ಗುಜರಾತ್ ನಲ್ಲಿ ವಿನಾಶ ಸೃಷ್ಟಿಸುತ್ತಿದೆ ಬಿಪರ್ ಜಾಯ್ ಚಂಡಮಾರುತ – ಕರ್ನಾಟಕದಲ್ಲೂ ಜನರ ನೆಮ್ಮದಿ ಕಸಿದ ಸೈಕ್ಲೋನ್

ಗುಜರಾತ್ ನಲ್ಲಿ ವಿನಾಶ ಸೃಷ್ಟಿಸುತ್ತಿದೆ ಬಿಪರ್ ಜಾಯ್ ಚಂಡಮಾರುತ – ಕರ್ನಾಟಕದಲ್ಲೂ ಜನರ ನೆಮ್ಮದಿ ಕಸಿದ ಸೈಕ್ಲೋನ್

ಬಿಪರ್ ಜಾಯ್ ಚಂಡಮಾರುತ ಕ್ಷಣ ಕ್ಷಣಕ್ಕೂ ಉಗ್ರರೂಪ ತಾಳುತ್ತಿದೆ. ಸೈಕ್ಲೋನ್ ಪರಿಣಾಮದಿಂದಾಗಿ ಕೇರಳ, ಗುಜರಾತ್, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಅದರಲ್ಲೂ ಕರ್ನಾಟಕದ ಕರಾವಳಿ ಭಾಗದ ಜನರಲ್ಲಿ ಆತಂಕ ಮೂಡಿಸಿದೆ. ಕಾರವಾರದ ಸಮುದ್ರ ತೀರಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.

ಚಂಡಮಾರುತದ ಪರಿಣಾಮ ಗೋಕರ್ಣ, ಮುರುಡೇಶ್ವರ, ಕಾರವಾರ ಕಡಲತೀರಗಳು ಪ್ರವಾಸಿಗರಿಲ್ಲದೆ ಖಾಲಿಯಾಗಿದ್ದು, ಸಾಂಪ್ರದಾಯಿಕ ದೋಣಿ ಮೂಲಕ ಮೀನು ಹಿಡಿಯಲು ಮೀನುಗಾರರು ವಿಫಲ ಯತ್ನ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಕಡಲತೀರದಲ್ಲಿ ಅಲೆಗಳ ಹೊಡೆತಕ್ಕೆ ಪಿಚಿಂಗ್ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಡಲ ಕೊರೆತ ತಡೆಯಲು ಹಾಕಿದ್ದ ಪಿಚಿಂಗ್ (ತಡೆ ಗೋಡೆ) ಚೆಲ್ಲಾಪಿಲ್ಲಿಯಾಗಿದೆ. ಇನ್ನೂ ಎರಡು ದಿನಗಳ ಕಾಲ ಕಡಲ ಅಲೆಗಳು ಅಬ್ಬರಿಸಲಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ : ಬೆಂಗಳೂರಿಗರೇ ಎಚ್ಚರ.. – ನಗರದಲ್ಲಿ ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚು ವಾಯುಮಾಲಿನ್ಯ!

ಈಗಾಗಲೇ ಅರಬ್ಬೀ ಸಮುದ್ರದ ತೀರ ಪ್ರದೇಶಗಳಲ್ಲಿ ಭಾರಿ ಆತಂಕ ಸೃಷ್ಟಿಸಿರುವ ಬಿಪರ್‌ಜಾಯ್ ಚಂಡಮಾರುತ (Cyclone Biparjoy) ಗುರುವಾರ ಮಧ್ಯಾಹ್ನ ಗುಜರಾತ್‌ ತೀರಕ್ಕೆ (Gujarat Coast) ಅಪ್ಪಳಿಸುವ ಸಾಧ್ಯತೆಯಿದೆ. ಈಗಾಗಲೇ ಸುಮಾರು 7,500 ಜನರನ್ನು ಸ್ಥಳಾಂತರ ಮಾಡಲಾಗಿದೆ. ಗಂಟೆಗೆ 150 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಚಂಡಮಾರುತ ಅಪ್ಪಳಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಗುಜರಾತ್‌ ಮತ್ತು ಪಾಕಿಸ್ತಾನದ (Pakistan) ಸಮುದ್ರ ತೀರದ ಪ್ರದೇಶಗಳಲ್ಲಿ ಭಾರೀ ವಿನಾಶ ಸೃಷ್ಟಿಸುವ ಆಂತಕ ಎದುರಾಗಿದೆ. ಗುಜರಾತ್‌ನ ಜಖೌ ಬಂದರಿನ ಬಳಿ ಗುರುವಾರ ಮಧ್ಯಾಹ್ನದ ವೇಳೆಗೆ ಅತ್ಯಂತ ತೀವ್ರವಾಗಿ ಚಂಡಮಾರುತ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಅರಬ್ಬೀ ಸಮುದ್ರದಲ್ಲಿ 58 ವರ್ಷಗಳಲ್ಲಿ ಜೂನ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಮೂರನೇ ಶಕ್ತಿಶಾಲಿ ಸೈಕ್ಲೋನ್ ಇದಾಗಿದ್ದು, 25 ವರ್ಷಗಳ ಬಳಿಕ ಜೂನ್‌ನಲ್ಲಿ ಗುಜರಾತ್ ಸಮುದ್ರ ತೀರಕ್ಕೆ ಅಪ್ಪಳಿಸುತ್ತಿರುವ ಚಂಡಮಾರುತ ಇದಾಗಿದೆ. ಭಾರೀ ಹಾನಿ ಮಾಡುವ ಸಾಧ್ಯತೆ ಇರುವ ಕಾರಣ ಪಶ್ಚಿಮ ರೈಲ್ವೇ ಒಟ್ಟು 67 ರೈಲುಗಳ ಸಂಚಾರವನ್ನು ರದ್ದು ಮಾಡಿದೆ. ಕಛ್‌ (Kutch) ಮತ್ತು ಸೌರಾಷ್ಟ್ರ (Sourashtra) ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಅಧಿಕಾರಿಗಳು ಜನರನ್ನು ಸ್ಥಳಾಂತರ ಮಾಡುವ ಕೆಲಸ ಆರಂಭಿಸಿದ್ದಾರೆ. ಎರಡು ಜಿಲ್ಲೆಗಳಲ್ಲಿ ಸಮುದ್ರ ತೀರದಿಂದ 10 ಕಿ.ಮೀ ದೂರದವರೆಗೆ ನೆಲೆಸಿರುವ ಸುಮಾರು 7,500 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಇಂದು ಮತ್ತಷ್ಟು ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಸೂಚನೆ ಹಿನ್ನೆಲೆಯಲ್ಲಿ 19 ಎನ್‌ಡಿಆರ್‌ಎಫ್ ತಂಡಗಳನ್ನು ಸಿದ್ಧವಾಗಿಡಲಾಗಿದೆ. ಪರಿಸ್ಥಿತಿ ಕೈ ಮೀರಿದರೆ ಸೇನೆ, ನೌಕಾ ಪಡೆಗೆ ಸನ್ನದ್ಧವಾಗಿರುವಂತೆ ಸೂಚನೆ ನೀಡಲಾಗಿದೆ. ಗುಜರಾತ್ ಸರ್ಕಾರವು ಮುಂಜಾಗ್ರತೆಯಾಗಿ ಕರಾವಳಿ ಕಛ್‌, ಜಾಮ್‌ನಗರ, ದೇವಭೂಮಿ ದ್ವಾರಕಾ ಮತ್ತು ಜುನಾಗಢ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿದೆ. ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಳ್ಳುತ್ತಿವೆ. ಈಗಾಗಲೇ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅಪಾಯಗಳನ್ನು ತಡೆಯುವಂತೆ ಸೂಚನೆ ನೀಡಿದ್ದು ಸ್ಥಳೀಯ ಆಡಳಿತಗಳು ತೀರ ಪ್ರದೇಶಗಳಿಗೆ ಜನರ ಪ್ರವೇಶ ನಿಷೇಧಿಸಿವೆ. ಬಿಪರ್‌ಜಾಯ್ ತೀವ್ರತೆ ಏನು, ಇದು ಮಾಡಬಹುದಾದ ಹಾನಿಗಳೇನು ಎನ್ನುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಅಧ್ಯಯನಗಳನ್ನು ನಡೆಸುತ್ತಿದ್ದು ಸರ್ಕಾರಕ್ಕೆ ನಿರಂತರ ಎಚ್ಚರಿಕೆ ಸಂದೇಶಗಳನ್ನು ನೀಡುತ್ತಿದೆ.

suddiyaana