ಊರಿಗೆ ತೆರಳಲು ಬಸ್‌ ಇಲ್ಲವೆಂದು ತಾನೇ ಸರ್ಕಾರಿ ಬಸ್ ಚಲಾಯಿಸಿಕೊಂಡು ಹೋದ ಭೂಪ!

ಊರಿಗೆ ತೆರಳಲು ಬಸ್‌ ಇಲ್ಲವೆಂದು ತಾನೇ ಸರ್ಕಾರಿ ಬಸ್ ಚಲಾಯಿಸಿಕೊಂಡು ಹೋದ ಭೂಪ!

ಊರಿಗೆ ತೆರಳಲು ನಾವು ಬಸ್‌ ಗಾಗಿ ಕಾಯುತ್ತೇವೆ. ಬಸ್‌ ಸಮಯಕ್ಕೆ ಸರಿಯಾಗಿ ಹೊರಟಿಲ್ಲವೆಂದರೆ ಡ್ರೈವರನ್ನು ಗೊಣಗುತ್ತಾ ಕೂರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಊರಿಗೆ ಬಸ್‌ ಇಲ್ಲವೆಂದು ನಿಲ್ದಾಣದಲ್ಲಿ ನಿಲ್ಲಿಸಿದ್ದ ಸಾರಿಗೆ ಸಂಸ್ಥೆಯ ಬಸ್ಸನ್ನೇ ಚಲಾಯಿಸಿಕೊಂಡು ಹೋಗಿದ್ದಾನೆ.

ಈ ಘಟನೆ ನಡೆದಿದ್ದು ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಬಸ್ ನಿಲ್ದಾಣದಲ್ಲಿ. ಔರಾದ್ ತಾಲೂಕಿನ ಕರಂಜಿ ಗ್ರಾಮದ ಯಶಪ್ಪ ಸೂರ್ಯವಂಶಿ ಎನ್ನುವ ವ್ಯಕ್ತಿ ಬೆಳಗ್ಗೆಯಿಂದ ನಿಲ್ದಾಣದಲ್ಲಿ ಕುಳಿತರೂ ತನ್ನ ಊರಿಗೆ ಹೋಗಲು ಬಸ್‌ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತಿದ್ದ ಆತ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಸನ್ನೇ ಚಲಾಯಿಸಿಕೊಂಡು ಹೋಗಿದ್ದಾನೆ. ಬಳಿಕ ನಿಲ್ದಾಣದಲ್ಲಿದ್ದ ಹೊರವಲಯದ ಡಿವೈಡರ್‌ ಮೇಲೆ ಹತ್ತಿಸಿದ್ದಾನೆ.

ಇದನ್ನೂ ಓದಿ: ಶವಗಳ ನಡುವೆ ಮಿಡಿಯುತ್ತಿತ್ತು ಹೃದಯ.. ತಂದೆಯ ನಂಬಿಕೆ ಹುಸಿಯಾಗಲಿಲ್ಲ – ಪುತ್ರನನ್ನ ಕಾಪಾಡಿದ ಅಪ್ಪ  

ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕರು ನಿಲ್ದಾಣದಲ್ಲಿ ಎಂಟ್ರಿ ಮಾಡಿಕೊಂಡು ಹೋಗಿ ಬರುವ ಸಮಯದಲ್ಲಿ ಈ ಘಟನೆಯಾಗಿದೆ. ಕುಡಿದ ಮತ್ತಿನಲ್ಲಿ ಯಶಪ್ಪ ಬಸ್ ಚಲಾಯಿಸಿದ್ದು, ಬಸ್‍ನಲ್ಲಿರುವ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈತ ಬಸ್ಸನ್ನು ಕ್ರೂಸರ್ ವಾಹನಕ್ಕೆ ಢಿಕ್ಕಿ ಹೊಡೆದು ನಂತರ ಡಿವೈಡರ್ ಮೇಲೆ ಹತ್ತಿಸಿದ್ದಾನೆ.

ಯಶಪ್ಪ ಸೂರ್ಯವಂಶಿ ಇಟಂಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಸೋಮವಾರ ಬಸ್ ನಿಲ್ದಾಣಕ್ಕೆ ಬಂದು ಬಸ್ ಗಾಗಿ ಕಾದರೂ ಬಸ್ ಸಿಗದೆ ಸಾರಿಗೆ ಬಸ್ ಚಲಾಯಿಸಿದ್ದಾನೆ. ಡಿವೈಡರ್ ಗೆ ಬಸ್ ಡಿಕ್ಕಿಯಾಗುತ್ತಿದ್ದಂತ್ತೆ ಯಶಪ್ಪ ಸೂರ್ಯವಂಶಿ ಓಡಿ ಹೋಗುವಾಗ ಸಾರ್ವಜನಿಕರ ಸಹಾಯದಿಂದ ಸುನೀಲ್ ಕುಮಾರ್ ಆತನನ್ನು ಹಿಡಿದು ಔರಾದ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

suddiyaana