ ವಿದ್ಯುತ್ ಅನ್ನು ಉಚಿತವಾಗಿ ನೀಡಲು ಮುಂದಾಗಿದೆ.
ಈ ಬಗ್ಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. “ತಿಂಗಳಿಗೆ 100 ಯೂನಿಟ್‌ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಜನರು ಉಚಿತ ವಿದ್ಯುತ್ ಗಾಗಿ ಮುಂಗಡವಾಗಿ ಯಾವುದೇ ಬಿಲ್ ಪಾವತಿಸಬೇಕಾಗಿಲ್ಲ. ತಿಂಗಳಿಗೆ 100 ಯೂನಿಟ್‌ಗಿಂತ ಹೆಚ್ಚು ಬಳಕೆ ಮಾಡುವ ಕುಟುಂಬಗಳಿಗೆ ಮೊದಲ 100 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು, ಅಂದರೆ, ಎಷ್ಟೇ ಬಿಲ್ ಬಂದರೂ ಮೊದಲ 100 ಯೂನಿಟ್‌ಗೆ ಯಾವುದೇ ವಿದ್ಯುತ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 2,000 ಮುಖಬೆಲೆಯ ನೋಟು ರದ್ದು – 1 ವಾರದಲ್ಲಿ ಠೇವಣಿ, ವಿನಿಮಯ ಆಗಿದ್ದೆಷ್ಟು ಗೊತ್ತಾ?
ಮೇ ತಿಂಗಳಿನಲ್ಲಿ ವಿದ್ಯುತ್ ಬಿಲ್‌ಗಳಲ್ಲಿ ಇಂಧನ ಹೆಚ್ಚುವರಿ ಶುಲ್ಕದ ಬಗ್ಗೆ ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿತ್ತು. ಅದರ ಆಧಾರದ ಮೇಲೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹಣದುಬ್ಬರ ಪರಿಹಾರ ಶಿಬಿರಗಳನ್ನು ವೀಕ್ಷಿಸಿ ಸಾರ್ವಜನಿಕರೊಂದಿಗೆ ಮಾತನಾಡಿದಾಗ, ವಿದ್ಯುತ್ ಬಿಲ್ ನಲ್ಲಿ ಸ್ಲ್ಯಾಬ್ವಾರು ವಿನಾಯಿತಿಯಲ್ಲಿ ಸ್ವಲ್ಪ ಬದಲಾವಣೆ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಜನರಿಗೆ 100 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.
ವಿಶೇಷವಾಗಿ ಮಧ್ಯಮ ವರ್ಗದ ಜನರು, ತಿಂಗಳಿಗೆ 200 ಯೂನಿಟ್‌ವರೆಗೆ ವಿದ್ಯುತ್ ಬಳಸುವ ಗ್ರಾಹಕರಿಗೆ, ಮೊದಲ 100 ಯೂನಿಟ್ ವಿದ್ಯುತ್ ಉಚಿತ, ಜೊತೆಗೆ 200 ಯೂನಿಟ್‌ಗಳವರೆಗೆ ಸ್ಥಿರ ಶುಲ್ಕಗಳು, ಇಂಧನ ಹೆಚ್ಚುವರಿ ಶುಲ್ಕ ಮತ್ತು ಇತರ ಎಲ್ಲಾ ಶುಲ್ಕಗಳನ್ನು ಮನ್ನಾ ಮಾಡಲಾಗುತ್ತದೆ. ಅದನ್ನು ರಾಜ್ಯ ಸರ್ಕಾರದಿಂದ ಪಾವತಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.