ಭಕ್ತರಿಗೆ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ನೀಡುವುದಿಲ್ಲ- ಬಸವಲಿಂಗ ಸ್ವಾಮೀಜಿ ಸ್ಪಷ್ಟನೆ

ಭಕ್ತರಿಗೆ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ನೀಡುವುದಿಲ್ಲ- ಬಸವಲಿಂಗ ಸ್ವಾಮೀಜಿ ಸ್ಪಷ್ಟನೆ

ವಿಜಯಪುರ: ಶತಮಾನದ ಸಂತನಿಗೆ ಭಕ್ತರು ಕಣ್ಣೀರಿನ ಮೂಲಕ ಅಂತಿಮ ವಿದಾಯ ಹೇಳಿದ್ದಾರೆ. ಶರಣರ ಗುಣ ಮರಣದಲ್ಲಿ ಕಾಣು ಎಂಬಂತೆ ನಡೆದಾಡುವ ದೇವರ ಅಂತಿಮ ಪಯಣದಲ್ಲಿ ಲಕ್ಷ ಲಕ್ಷ ಭಕ್ತರು ಸಿದ್ದೇಶ್ವರ ಶ್ರೀಗಳ ಗುಣಗಾನ ಮಾಡುತ್ತಾ ಭಾವಪೂರ್ಣ ನಮನ ಸಲ್ಲಿಸಿದ್ದಾರೆ. ಸಿದ್ದೇಶ್ವರ ಶ್ರೀಗಳ ಇಚ್ಚೆಯಂತೆ ಅಗ್ನಿಸ್ಪರ್ಷ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿತ್ತು. ಇದೀಗ ಜ್ಞಾನ ಯೋಗಾಶ್ರಮದಿಂದ ಭಕ್ತರಿಗೆ ಒಂದು ಸಂದೇಶ ರವಾನೆಯಾಗಿದೆ. ಯಾವುದೇ ಭಕ್ತರಿಗೆ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ನೀಡಲಾಗುವುದಿಲ್ಲ ಎಂದು ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಭಕ್ತರು ಬೇಕಾದರೆ ಹೊರಗಿನಿಂದ ವಿಭೂತಿಯನ್ನು ತಂದು ಅಂತ್ಯಕ್ರಿಯೆ ನಡೆಸಿದ ಜಾಗದಲ್ಲಿಟ್ಟು ಅದನ್ನೇ ಭಸ್ಮವೆಂದು ಭಾವಿಸಿ ಒಯ್ಯಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಬಾಲಕ ‘ಸಿದ್ದಗೊಂಡ’.. ‘ಶತಮಾನದ ಸಂತ’ನಾಗಿದ್ದು ಹೇಗೆ?

ಜ್ಞಾನಯೋಗಾಶ್ರಮದ ಆವರಣದಲ್ಲಿ ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ನಂತರ ಕನ್ನೇರಿ ಮಠದ ಸ್ವಾಮೀಜಿಗಳು ಚಿತಾಭಸ್ಮವನ್ನು ಭಕ್ತರಿಗೆ ನೀಡುವುದಾಗಿ ಹೇಳಿದ್ದರು. ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮವನ್ನು ಯಾರು ನದಿ ಹಾಗೂ ಸಾಗರದಲ್ಲಿ ವಿಸರ್ಜನೆ ಮಾಡಲು ಇಚ್ಛೆ ಪಡುತ್ತಾರೋ ಅವರು ಹೆಸರು ನೋಂದಾಯಿಸಲು ಹೇಳಿದ್ದರು. ಆದರೆ, ಬಸವಲಿಂಗ ಸ್ವಾಮೀಜಿ ಮಾತನಾಡಿ, ಭಕ್ತರಿಗೆ ಚಿತಾಭಸ್ಮವನ್ನು ನೀಡುವುದಿಲ್ಲ ಎಂದಿದ್ದಾರೆ. ಸಿದ್ದೇಶ್ವರ ಸ್ವಾಮೀಜಿಗಳ ಆಣತಿಯಂತೆ ನಾವು ಯಾವುದೇ ಚಿತಾಭಸ್ಮವನ್ನು ನೀಡುವುದಿಲ್ಲ. ಭಕ್ತರು ಬೇಕಾದರೆ ಹೊರಗಿನಿಂದ ವಿಭೂತಿಯನ್ನು ತಂದು ಅಂತ್ಯಕ್ರಿಯೆ ನಡೆಸಿದ ಜಾಗದಲ್ಲಿಟ್ಟು ಅದನ್ನೇ ಭಸ್ಮವೆಂದು ಭಾವಿಸಿ ಒಯ್ಯಬೇಕು. ಚಿತಾಭಸ್ಮವನ್ನು ಯಾವ ನದಿ, ಸಮುದ್ರದಲ್ಲಿ ವಿಸರ್ಜನೆ ಮಾಡಬೇಕೆಂಬುದರ ಕುರಿತು ಚರ್ಚೆ ಮಾಡುತ್ತೇವೆ. ಆಶ್ರಮದಲ್ಲಿರುವ ನಾವೆಲ್ಲಾ ಸ್ವಾಮೀಜಿಗಳು ಸೇರಿ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ. ಮೂರು ದಿನದ ಸರಳ ವಿಧಿ ವಿಧಾನಗಳ ಆಚರಣೆಯ ಮೂಲಕ ಚಿತಾಭಸ್ಮ ವಿಸರ್ಜನೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

suddiyaana