1 ಸಾವಿರಕ್ಕೆ 20 ಶರ್ಟ್ ಆಫರ್! – ಅಂಗಡಿ ಮುಂದೆ ಜಮಾಯಿಸಿದ ಸಾವಿರಾರು ಗ್ರಾಹಕರು.. ಆಮೇಲೆ ಆಗಿದ್ದೇನು?

ಹಬ್ಬಗಳು ಶುರುವಾಗ್ತಿದ್ದಂತೆ ಡ್ರೆಸ್, ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಗ್ರಾಹಕರನ್ನ ಆಫರ್ ನೀಡಲಾಗುತ್ತೆ. ಹಬ್ಬಗಳಲ್ಲಿ ದರ ಕಡಿಮೆ ಇರುತ್ತೆ ಎಂದು ಗ್ರಾಹಕರು ಕೂಡ ವಸ್ತುಗಳನ್ನ ಖರೀದಿಸಲು ಮುಗಿ ಬೀಳ್ತಾರೆ. ಇದೀಗ ಹಾಸನದಲ್ಲೂ ಇಂತಹದ್ದೇ ಆಫರ್ ನೀಡಿದ್ದು, ಸಾವಿರಾರು ಮಂದಿ ಅಂಗಡಿ ಮುಂದೆ ಜಮಾಯಿಸಿದ್ದಾರೆ. ಜನರನ್ನ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ನಡೆದಿದೆ.
ಇದನ್ನೂ ಓದಿ: POKಯಲ್ಲಿ ರೊಚ್ಚಿಗೆದ್ದ ಜನ – ಹಲವು ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ
ಏನಿದು ಘಟನೆ?
ಹಾಸನದ ಉದಯಗಿರಿ ಬಡಾವಣೆಯಲ್ಲಿ ಅರುಣ್ ಅಡ್ಡ ಮೆನ್ಸ್ ವೇರ್ ಅಂಗಡಿಯಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲಾಗಿತ್ತು. ಅಂಗಡಿಯಲ್ಲಿ ಆಫರ್ ಘೋಷಣೆ ಮಾಡ್ತಿದ್ದಂತೆ ಸಾವಿರಾರು ಜನ ಅಂಗಡಿಗೆ ಬಂದಿದ್ದಾರೆ. ಈ ವೇಳೆ ಅಂಗಡಿಯಲ್ಲಿ ನೂಕುನುಗ್ಗಲು ಉಂಟಾಗಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾಠಿ ಪ್ರಹಾರ ನಡೆಸಿದ್ದಾರೆ. ಇದ್ರಿಂದಾಗಿ ಜನ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.
ಗ್ರಾಹಕರಿಗೆ ನೀಡಿದ ಆಫರ್ ಏನು?
ಅರುಣ್ ಮೆನ್ಸ್ ವೇರ್ ಅಂಗಡಿಯಲ್ಲಿ ‘ಸಾವಿರಕ್ಕೆ 20 ಶರ್ಟ್’ ಎಂಬ ಆಫರ್ ಘೋಷಣೆ ಮಾಡಲಾಗಿತ್ತು. ಹೀಗಾಗಿ ಐವತ್ತು ರೂಪಾಯಿಗೆ ಒಂದು ಶರ್ಟ್ ಖರೀದಿ ಆಸೆಯಿಂದ ಬಂದ ಜನಸಾಗರದಿಂದ ರಸ್ತೆಯಲ್ಲಿ ಗೊಂದಲ ಉಂಟಾಗಿತ್ತು. ಸಹಸ್ರಾರು ಜನರು ಅಂಗಡಿಯ ಕಡೆಗೆ ಹರಿದು ಬಂದರು. ಬೆಳಿಗ್ಗೆಯಿಂದಲೇ ರಸ್ತೆಯಲ್ಲಿ ಜನಸಮೂಹ ಹೆಚ್ಚಾಗಿದ್ದು, ಖರೀದಿಗಾಗಿ ಜನರು ಸಾಲುಗಟ್ಟಿ ನಿಂತಿದ್ದರು. ಜನರು ಹೆಚ್ಚಾಗುತ್ತಿದ್ದಂತೆ ನೂಕುನುಗ್ಗಲು ಜೋರಾಗಿದೆ. ಅದು ಗೊಂದಲಕ್ಕೆ ಕಾರಣವಾಗಿ, ಸ್ಥಳೀಯರಿಗೆ ತೊಂದರೆಯಾಯಿತು. ಅಂಗಡಿಯ ಮುಂದಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ತೊಡಕು ಉಂಟಾಯಿತು. ಪರಿಸ್ಥಿತಿ ಗಂಭೀರಗೊಂಡಾಗ, ಬಡಾವಣೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಜನಸಮೂಹವನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಜನರು ಹಿಂದೆ ಸರಿಯಲು ನಿರಾಕರಿಸಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಈ ಕ್ರಮದಿಂದ ಕೆಲವು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನೋಡಿರಿ

