ರಾಬಿನ್ ಉತ್ತಪ್ಪ ಬಂಧನಕ್ಕೆ ವಾರೆಂಟ್ ಜಾರಿ – ಉದ್ಯೋಗಿಗಳಿಗೆ 23 ಲಕ್ಷ ವಂಚನೆ ಮಾಡಿದ್ರಾ?
ರಾಬಿನ್ ಉತ್ತಪ್ಪ ಬಂಧನಕ್ಕೆ ಖಾಕಿ ಬಲೆ
ಪಿಎಫ್ ವಂಚನೆ ಆರೋಪದ ಹಿನ್ನೆಲೆಯಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರ ಬಂಧನಕ್ಕೆ ವಾರಂಟ್ ಜಾರಿಯಾಗಿದೆ. ಉದ್ಯೋಗಿಗಳಿಗೆ ಮತ್ತು ಸರ್ಕಾರಕ್ಕೆ ವಂಚಿಸಿದ ಪ್ರಕರಣಕ್ಕೆ ಸಂಬಂಧ ವಾರೆಂಟ್ ಜಾರಿ ಮಾಡಲಾಗಿದೆ. ಸೆಂಚುರೀಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ನಡೆಸುತ್ತಿರುವ ಉತ್ತಪ್ಪ, ಕಂಪನಿಯ ಕಾರ್ಮಿಕರಿಗೆ 23 ಲಕ್ಷ ರೂಪಾಯಿ ಪಿಎಫ್ ಹಣ ಪಾವತಿಸದೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಿಎಫ್ ಪ್ರಾದೇಶಿಕ ಆಯುಕ್ತ ಷಡಕ್ಷರಿ ಗೋಪಾಲ್ ರೆಡ್ಡಿ ಅವರು ವಾರೆಂಟ್ ಹೊರಡಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಪುಲಕೇಶಿನಗರ ಪೊಲೀಸರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ : ದರ್ಶನ್ಗೆ ಬಂತಾ ಗುಡ್ ಟೈಂ?- ಫಾರ್ಮ್ ಹೌಸ್ನಲ್ಲಿ ದಾಸ ಜಾಲಿ..
ಕಮಿಷನರ್ ರೆಡ್ಡಿ ಅವರು ಡಿಸೆಂಬರ್ 4 ರಂದು ಪತ್ರದ ಮೂಲಕ ಬಂಧನ ವಾರಂಟ್ ಅನ್ನು ಕಾರ್ಯಗತಗೊಳಿಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಆದರೆ, ಉತ್ತಪ್ಪ ನಿವಾಸ ಬದಲಿಸಿದ್ದರ ಪರಿಣಾಮ ವಾರಂಟ್ ಅನ್ನು ಪಿಎಫ್ ಕಚೇರಿಗೆ ಹಿಂತಿರುಗಿಸಲಾಗಿತ್ತು. ಇದೀಗ ಪರಾರಿಯಾದ ಉತ್ತಪ್ಪ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ವರದಿಗಳ ಪ್ರಕಾರ ಉತ್ತಪ್ಪ ಅವರು ಭಾರತ ತೊರೆದು ದುಬೈನಲ್ಲಿ ನೆಲೆಸಿದ್ದಾರೆ. ಇದೀಗ ತಮ್ಮ ವಿರುದ್ಧ ಪ್ರಕರಣ ದಾಖಲಾದ ಕಾರಣ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಕ್ರಿಕೆಟಿಗ, ತಮ್ಮ ಕಾರ್ಮಿಕರಿಗೆ ವಂಚಿಸುವುದು ಎಷ್ಟು ಸರಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಉತ್ತಪ್ಪ ವಿರುದ್ಧ ಆಕ್ರೋಶ ಹೆಚ್ಚಾಗಿದ್ದು, ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.