ಸಂಸತ್ತಿನಲ್ಲಿ ಮೋದಿ & ಅದಾನಿ ವಿರುದ್ಧ ಪ್ರಶ್ನೆ ಕೇಳಲು ಲಂಚ ಸ್ವೀಕಾರ – ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಗಂಭೀರ ಆರೋಪ

ಸಂಸತ್ತಿನಲ್ಲಿ ಮೋದಿ & ಅದಾನಿ ವಿರುದ್ಧ ಪ್ರಶ್ನೆ ಕೇಳಲು ಲಂಚ ಸ್ವೀಕಾರ – ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಗಂಭೀರ ಆರೋಪ

ಪ್ರಶ್ನೆ ಮೇಲೆ ಪ್ರಶ್ನೆ ಹಾಕುತ್ತಾ ಕೇಂದ್ರ ಸರ್ಕಾರದ ವಿರುದ್ಧ ಸದಾ ಬೆಂಕಿ ಉಗುಳುವ ನಾಯಕಿ ಮಹುವಾ ಮೊಯಿತ್ರಾ. ಟಿಎಂಸಿ ಪಕ್ಷದ ಫೈರ್ ಬ್ರಾಂಡ್ ಅಂತಾನೇ ಕರೆಸಿಕೊಳ್ಳುವ ಮೊಯಿತ್ರಾ ರಾಷ್ಟ್ರ ರಾಜಕಾರಣದಲ್ಲಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಸಂಸತ್ ಅಧಿವೇಶನ ಇದ್ದರಂತೂ ಮೊಯಿತ್ರಾ ಭಾಷಣಕ್ಕೆ ಸದನವೇ ಕಂಪಿಸಿಬಿಡುತ್ತೆ. ಏಟಿಗೆ ಎದಿರೇಟು, ಸೇರಿಗೆ ಸವ್ವಾಸೇರು ಎನ್ನುತ್ತಾ ಆಡಳಿತ ಪಕ್ಷವನ್ನ ಇಕ್ಕಟ್ಟಿಗೆ ಸಿಲುಕಿಸುವಂಥ ವಾಕ್ ಚಾತುರ್ಯ ಮೊಯಿತ್ರಾ ಅವರಲ್ಲಿದೆ. ಆದರೆ ಈಗ ಇದೇ ಗಟ್ಟಿಧ್ವನಿಯ ಹಿಂದೆ ಝಣಝಣ ಕಾಂಚಾಣ ಇತ್ತು ಅನ್ನೋ ಬಾಂಬ್ ಸಿಡಿದಿದೆ. ಲಂಚ ಪಡೆದು ಸದನದಲ್ಲಿ ಪ್ರಶ್ನೆಗಳನ್ನ ಕೇಳ್ತಾರೆ ಅಂತಾ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸ್ಫೋಟಕ ಆರೋಪ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದ ಸಂಸದೆ ಮಹುವಾ ಮೊಯಿತ್ರಾ. ಸದನದ ಒಳಗೂ ಸದನದ ಹೊರಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಮೊಯಿತ್ರಾ ವಿರುದ್ಧವೇ ಈಗ ಗಂಭೀರ ಆರೋಪ ಕೇಳಿ ಬಂದಿದೆ. ಗೌತಮ್ ಅದಾನಿ ಸಮೂಹದ ವಿರುದ್ಧ ಹಾಗೂ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರಶ್ನೆ ಎತ್ತಲು ಹಣ ಪಡೆದಿದ್ದಾರೆ ಎನ್ನಲಾಗಿದೆ. ಜಾರ್ಖಂಡ್​ನ ಗೊಡ್ಡ ಕ್ಷೇತ್ರದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಈ ಆರೋಪ ಮಾಡಿದ್ದು ಲೋಕಸಭಾ ಸ್ಪೀಕರ್​ಗೂ ದೂರು ನೀಡಿದ್ದಾರೆ.

ಇದನ್ನೂ ಓದಿ : 20ಕ್ಕೂ ಹೆಚ್ಚು ಶಾಸಕರೊಂದಿಗೆ ಮೈಸೂರಿಗೆ ಟ್ರಿಪ್ ಪ್ಲಾನ್!‌ – ಸಚಿವ ಸತೀಶ್‌ ಜಾರಕಿಹೊಳಿಗೆ ಶಾಕ್‌ ಕೊಟ್ಟ ಹೈಕಮಾಂಡ್‌!

ಸದನದಲ್ಲಿ ಪ್ರಶ್ನೆ ಕೇಳಲು ಉದ್ಯಮಿಯೊಬ್ಬರಿಂದ ಹಣ ಪಡೆದಿರುವುದಾಗಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಗಂಭೀರ ಆರೋಪ ಮಾಡಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಪತ್ರ ಬರೆದಿದ್ದಾರೆ. ಉದ್ಯಮಿ ದರ್ಶನ್ ಹಿರಾನಂದಾನಿರಿಂದ ಹಣ ಪಡೆದಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಕ್ಷಣದಿಂದಲೇ ಮೊಯಿತ್ರಾ ಅವರನ್ನ ಸಂಸತ್ತಿನಿಂದ ಅಮಾನತಿನಲ್ಲಿಡಬೇಕೆಂದು ಆಗ್ರಹಿಸಿದ್ದಾರೆ.    ಮೊಯಿತ್ರಾ ಅವರು ಸದನದಲ್ಲಿ ಉದ್ಯಮಿಯೊಬ್ಬರ ಕಂಪನಿ ಪರವಾಗಿ ಪ್ರಶ್ನೆ ಕೇಳಿದ್ದಾರೆ. 2019ರಿಂದ 2023ರ ನಡುವೆ ಸಂಸದೆ ಮೊಯಿತ್ರಾ ಕೇಳಿದ ಪ್ರಶ್ನೆಗಳಿಗೆ ಹಣ ಪಡೆದಿದ್ದಾರೆ. 61 ಪ್ರಶ್ನೆಗಳ ಪೈಕಿ 50 ಪ್ರಶ್ನೆಗಳನ್ನ ಉದ್ಯಮಿಯೊಬ್ಬರ ಕಂಪನಿ ಪರವಾಗಿ ಕೇಳಿದ್ದಾರೆ.ಇದಕ್ಕಾಗಿ ಲಂಚದ ರೂಪದಲ್ಲಿ ಹಣ ಮತ್ತು ಉಡುಗೊರೆಗಳನ್ನು ಪಡೆದುಕೊಂಡಿದ್ದಾರೆ. 2 ಕೋಟಿ ರೂಪಾಯಿ ಮತ್ತು ದುಬಾರಿ ಐ-ಫೋನ್‌ನಂತಹ ಉಡುಗೊರೆಗಳನ್ನು ಪಡೆದಿದ್ದಾರೆ. ಇನ್ನು ಚುನಾವಣೆಯಲ್ಲಿ ಸ್ಪರ್ಧಿಸಲು 75 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಸರ್ಕಾರವನ್ನು ಟೀಕಿಸಲೆಂದೇ ಮಹುವಾ ಮೊಯಿತ್ರಾ ಅವರು ಸದನದಲ್ಲಿ ಪ್ರಶ್ನೆ ಕೇಳಿದ್ದಾರೆ. ಎಲ್ಲ ದಾಖಲೆ ಮತ್ತು ಮಾಹಿತಿಯನ್ನು ಉದ್ಯಮಿಗಳೊಂದಿಗೆ ಸಂಸದೆ ಹಂಚಿಕೊಂಡಿದ್ದಾರೆ. ಇದು ಕ್ರಿಮಿನಲ್ ಪಿತೂರಿಯಾಗಿದ್ದು, ಸಂವಿಧಾನ ನೀಡಿದ ಸವಲತ್ತು & ಹಕ್ಕಿನ ಉಲ್ಲಂಘನೆಯಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 120A ಪ್ರಕಾರ ಇದು ಕ್ರಿಮಿನಲ್ ಅಪರಾಧ ಎಲ್ಲಾ ದಾಖಲೆಗಳನ್ನೂ ಪತ್ರದೊಂದಿಗೆ ಲಗತ್ತಿಸಿರುವುದಾಗಿ ಪತ್ರದಲ್ಲಿ ದುಬೆ ಉಲ್ಲೇಖಿಸಿದ್ದಾರೆ.

ಹಾಗೇ ಮಹುವಾ ವಿರುದ್ಧ ತನಿಖಾ ಸಮಿತಿಯನ್ನು ರಚಿಸಬೇಕು ಮತ್ತು ಸಂಸತ್ತಿನಿಂದ ತಕ್ಷಣವೇ ಅಮಾನತುಗೊಳಿಸಬೇಕು ಎಂದು ಸ್ಪೀಕರ್​ಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಆದ್ರೆ ಈ ಆರೋಪವನ್ನ ಅಲ್ಲಗಳೆದಿರುವ ಮೊಯಿತ್ರಾ ತಾನು ಯಾವುದೇ ರೀತಿಯ ವಿಚಾರಣೆಗೂ ಸಿದ್ಧ ಎಂದು ತಿರುಗೇಟು ನೀಡಿದ್ದಾರೆ. ಈ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ತಮ್ಮ ಮೇಲಿನ ಆರೋಪಕ್ಕೆ ಸಿಬಿಐ ತನಿಖೆಗೂ ತಾವು ಸಿದ್ಧ. ನಕಲಿ ಪದವೀಧರ ಮತ್ತು ಇತರ ಬಿಜೆಪಿ ದಿಗ್ಗಜರ ವಿರುದ್ಧ ಬಾಕಿ ಉಳಿದಿರುವ ಸಾಂವಿಧಾನಿಕ ಸವಲತ್ತುಗಳ ಉಲ್ಲಂಘನೆ ಪ್ರಕರಣವನ್ನು ಮೊದಲು ವಿಚಾರಣೆ ನಡೆಸಲಿ. ಬಳಿಕ ಸ್ಪೀಕರ್ ಅವರು ನನ್ನ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲಿ. ಜೊತೆಗೆ ಅದಾನಿ ಹಗರಣದಲ್ಲಿ ಇಡಿ ಮತ್ತು ಇತರ ತನಿಖಾ ಸಂಸ್ಥೆಗಳು ಎಫ್‌ಐಆರ್ ದಾಖಲಿಸಲು ನಾನು ಕಾಯುತ್ತಿದ್ದೇನೆ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ. ಹಿರಾನಂದನಿ ಗ್ರೂಪ್ ಕೂಡ ಈ ಆರೋಪಗಳನ್ನು ತಳ್ಳಿಹಾಕಿದೆ.

ಮೊಯಿತ್ರಾ ಹೀಗೆ ಹಲವು ಬಾರಿ ಸಂಸತ್ತು ಹಾಗೂ ಸಂಸತ್ತಿನ ಹೊರಗೂ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಲೇ ಇದ್ದಾರೆ. ಅದಾನಿ ಗ್ರೂಪ್ ವಿರುದ್ಧವೂ ಹರಿಹಾಯುತ್ತಿದ್ದಾರೆ. ಆದರೆ ನಿಶಿಕಾಂತ್ ದುಬೆ ಈಗ ಹಣ ಪಡೆದು ಆರೋಪ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಅಸಲಿಗೆ ಹಣ ಪಡೆದು ಸಂಸತ್ತಿನಲ್ಲಿ ಪ್ರಶ್ನೆ ಮಾಡೋದು ಹೊಸದೇನಲ್ಲ. ಇದು ಅತ್ಯಂತ ಗಂಭೀರ ಆರೋಪವಾಗಿದ್ದು, 2005ರಲ್ಲಿ ಇದೇ ಪ್ರಕರಣದಲ್ಲಿ ಹಲವು ಸದಸ್ಯರು ಸದಸ್ಯತ್ವ ಕಳೆದುಕೊಂಡಿದ್ದರು.

2005ರಲ್ಲಿ ಕೋಬ್ರಾಪೋಸ್ಟ್ ಎಂಬ ಆನ್‌ಲೈನ್ ಸುದ್ದಿಸಂಸ್ಥೆಯಿಂದ ಕಾರ್ಯಾಚರಣೆ ನಡೆದಿದ್ದು, ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಪ್ರಶ್ನೆಗಳನ್ನ ಕೇಳಲು ಹಣ ಸ್ವೀಕರಿಸಿರೋದು ಬಯಲಾಗಿತ್ತು. 11 ಸಂಸದರು ಲಂಚ ಪಡೆಯುತ್ತಿರುವ ವಿಡಿಯೋವನ್ನ ಕೋಬ್ರಾಪೋಸ್ಟ್ ಬಹಿರಂಗಪಡಿಸಿತ್ತು. 11 ಸಂಸದರ ಪೈಕಿ ಆರು ಸಂಸದರು ಬಿಜೆಪಿಯವಾರಗಿದ್ದು, ಮೂವರು ಸಂಸದರು ಬಹಿಜನ ಸಮಾಜವಾದಿ ಪಕ್ಷದವರಾಗಿದ್ರು. ಹಾಗೆಯೇ ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಒಬ್ಬರು ಸಂಸದರು ಕೂಡ ಇದ್ರಲ್ಲಿ ಶಾಮೀಲಾಗಿದ್ರು. ಅಂದಿನ ಲೋಕಸಭೆ ಸ್ಪೀಕರ್ ಪವನ್ ಬನ್ಸಾಲ್ ನೇತೃತ್ವದಲ್ಲಿ ಈ ಬಗ್ಗೆ ತನಿಖೆಯಾಗಿತ್ತು. ಕೇವಲ 23 ದಿನಗಳಲ್ಲಿ ವರದಿ ಬಂದಿದ್ದು, ಸಂಸದರನ್ನ ಅಮಾನತು ಮಾಡಲಾಗಿತ್ತು. ಸದ್ಯ ಮೊಯಿತ್ರಾ ಅವರು ಹಣ ಪಡೆದಿದ್ದು ಸಾಬೀತಾದ್ರೆ ಅವ್ರ ಮೇಲೂ ಸಹ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಹಾಗೇನಾದ್ರೂ ಆರೋಪ ಸಾಬೀತಾದ್ರೆ ಟಿಎಂಸಿ ಸೇರಿದಂತೆ ವಿಪಕ್ಷಗಳು ಮೊಯಿತ್ರಾ ಬೆನ್ನಿಗೆ ನಿಲ್ಲುವುದು ಕಷ್ಟ ಸಾಧ್ಯ. ಹೀಗಾಗಿ ಸಂಸತ್ ಸ್ಥಾನವನ್ನ ಕಳೆದುಕೊಂಡ್ರೂ ಅಚ್ಚರಿ ಇಲ್ಲ.

Shantha Kumari