ಗರ್ಲ್‌ಫ್ರೆಂಡ್ ಜೊತೆ ಸುತ್ತಾಡಲು ಸಂಬಂಧಿಕರ ಮನೆಯಲ್ಲೇ ಕಳ್ಳತನ – ಶೋಕಿಲಾಲ ಸಿಕ್ಕಿಬಿದ್ದಿದ್ದು ಹೇಗೆ?

ಇಲ್ಲೊಬ್ಬ ಭೂಪ ತನ್ನ ಪ್ರೇಯಸಿ ಜೊತೆ ಸುತ್ತಾಡಲು ಕಳ್ಳತನದ ಮಾರ್ಗ ಕಂಡುಹಿಡಿದಿದ್ದ. ತನ್ನ ಸಂಬಂಧಿಕರ ಮನೆಯಿಂದಲೇ ಚಿನ್ನಾಭರಣ ಹಾಗೂ ಹಣ ಕಳ್ಳತನ ಮಾಡಿದ್ದ. ಬಿಟ್ಟಿ ದುಡ್ಡು ಕೈ ಸೇರುತ್ತಿದ್ದಂತೆ ತನ್ನ ಪ್ರೇಯಸಿ ಜೊತೆ ಸುತ್ತಾಡುತ್ತಾ ಶೋಕಿ ಮಾಡುತ್ತಿದ್ದ. ಕಳ್ಳತನದ ಹಣದಲ್ಲಿ ಜಾಲಿ ಮಾಡುತ್ತಿದ್ದಾತ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಏನಿದು ಘಟನೆ?
ಹಲಸೂರು ನಿವಾಸಿ ಕುಮಾರ್ ಎಂಬುವವರ ಮನೆಗೆ ಆಗಸ್ಟ್ 31ರಂದು ನುಗ್ಗಿದ್ದ ದುಷ್ಕರ್ಮಿಗಳು 8.36 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ತನ್ನ ಸಹೋದರಿ ಮಗಳ ಮದುವೆಗೆ ಇಟ್ಟಿದ್ದ ಹಣ, ಆಭರಣ ಕಳ್ಳತನವಾಗಿದ್ದಕ್ಕೆ ಇಡೀ ಕುಟುಂಬವೇ ದಿಕ್ಕುತೋಚದೆ ಕಂಗಾಲಾಗಿತ್ತು. ಈ ಕುರಿತು ಹಲಸೂರು ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸಬ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ದೊಡ್ಡಮನಿ ನೇತೃತ್ವದ ತಂಡ ಕ್ಷಿಪ್ರ ತನಿಖೆ ಆರಂಭಿಸಿತ್ತು. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಒಂದು ಬೈಕ್‌ನಲ್ಲಿ ಆರೋಪಿಯ ಚಹರೆ ಪತ್ತೆಯಾಗಿತ್ತು. ಇದೇ ಸುಳಿವು ಆಧರಿಸಿ ಬೆನ್ನಟ್ಟಿದ್ದ ತನಿಖಾ ತಂಡ ವಿನೋದ್, ಈತನ ಸ್ನೇಹಿತ ಪ್ರಶಾಂತ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಿಂದ ಕಳವು ಮಾಡಿದ್ದ ಆಭರಣ, ಐದು ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ದೋಸ್ತಿ ಮಾಡಿಕೊಂಡರೂ ಹಾಲಿ ಸಂಸದರಿರುವ ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ಹಿಂದೇಟು – ದಳ ಕಮಲ ಮೈತ್ರಿಗೆ ಮತ್ತಷ್ಟು ಸವಾಲು
ಹಣ ಕದ್ದು ಪ್ರೇಯಸಿ ಜತೆ ಪ್ರವಾಸ
ಕೋರಮಂಗಲದ ನಿವಾಸಿ ವಿನೋದ್ ಶೋಕಿ ಜೀವನಕ್ಕೆ ಬಿದ್ದು ಅಪರಾಧ ಕೃತ್ಯಗಳಲ್ಲಿಈ ಹಿಂದೆಯೂ ಭಾಗಿಯಾಗಿದ್ದ. ಮೊದಲಿಗೆ ಬೈಕ್ ಕದ್ದಿದ್ದ ಆರೋಪಿ ಪ್ರಶಾಂತ್ ಜತೆ ಕಳ್ಳತನಕ್ಕೂ ಇಳಿದಿದ್ದ. ಇವರ ಬಂಧನದಿಂದ ಒಂದು ಸುಲಿಗೆ, ಎರಡು ಮನೆಗಳವು, ಎರಡು ಬೈಕ್ ಕಳವು ಕೃತ್ಯಗಳು ಬಯಲಾಗಿವೆ. ಕುಮಾರ್ ಅವರ ಮನೆಯಲ್ಲಿಎಂಟು ಲಕ್ಷ ರೂ. ಕಳವು ಮಾಡಿದ ಬಳಿಕ ಸ್ನೇಹಿತರ ಜತೆ ಮದ್ಯದ ಪಾರ್ಟಿ ಮಾಡಿದ್ದಾನೆ. ಕುಡಿತದ ಅಮಲಿನಲ್ಲಿ ಸ್ನೇಹಿತರಿಗೆ ಸುಮಾರು ಒಂದೂವರೆ ಲಕ್ಷ ರೂ. ಹಂಚಿದ್ದ. ಬಳಿಕ ತನ್ನ ಪ್ರೇಯಸಿ ಜತೆ ತಮಿಳುನಾಡಿನ ಹಲವು ಸ್ಥಳಗಳಿಗೆ ಪ್ರವಾಸ ಮಾಡಿ ಹಣ ಖರ್ಚು ಮಾಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಅಧಿಕಾರಿ ಹೇಳಿದರು.
ಸಂಬಂಧಿಕರ ಮನೆಗೆ ಕನ್ನ
ಮತ್ತೊಂದು ಪ್ರಕರಣದಲ್ಲಿ ಸಂಬಂಧಿಕರ ಮನೆಯಲ್ಲಿಯೇ ಚಿನ್ನಾಭರಣ ಕದ್ದಿದ್ದ ನೀಲಸಂದ್ರದ ರಾಜೀವ್‌ಕುಮಾರ್ ಗುಪ್ತಾ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ. ಪಾನಿಪೂರಿ ಅಂಗಡಿ ನಡೆಸುವ ಜೋಗುಪಾಳ್ಯದ ಪುಷ್ಪೇಂದ್ರ ಗುಪ್ತ, ಆಗಸ್ಟ್ 28ರಂದು ಕುಟುಂಬದ ಸಮೇತ ಊರಿಗೆ ತೆರಳಿದ್ದರು. ಈ ವೇಳೆ ರಾಜೀವ್‌ಕುಮಾರ್ ಮನೆಗೆ ನುಗ್ಗಿ ಆಭರಣ ಕದ್ದಿದ್ದ. ಆರೋಪಿ ಬಳಿಯಿಂದ 46 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ, 39 ಸಾವಿರ ರೂ.ನಗದು ಜಪ್ತಿ ಮಾಡಲಾಗಿದೆ.
ಪುಷ್ಪೇಂದ್ರ ಅವರ ಸಂಬಂಧಿಯಾದ ರಾಜೀವ್‌ಕುಮಾರ್ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಈ ವೇಳೆ ಬೀರುವಿನಲ್ಲಿಆಭರಣ ಇರುವುದನ್ನು ಗಮನಿಸಿದ್ದ. ಪುಷ್ಪೇಂದ್ರ ಊರಿಗೆ ಹೋಗುವ ವಿಚಾರ ತಿಳಿದು ಕಳ್ಳತನ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.