ಇಂದು ಆಪ್ ನಿಂದ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಲಿರುವ ಕೇಜ್ರಿವಾಲ್
ಜನರ ಅಭಿಪ್ರಾಯದ ಆಧಾರದ ಮೇಲೆ ಅಭ್ಯರ್ಥಿ ಹೆಸರು ಘೋಷಣೆ
ಅಹಮದಾಬಾದ್: ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಆಮ್ ಆದ್ಮಿ ಪಕ್ಷದ (aap) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇಂದು ಘೋಷಿಸಲಿದ್ದಾರೆ ಎಂದು ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ ಚುನಾವಣೆಗೆ ದಿನಾಂಕ ನಿಗದಿ: ಡಿ. 1 ಹಾಗೂ 5ಕ್ಕೆ ಮತದಾನ
ರಾಜ್ಯದ ಜನರು ಪಕ್ಷಕ್ಕೆ ಸಲ್ಲಿಸುವ ಅಭಿಪ್ರಾಯದ ಆಧಾರದ ಮೇಲೆ ಅಭ್ಯರ್ಥಿಯನ್ನು ಹೆಸರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆಪ್ ನ ಉನ್ನತ ಹುದ್ದೆಯ ರೇಸ್‌ನಲ್ಲಿರುವವರಲ್ಲಿ ಅದರ ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಸುದನ್ ಗಧ್ವಿ ಮತ್ತು ಪ್ರಧಾನ ಕಾರ್ಯದರ್ಶಿ ಮನೋಜ್ ಸೊರತಿಹ್ಯ ಸೇರಿದ್ದಾರೆ ಎಂದು ಪಕ್ಷದ ಮೂಲಗಳು ಪಿಟಿಐಗೆ ತಿಳಿಸಿವೆ.
ಕಳೆದ ವಾರ, ಕೇಜ್ರಿವಾಲ್ ಅವರು ಪ್ರಸ್ತುತ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯದಲ್ಲಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದರ ಕುರಿತು SMS, WhatsApp, ವಾಯ್ಸ್ ಮೇಲ್ ಮತ್ತು ಇ-ಮೇಲ್ ಮುಖಾಂತರ ಜನರು ತಮ್ಮ ಅಭಿಪ್ರಾಯಗಳನ್ನು ನೀಡಲು ತಿಳಿಸಿದ್ದರು. ನವೆಂಬರ್ 3ರ ಸಂಜೆಯವರೆಗೆ ಜನರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು ಅವಕಾಶ ನೀಡಿದ್ದರು. ಜನರ ಅಭಿಪ್ರಾಯಗಳ ಆಧಾರದ ಮೇಲೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ತಿಯ ಹೆಸರನ್ನು ಮರುದಿನ ಪ್ರಕಟಿಸಲಾಗುವುದು ಎಂದು ಹೇಳಿದ್ದರು.