ಸ್ವರ ಪುತ್ರ ಮಂಗಳೂರಿನ ಅಶ್ಮಿತ್ – ಸರಿಗಮಪ ಲಿಟಲ್ ಚಾಂಪ್ಸ್‌ನಲ್ಲಿ ಗೆದ್ದ ಕರಾವಳಿ ಪ್ರತಿಭೆ

ಸ್ವರ ಪುತ್ರ ಮಂಗಳೂರಿನ ಅಶ್ಮಿತ್ –  ಸರಿಗಮಪ ಲಿಟಲ್ ಚಾಂಪ್ಸ್‌ನಲ್ಲಿ ಗೆದ್ದ ಕರಾವಳಿ ಪ್ರತಿಭೆ

ಕನ್ನಡ ಕಿರುತೆರೆಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಮಂಗಳೂರಿನ ಅಶ್ಮಿತ್ ಗೆದ್ದು ಬೀಗಿದ್ದಾರೆ.  18 ವಾರಗಳ ಕಾಲ ತಮ್ಮ ಗಾಯನದ ಮೂಲಕ ಸಂಗೀತಪ್ರಿಯರ ಮನ ಗೆದ್ದಿದ್ದ ಮಂಗಳೂರಿನ ಅಶ್ಮಿತ್ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇದನ್ನೂ ಓದಿ:ಟಾಕ್ಸಿಕ್‌ಗೆ ಒಲಿದ ವರ‘ಲಕ್ಷ್ಮಿ’ – ಬುಕಿಂಗ್‌ನಲ್ಲೇ ಕೋಟಿ ಕೋಟಿ ಕಮಾಯಿ

ಮಧುರವಾದ ಕಂಠ.. ಗಾಯನದ ಜೊತೆ ವಯೊಲಿನ್ ವಾದನ. ವೇದಿಕೆಯಲ್ಲಿ ಹಾಡಲು ನಿಂತರೆ ಗೋಲ್ಡನ್ ಬಜಾರ್ ಗ್ಯಾರಂಟಿ. ಹೌದು. ಮಂಗಳೂರಿನ ಅಶ್ಮಿತ್ ನಿಜಕ್ಕೂ ಅದ್ಭುತ ಪ್ರತಿಭೆ.  ಗಾಯಕಿ ಇಂದು ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಮತ್ತಷ್ಟು ಪಳಗಿದ ಅಶ್ಮಿತ್‌ಗೆ ಅರ್ಹವಾಗಿಯೇ  ವಿಜೇತ ಟ್ರೋಫಿ ಸಿಕ್ಕಿದೆ. ಗೆಲುವಿನ ಕಿರೀಟದ ಜೊತೆ 20 ಲಕ್ಷ ರೂಪಾಯಿ ನಗದು ಬಹುಮಾನ ದೊರೆತಿದೆ. ಇನ್ನು ವೇದಿಕೆಯಲ್ಲಿ ಅಶ್ಮಿತ್ ಸ್ವರಸಾಧನೆಗೆ ತೀರ್ಪುಗಾರರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಬೆರಗಾದರು. ಜೊತೆಗೆ ವಿಜಯ್ ಪ್ರಕಾಶ್ ವೇದಿಕೆಯಲ್ಲಿಯೇ ಅಶ್ಮಿತ್‌ಗೆ ಸ್ವರಪುತ್ರ ಎಂದು ಅಭಿಮಾನದಿಂದ ಕರೆದರು.

ಮಂಗಳೂರಿನ ಮತ್ತೊಬ್ಬ ಪ್ರತಿಭಾವಂತ ಬಾಲಗಾಯಕ ಅಚಿಂತ್ಯ ರೈ  ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಅಚಿಂತ್ಯ ತಮ್ಮ ಮಿಮಿಕ್ರಿ ಮತ್ತು ಗಾಯನದ ಮೂಲಕ ಎಲ್ಲರ ಮನಗೆದ್ದ ಪ್ರತಿಭೆ. ಅಶ್ಮಿತ್‌ಗೆ ಪ್ರಬಲ ಪೈಪೋಟಿ ನೀಡಿದ ಅಚಿಂತ್ಯ ಮೊದಲ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಎರಡು ಹಂತಗಳಲ್ಲಿ ನಡೆದ ಅಂತಿಮ ಸಂಗೀತ ಸಮರದಲ್ಲಿ ಅಶ್ಮಿತ್ ಮತ್ತು ಅಚಿಂತ್ಯ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ನೇರ ಹಣಾಹಣಿ ಏರ್ಪಟ್ಟಿತ್ತು. ತೀರ್ಪುಗಾರರ ಮೆಚ್ಚುಗೆ ಜೊತೆಗೆ ವೀಕ್ಷಕರ ಮನ ಗೆದ್ದ ಅಶ್ಮಿತ್ ಗೆದ್ದರೆ, ಅಚಿಂತ್ಯ ರೈ ಮೊದಲ ರನ್ನರ್‌ಅಪ್ ಆದರು. ಅಚಿಂತ್ಯ ಟ್ರೋಫಿಯೊಂದಿಗೆ 15 ಲಕ್ಷ ರೂಪಾಯಿ ನಗದು ಬಹುಮಾನ ಪಡೆದರು.

ಮಹನ್ಯ ಗರು ಪಾಟೀಲ್ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದರು.  ಉತ್ತರ ಕರ್ನಾಟಕದ ಜಾನಪದ ಸೊಗಡು ಮತ್ತು ಶಾಸ್ತ್ರೀಯ ಗಾಯನದ ಮಿಶ್ರಣದ ಮೂಲಕ ಗಮನ ಸೆಳೆದ ಮಹನ್ಯ ಸೆಕೆಂಡ್ ರನ್ನರ್ ಅಪ್ ಆಗುವ ಮೂಲಕ ನಾಲ್ಕು ಲಕ್ಷ ರೂಪಾಯಿ ನಗದು ಬಹುಮಾನ ಪಡೆದರು.

ಇನ್ನು ಖ್ಯಾತ ನಟ ಶ್ರೀನಿವಾಸಮೂರ್ತಿ ಅವರ ಮೊಮ್ಮಗ ಹಾಗೂ ನಟ ನವೀನ್ ಕೃಷ್ಣ ಅವರ ಪುತ್ರ ಹುರುಷ್ ಕೂಡಾ ಫೈನಲ್‌ವರೆಗೆ ಬಂದಿದ್ದರು. ಮೊದಲ ಸುತ್ತಿನಲ್ಲಿ ಹಾಡಿದ ನಂತರ ಎರಡನೇ ಸುತ್ತು ಪ್ರವೇಶಿಸುವಲ್ಲಿ ವಿಫಲರಾದರು. ಇವರ ಜೊತೆ ಜಯಲಕ್ಷ್ಮಿ, ಅವ್ಯುಕ್ತ್ ಕೂಡಾ ಎರಡನೇ ಸುತ್ತು ಪ್ರವೇಶಿಸುವಲ್ಲಿ ವಿಫಲರಾದರು.

Sulekha