ಆಶಾ.. ನಿರಾಶಾ..- ನೋವು ನುಂಗಿ ಹಾಡಿನಲ್ಲೇ ಬದುಕಿದ ಗಾಯಕಿ ಆಶಾ ಭೋಸ್ಲೆ
ಆಶಾ ಭೋಸ್ಲೆ ಜೀವನದ ಪ್ರತಿ ತಿರುವಿನಲ್ಲೂ ನೋವಿನ ಕಥೆ

ಆಶಾ.. ನಿರಾಶಾ..- ನೋವು ನುಂಗಿ ಹಾಡಿನಲ್ಲೇ ಬದುಕಿದ ಗಾಯಕಿ ಆಶಾ ಭೋಸ್ಲೆಆಶಾ ಭೋಸ್ಲೆ ಜೀವನದ ಪ್ರತಿ ತಿರುವಿನಲ್ಲೂ ನೋವಿನ ಕಥೆ

ಭಾರತದ ಕಂಡ ಮಹಾನ್ ಗಾಯಕಿ ಆಶಾ ಭೋಸ್ಲೆ ಇನ್ನು ನೆನಪು ಮಾತ್ರ.  ಗಾನಕೋಗಿಲೆ ಆಶಾ ಭೋಸ್ಲೆ 92ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾಗಿದ್ದಾರೆ. ಆಶಾ ಬದುಕಿನ ಕಥೆ ಮುಗಿದರು ಅವರ ಹಾಡು, ಅವರ ಮಧುರ ಕಂಠ ಅವರ ಅಭಿಮಾನಿಗಳೆದೆಯಲ್ಲಿ ಸದಾ ಅಮರ.

ಭಾರತೀಯ ಸಿನಿಮಾ ಸಂಗೀತ ಕ್ಷೇತ್ರದ ಮಹಾನ್ ಗಾಯಕಿ ಆಶಾ ಭೋಸ್ಲೆ ಏಪ್ರಿಲ್ 12 ರಂದು ಕೋಟಿ ಕೋಟಿ ಅಭಿಮಾನಿಗಳನ್ನು ಅಗಲಿದ್ದಾರೆ. ಸಂಗೀತ ಲೋಕದ ಸರಸ್ವತಿ ಎಂದೇ ಪ್ರಸಿದ್ಧರಾದ ಲತಾ ಮಂಗೇಶ್ಕರ್ ಅವರ ಸಹೋದರಿ ಆಶಾ ಭೋಸ್ಲೆ. ಆಶಾ ಮನೆಯಲ್ಲಿ ಸಂಗೀತ ಲೋಕವೇ ಧರೆಗಿಳಿದಿತ್ತು. ಆಶಾ ಭೊಸ್ಲೆ ಅವರ ತಂದೆ ದೀನಾನಾಥ್ ಮಂಗೇಶ್ಕರ್, ಮರಾಠಿ ನಾಟಕದ ಖ್ಯಾತ ಗಾಯಕ, ನಟ, ನೃತ್ಯಗಾರರಾಗಿದ್ದರು. ಮಕ್ಕಳು ಚಿಕ್ಕವರಿರುವಾಗಲೇ ತಂದೆ ನಿಧನರಾದರು. ಮನೆಗೆ ಆಸರೆಯಾಗಿದ್ದ ತಂದೆ ನಿಧನವಾದಾಗ ಆಶಾಗೆ ಇನ್ನೂ 9 ವರ್ಷ ವಯಸ್ಸು. ಅಕ್ಕ ಲತಾ ಮಂಗೇಶ್ಕರ್ ಅವರು ಇಡೀ ಕುಟುಂಬದ ಜವಾಬ್ದಾರಿ ಹೆಗಲಿಗೆ ಏರಿಸಿಕೊಂಡರು. ಇಡೀ ಕುಟುಂಬಕ್ಕೆ ಬಳುವಳಿಯಾಗಿ ಬಂದಿದ್ದ ಗಾಯನದಿಂದಲೇ ಮನೆ ನಡೆಯುತ್ತಿತ್ತು. ಆಶಾ ಭೋಸ್ಲೆ ಸಹ ಮರಾಠಿ ರಂಗಭೂಮಿ ಬಳಿಕ ಸಿನಿಮಾಗಳಿಗೂ ಹಾಡಲು ಪ್ರಾರಂಭಿಸಿದರು. ತಮ್ಮ 15ನೇ ವಯಸ್ಸಿಗೆ ಆಶಾ ಭೊಸ್ಲೆ ಸಿನಿಮಾಗಳಲ್ಲಿ ಹಾಡಲು ಪ್ರಾರಂಭಿಸಿದ್ದು ಮಾತ್ರವೇ ಅಲ್ಲದೆ, ಬಹು ಬೇಗನೆ ಬೇಡಿಕೆಯನ್ನೂ ಪಡೆದುಕೊಂಡರು.

16 ವರ್ಷದ ಆಶಾ ತನಗೆ ಸಹಾಯ ಮಾಡುತ್ತಿದ್ದ 31 ವರ್ಷದ ಗಣಪತ್​ ರಾವ್ ಭೋಸ್ಲೆಗೆ ಮನಸೋತು ಹೋದರು. ಹೀಗಾಗಿ ತನ್ನ ಸಹಾಯಕ ಆಗಿದ್ದ ಗಣಪತ್ ರಾವ್ ಭೋಸ್ಲೆ ಜೊತೆ ಓಡಿ ಹೋಗಿ ಮದುವೆ ಆಗಿಬಿಟ್ಟರು, ಮನೆಯಲ್ಲಿ ಯಾರಿಗೂ ತಿಳಿಸದೆ ಓಡಿ ಹೋಗಿ ಮದುವೆಯಾದ ಆಶಾ ಜೀವನವೇ ಬದಲಾಗಿ ಹೋಗಿತ್ತು. ಅಲ್ಲಿಂದ ಅವರಿಗೆ ನರಕ ದರ್ಶನ ಏನು ಅನ್ನೋದರ ಅರಿವಾಗ ತೊಡಗಿತು. ಪತಿ ಮತ್ತು ಪತಿಯ ಮನೆಯರಿಂದ ಸತತ ಹಿಂಸೆ ಅನುಭವಿಸಿದರು ಆಶಾ ಭೋಸ್ಲೆ. ಕೊನೆಗೆ ಪತಿ ಗಣ್​ಪತ್ ರಾವ್ ಆಶಾ ಭೋಸ್ಲೆಯನ್ನು ಮಕ್ಕಳ ಸಮೇತ ಮನೆಯಿಂದ ಹೊರಗಟ್ಟಿದರು. ಕಂಕುಳಲ್ಲಿ ಇಬ್ಬರು ಪುಟ್ಟ ಮಕ್ಕಳು ಮತ್ತು ಹೊಟ್ಟೆಯಲ್ಲಿ ಒಂದು ಮಗುವನ್ನು ಇರಿಸಿಕೊಂಡು ಮತ್ತೆ ತಮ್ಮ ಮನೆಗೆ ಮರಳಿದರು ಆಶಾ. ದಯಾಮಯಿ ಅಕ್ಕ, ಲತಾ ಮಂಗೇಶ್ಕರ್ ತಂಗಿಯನ್ನು ಮತ್ತೆ ಮನೆಗೆ ಸೇರಿಸಿಕೊಂಡರು. ತಮ್ಮ ಜೀವನ ಕತೆಯನ್ನು ಈ ವಿಷಯ ಬರೆದುಕೊಂಡಿರುವ ಆಶಾ, ‘ನನ್ನ ಪತಿ ಒಬ್ಬ ಸ್ಯಾಡಿಸ್ಟ್ ಆಗಿದ್ದ, ವಿನಾಕಾರಣ ನೋವು ನೀಡುತ್ತಿದ್ದ, ಒಂದು ಸಮಯದಲ್ಲಿ ನಾನು ಆತ್ಮಹತ್ಯೆಗೆ ನಿರ್ಧರಿಸಿ ನಿದ್ದೆ ಮಾತ್ರೆಗಳನ್ನು ಸೇವಿಸಿದ್ದೆ, ಆಗ ನಾನು ನಾಲ್ಕು ತಿಂಗಳ ಗರ್ಭಿಣಿ ಆದರೆ ನಾನು ಸಾಯಲಿಲ್ಲ. ನನ್ನ ಮಕ್ಕಳ ಮೇಲಿನ ಪ್ರೀತಿ ನನ್ನನ್ನು ಬದುಕಿಸಿತು’ ಎಂದಿದ್ದಾರೆ. ನರಕ ನೋಡಿ ಬಂದಿದ್ದ ಆಶಾ ಭೋಸ್ಲೆಗೆ ಸಂಗೀತವೊಂದೇ ಆಸರೆಯಾಗಿತ್ತು.

ಮನದಲ್ಲಿ ನೋವಿದ್ದರೂ ಸಂಗೀತ ಸರಸ್ವತಿ ಆಶಾ ಕೈಬಿಡಲಿಲ್ಲ. ಸತತವಾಗಿ ಸಿನಿಮಾಗಳಿಗೆ ಹಾಡಿದರು. ಅವರೇ ಹೇಳಿಕೊಂಡಿರುವಂತೆ, ಅಕ್ಕ ಲತಾ ಹಾಗೂ ಆಶಾ ಅವರ ಧ್ವನಿ ಶೈಲಿ ಒಂದೇ ರೀತಿ ಇತ್ತಂತೆ. ಇದೇ ಕಾರಣಕ್ಕೆ ಆಶಾ ಅವರಿಗೆ ಯಾರೂ ಅವಕಾಶಗಳನ್ನು ನೀಡುತ್ತಿರಲಿಲ್ಲವಂತೆ. ಬಳಿಕ ಅವರು ಶೈಲಿ ಬದಲಿಸಿದ ಮೇಲೆ ಅವರಿಗೆ ಅವಕಾಶಗಳು ಬರಲು ಆರಂಭವಾದವಂತೆ. ‘ನನ್ನ ಅಕ್ಕ ನನಗಿಂತಲೂ ಬಹಳ ಪ್ರತಿಭಾವಂತೆ’ ಎಂದಿದ್ದರು ಆಶಾ ಭೋಸ್ಲೆ ಅವರಿಗೆ ಮೂವರು ಮಕ್ಕಳು. ಮೊದಲ ಮಗ ಹೇಮಂತ್ ಭೋಸ್ಲೆ ಪೈಲೆಟ್ ಆಗಿದ್ದರು ಬಳಿಕ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿ, 2015 ರಲ್ಲಿ ಕ್ಯಾನ್ಸರ್​​ನಿಂದ ನಿಧನ ಹೊಂದಿದರು. ಮಗಳು ವರ್ಷಾ 2012 ರಲ್ಲಿ ಆತ್ಮಹತ್ಯೆ ಮಾಡಿಕೊಂಡು ನಿಧನ ಹೊಂದಿದರು. ಅವರು ಪತ್ರಕರ್ತೆಯಾಗಿ, ಸಂಗೀತಗಾರ್ತಿಯಾಗಿದ್ದರು. ಆಶಾ ಅವರ ಕೊನೆಯ ಪುತ್ರ ಆನಂದ್ ಭೋಸ್ಲೆ. ಇವರು ಕೊನೆಯ ವರೆಗೂ ಅಮ್ಮನ ಜೊತೆಗಿದ್ದರು, ಅಮ್ಮನ ಪರ್ಸಲನ್ ಅಸಿಸ್ಟೆಂಟ್, ಕೇರ್ ಟೇಕರ್ ಎಲ್ಲವೂ ಆಗಿದ್ದರು.

1980 ರಲ್ಲಿ ಆಶಾ ಭೋಸ್ಲೆ ಅವರು ಖ್ಯಾತ ಸಂಗೀತ ನಿರ್ದೇಶಕ ಆರ್​​ಡಿ ಬರ್ಮನ್ ಅವರನ್ನು ವಿವಾಹವಾದರು. ಬರ್ಮನ್ ಅವರು ಆಶಾ ಅವರಿಗಿಂತಲೂ ಆರು ವರ್ಷ ಕಿರಿಯರಾಗಿದ್ದರು. ಇವರ ವಿವಾಹಕ್ಕೆ ಬರ್ಮನ್ ಅವರ ತಾಯಿ ತೀವ್ರ ವಿರೋಧ ಮಾಡಿದ್ದರು. ಆದರೂ ಇಬ್ಬರು ಮದುವೆ ಆದರು. ಇಬ್ಬರಿಗೂ ಇದು ಎರಡನೇ ಮದುವೆ ಆಗಿತ್ತು. ಬರ್ಮನ್ ಅವರು 1994 ರಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಬರ್ಮನ್ ಕೊನೇ ದಿನಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿ ಬಳಲಿದರು. ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡರೂ ಸಹ ಆಶಾ ಭೋಸ್ಲೆ ಹಾಡು ನಿಲ್ಲಿಸಲಿಲ್ಲ ಅವರ ಅದ್ಭುತ ಕಂಠಕ್ಕೆ ಅವಕಾಶಗಳು ಕಡಿಮೆ ಆಗಲೇ ಇಲ್ಲ. ತಮ್ಮ 90ರ ವಯಸ್ಸಿನಲ್ಲೂ ಸಹ ಆಶಾ ಭೋಸ್ಲೆ ಅವರು ಲೈವ್ ಸಿಂಗಿಂಗ್ ಶೋ ನೀಡುತ್ತಿದ್ದರು. ಗಂಟೆಗಳ ಕಾಲ ವೇದಿಕೆ ಮೇಲೆ ನಿಂತು ಹಾಡುತ್ತಿದ್ದರು.

ಆಶಾ ಅವರ ಗಾಯನಕ್ಕೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಎರಡು ರಾಷ್ಟ್ರಪ್ರಶಸ್ತಿ, ಜೀವಮಾನ ಸಾಧನೆ ಸೇರಿ ಸುಮಾರು 10 ಫಿಲಂಫೇರ್ ಪ್ರಶಸ್ತಿ, 17 ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ, ಹಲವಾರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಹಲವಾರು ಪ್ರಶಸ್ತಿ, ಗೌರವಗಳು ಅವರಿಗೆ ಸಂದಿವೆ. ಪದ್ಮ ವಿಭೂಷಣ, ಮಹಾರಾಷ್ಟ್ರ ಭೂಷಣ್, ಗ್ರಾಮಿ ಜೀವಮಾನ ಸಾಧನೆ ಪ್ರಶಸ್ತಿ ಇನ್ನೂ ಹಲವಾರು ಗೌರವಗಳು ಅವರಿಗೆ ಲಭಿಸಿವೆ.

ಇನ್ನೂ ಒಂದು ವಿಶೇಷವೆಂದರೆ, ಆಶಾ ಭೋಸ್ಲೆ ಅವರ ಸಹೋದರಿ ಲತಾ ಮಂಗೇಶ್ಕರ್ ಕೂಡ 92ನೇ ವಯಸ್ಸಿನಲ್ಲಿ, ಅದೇ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಆಶಾ ಭೋಸ್ಲೆ ತಮ್ಮ 92 ನೇ ವಯಸ್ಸಿನಲ್ಲಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು.

Sulekha