₹20 ಕೋಟಿ ಹಣ.. ಕಾರು, ಮನೆಗಳೆಷ್ಟು? – 2 ವಾರದಲ್ಲೇ 25 ಪಟ್ಟು ಹೆಚ್ಚಿತಾ ಆಸ್ತಿ?
ಪಾಕ್ ಚಿನ್ನ ನದೀಮ್ ಅರ್ಷದ್​ಗೆ ಸಿಕ್ಕಿದ್ದೆಷ್ಟು?

₹20 ಕೋಟಿ ಹಣ.. ಕಾರು, ಮನೆಗಳೆಷ್ಟು? – 2 ವಾರದಲ್ಲೇ 25 ಪಟ್ಟು ಹೆಚ್ಚಿತಾ ಆಸ್ತಿ?ಪಾಕ್ ಚಿನ್ನ ನದೀಮ್ ಅರ್ಷದ್​ಗೆ ಸಿಕ್ಕಿದ್ದೆಷ್ಟು?

2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಹೆಸರು ನದೀಮ್ ಅರ್ಷದ್. ಪಾಕಿಸ್ತಾನ ಮೂಲದ ಅರ್ಷದ್ ಜಾವಲಿನ್ ಥ್ರೋವರ್​ನಲ್ಲಿ ನಮ್ಮ ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾರನ್ನ ಹಿಂದಿಕ್ಕಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ರು. ಆದ್ರೆ ಅರ್ಷದ್ ಚಿನ್ನ ಗೆದ್ದ ಮೇಲೆ ಅವ್ರ ಖಾಸಗಿ ಬದುಕಿನ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದಕ್ಕೆ ಕಾರಣನೂ ಇದೆ. ಒಲಿಂಪಿಕ್ಸ್​ಗೆ ಆಯ್ಕೆಯಾಗೋ ಮುನ್ನ ಅರ್ಷದ್ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳನ್ನ ಎದುರಿಸಿದ್ದರು. ಒಂದು ಜಾವೆಲಿನ ತಗೊಳ್ಳೋಕೂ ಹಣ ಇರಲಿಲ್ಲ. ಅವರಿವರ ಬಳಿ ಕಾಡಿ ಬೇಡಿ ಪ್ಯಾರಿಸ್ ನಗರಕ್ಕೆ ಹಾರಿದ್ರು. ಕಷ್ಟಗಳನ್ನೆಲ್ಲಾ ದಾಟಿ ಒಲಿಂಪಿಕ್ಸ್ ಅಂಗಳಕ್ಕೆ ಕಾಲಿಟ್ಟಿದ್ರು. ಯಾವಾಗ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟು ಗೆದ್ರೋ ಅವ್ರ ನಸೀಬೇ ಫುಲ್ ಚೇಂಜ್ ಆಗಿದೆ. ಜಾವೆಲಿನ್ ತಗೊಳ್ಳೋಕೂ ದುಡ್ಡಿಲ್ಲದೆ ಪರದಾಡಿದ ಅರ್ಷದ್ ಈಗ ಕೋಟಿ ಕೋಟಿಗಳ ಕುಬೇರನಾಗಿದ್ದಾರೆ. ಐಷಾರಾಮಿ ಕಾರುಗಳಿವೆ. ದುಬಾರಿ ಫ್ಲ್ಯಾಟ್, ವಿಲ್ಲಾಗಳು ಸಿಕ್ಕಿವೆ. ಬಂಗಾರ ಗೆದ್ದ ಬಳಿಕ ಅರ್ಷದ್ ಲೈಫ್ ಹೇಗೆಲ್ಲಾ ಬದಲಾಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಸ್ಟಾರ್ ಪ್ಲೇಯರ್ಸ್​ಗೆ BCCI ಟಾಸ್ಕ್ – ದುಲೀಪ್ ಟ್ರೋಫಿ ಭವಿಷ್ಯ ಬದಲಿಸುತ್ತಾ?

ಕೋಟಿಗಳ ಒಡೆಯ ನದೀಮ್!

ಪ್ಯಾರಿಸ್ ಒಲಂಪಿಕ್ಸ್​ನಲ್ಲಿ ಅರ್ಷದ್ ನದೀಮ್ 92.97 ಮೀಟರ್ ಜಾವಲಿನ್ ಥ್ರೋ ಎಸೆದು ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದರು. ಐತಿಹಾಸಿಕ ಸಾಧನೆ ಮಾಡಿ ಚಿನ್ನದ ಪದಕ ಗೆದ್ದ ಅರ್ಷದ್ ನದೀಮ್ ಗೆ ಪ್ರಶಂಸೆಯ ಸುರಿಮಳೆಯೇ ಹರಿದು ಬಂದಿತ್ತು. ಆದ್ರೆ ಅರ್ಷದ್ ಚಿನ್ನದ ಪದಕ ಗೆಲ್ಲೋದಕ್ಕಿಂತ ಮುಂಚೆ ಅವರ ಬಳಿ ಇದ್ದ ಒಟ್ಟಾರೆ ಆಸ್ತಿ 8 ಮಿಲಿಯನ್ ಪಾಕಿಸ್ತಾನ್ ರುಪೀಸ್. ಭಾರತದ ಕರೆನ್ಸಿ ಪ್ರಕಾರ ಹೇಳೋದಾದ್ರೆ ಹತ್ತತ್ರ 80  ಲಕ್ಷ ರೂಪಾಯಿ ಆಸ್ತಿ. ಆದ್ರೆ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಬಳಿಕ ಕೋಟ್ಯಾಂತರ ರೂಪಾಯಿ ಮೌಲ್ಯದ ಬಹುಮಾನ ಹುಡುಕಿಕೊಂಡು ಬರ್ತಿದೆ. ಪ್ಯಾರಿಸ್ ಒಲಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಅರ್ಷದ್ ನದೀಮ್ ಗೆ ಸಿಕ್ಕಿದ್ದು 50,000 ಡಾಲರ್. ಅಂದರೆ 42 ಲಕ್ಷ ರೂಪಾಯಿ. ಇದರ ಜೊತೆಗೆ ಪಾಕಿಸ್ತಾನದ ಪಂಜಾಬ್ ರಾಜ್ಯ ಸರ್ಕಾರವು ಅವರಿಗೆ ಭಾರತೀಯ ಕರೆನ್ಸಿ ಪ್ರಕಾರ 10 ಕೋಟಿ ರೂಪಾಯಿ. ಇದ್ರ ಜೊತೆಗೆ  ಪಂಜಾಬ್ ಗವರ್ನರ್ ಆದಂತಹ ಸರ್ದಾರ್ ಸಲೀಂ ಇದಾರ್ ಖಾನ್ ಜೊತೆಗೆ ಮಿನಿಸ್ಟರ್ ಹಾಗೂ ಕರಾಚಿ ಮೇಯರ್ ಅವರು ಸಹ ತಲಾ ಒಂದೊಂದು ಕೋಟಿ ಹಣ ನೀಡಿದ್ದಾರೆ.  ಅಷ್ಟೇ ಅಲ್ಲದೆ ಪಾಕಿಸ್ತಾನದ ಅನೇಕ ಬ್ಯುಸಿನೆಸ್​ಮನ್ ಗಳು, ಶ್ರೀಮಂತರು ಸೇರಿದಂತೆ ಹಲವು ರಾಜಕಾರಣಿಗಳು ಭರ್ಜರಿ ಕೊಡುಗೆಗಳನ್ನೇ ನೀಡಿದ್ದಾರೆ. ಇತ್ತಿಚಿನ ಮಾಹಿತಿ ಪ್ರಕಾರ ಅರ್ಷದ್ ಬಳಿ ನಗದು ಹಣವೇ ಒಟ್ಟಾರೆ 20 ಕೋಟಿ ರೂಪಾಯಿಗೂ ಹೆಚ್ಚಾಗಿದೆ. ಹಾಗೇ 4 ಐಷಾರಾಮಿ ಕಾರುಗಳು ಉಡುಗೊರೆಯಾಗಿ ಸಿಕ್ಕಿದೆ. 3 ಫ್ಲಾಟ್​ಗಳು, ಒಂದು ಮನೆ ಕೂಡ ಗಿಫ್ಟ್ ನೀಡಲಾಗಿದೆ. ಈ ಮೂಲಕ ಎಲ್ಲವೂ ಸೇರಿ 25 ಕೋಟಿ ರೂಪಾಯಿಗಳವರೆಗೆ ಆಸ್ತಿಯಾಗಿದೆ.

27 ವರ್ಷದ ಅರ್ಷದ್ ನದೀಮ್ ಪಾಕ್ ಪರ ವೈಯಕ್ತಿಕ ಚಿನ್ನ ಗೆದ್ದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಅವರಿಗಿಂತ ಮೊದಲು ಯಾವುದೇ ಪಾಕಿಸ್ತಾನಿ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರಲಿಲ್ಲ. ಕುಸ್ತಿಯಲ್ಲಿ ಮುಹಮ್ಮದ್ ಬಶೀರ್ ಕಂಚು ಮತ್ತು ಬಾಕ್ಸಿಂಗ್‌ನಲ್ಲಿ ಹುಸೇನ್ ಶಾ ಕಂಚು ಗೆದ್ದಿದ್ರು. ಒಲಿಂಪಿಕ್ಸ್‌ನಲ್ಲಿ ತಮ್ಮ ದೇಶಕ್ಕಾಗಿ ವೈಯಕ್ತಿಕ ಪದಕಗಳನ್ನು ಗೆದ್ದಿದ್ದರು. ಪಾಕಿಸ್ತಾನದ ಪರ ವೈಯಕ್ತಿಕ ಪದಕ ಗೆದ್ದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೂ ನದೀಮ್ ಪಾತ್ರರಾಗಿದ್ದಾರೆ. 1992ರ ನಂತರ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಯಾವುದೇ ಪದಕ ಲಭಿಸಿಲ್ಲ. 1992ರಲ್ಲಿ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಹಾಕಿ ತಂಡ ಕಂಚಿನ ಪದಕ ಗೆದ್ದಿತ್ತು. ಇನ್ನು ಅರ್ಷದ್ ತಂದೆ ಮುಹಮ್ಮದ್‌ ಅಶ್ರಫ್‌ ಮೇಸ್ತ್ರಿ ಆಗಿದ್ದ ಕಾರಣ, ಆರಂಭಿಕ ದಿನಗಳಲ್ಲಿ ಅರ್ಷದ್‌ ಕೂಡ ಗಾರೆ ಕೆಲಸದಲ್ಲಿಯೂ ತೊಡಗಿದ್ದರು. ಕ್ರೀಡೆಯಲ್ಲಿ ನದೀಮ್‌ ಬೆಳವಣಿಗೆ ಕಂಡಿದ್ದ ಗ್ರಾಮಸ್ಥರು ವಿವಿಧ ಕೂಟಗಳಲ್ಲಿ ಪಾಲ್ಗೊಳ್ಳಲು ಹಣ ಬೇಕಿದ್ದ ಸಂದರ್ಭದಲ್ಲಿ ಸಹಾಯ ಮಾಡಿದ್ದರು. ಹಾಗೇ ತಮ್ಮ ಹಳೇ ಜಾವೆಲಿನ್ ಬದಲಾಯಿಸಲು ಹಣ ಬೇಕಿದ್ದ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಧನ ಸಹಾಯಕ್ಕೆ ಮನವಿ ಮಾಡಿಕೊಂಡಿದ್ದರು. ಈಗ ಒಲಿಂಪಿಕ್ಸ್ ದಾಖಲೆ ಮುರಿದು ಚಾಂಪಿಯನ್ ಎನಿಸಿಕೊಂಡಿದ್ದಾರೆ. ಅರ್ಷದ್‌ ನದೀಮ್‌ ಸಾಧನೆ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿದಾಯಕ.

Shwetha M

Leave a Reply

Your email address will not be published. Required fields are marked *