ಮಟ ಮಟ ಮಧ್ಯಾಹ್ನವೂ ಮೈಕೊರೆಯುವ ಚಳಿ! – ಹಿಂದೆಂದೂ ಕಂಡು ಕೇಳರಿಯದ ಚಳಿಗೆ ತತ್ತರಿಸಿದ ಜನ!
ಸದಾಕಾಲ ಬಿಸಿಲಿನ ಕಾವು ನೋಡುತ್ತಿದ್ದ ರಾಜ್ಯ ಜನರು ಮೈಕೊರೆಯುವ ಥಂಡಿಗೆ ಥಂಢಾ ಹೊಡೆದಿದ್ದಾರೆ. ಮುಂಜಾನೆಯ ಮಂಜಿನ ಮುಸುಕು, ತಣ್ಣನೆಯ ಗಾಳಿ ಜನರ ಜೀವನ ಶೈಲಿಯನ್ನೇ ಈಗ ಬದಲಾಯಿಸಿದೆ. ದಿನವಿಡೀ ಚಳಿಯ ಅನುಭವ ಹೆಚ್ಚಾಗಿದೆ. ಹಿಂದೆಂದೂ ಕಂಡು ಕೇಳರಿಯದ ಚಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಕಳೆದೊಂದು ವಾರದಿಂದ ಕನಿಷ್ಠ ತಾಪಮಾನ ದಾಖಲಾಗುತ್ತಿದ್ದು ಜನರು ಮನೆಯಿಂದಲೇ ಹೊರಬಾರದಂತಾಗಿದೆ. ಜನ ಟೋಪಿ, ಸ್ವೆಟ್ಟರ್, ಜರ್ಕಿನ್ ಹಾಕಿಕೊಂಡೇ ಮನೆಯಿಂದ ಹೊರ ಬರುವಂತಾಗಿದೆ. ಇದೀಗ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಚಳಿ ತೀವ್ರಗೊಂಡಿದೆ.
ಹೌದು, ಚಳಿಗಾಲ ಆರಂಭದಲ್ಲಿಯೇ ಇಷ್ಟು ಪ್ರಮಾಣದಲ್ಲಿ ಚಳಿ ದಾಖಲಾಗುತ್ತಿರುವುದು ಮುಂದೆ ಹೇಗೆ ಅಂತಾ ಜನ ಚಿಂತೆಯಲ್ಲಿದ್ದಾರೆ. ಬೀದರ್, ವಿಜಯಪುರ, ರಾಯಚೂರಿ ಸೇರಿದಂತೆ ಉತ್ತರ ಒಳನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಗಮನಾರ್ಹವಾಗಿ ಉಷ್ಣಾಂಶ ಇಳಿಕೆ ಕಂಡಿದೆ. ಹೀಗಾಗಿ ರಾಜ್ಯದ ಅನೇಕ ಕಡೆಗಳಲ್ಲಿ ಮಂಜು ಕವಿದ ವಾತಾವರಣೆ ಚಳಿ ಹೆಚ್ಚಾಗಿದೆ. ಇನ್ನು ಮಧ್ಯಾಹ್ನದ ನಂತರ ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ವಾಟರ್ ಡಿಸ್ಪೆನ್ಸರ್ ಬೆಲೆ ನೂರು, ಇನ್ನೂರಲ್ಲ.. ಬರೋಬ್ಬರಿ 41,000 ರೂಪಾಯಿ!
ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 10.4 ಡಿ.ಸೆ. ಬೀದರ್ನಲ್ಲಿ ದಾಖಲಾಗಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆ ಇದೆ. ವಿಜಯಪುರದಲ್ಲಿ 12.1 ಡಿಗ್ರಿ, ರಾಯಚೂರಿಯಲ್ಲಿ 13.8 ಡಿಗ್ರಿ. ಧಾರವಾಡದಲ್ಲಿ 15 ಡಿಗ್ರಿ, ಬಾಗಲಕೋಟೆಯಲ್ಲಿ 15.3 ಡಿಗ್ರಿ, ಕಲಬುರಗಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 15.6 ಡಿಗ್ರಿ, ಗದಗದಲ್ಲಿ 15.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದೆ.
ಕೊಪ್ಪಳದಲ್ಲಿ 16.6 ಡಿಗ್ರಿ, ಹಾವೇರಿಯಲ್ಲಿ 16.8 ಡಿಗ್ರಿ ಸೆಲ್ಸಿಯಸ್, ಬೆಳಗಾವಿ ನಗರದಲ್ಲಿ 18.5 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶವು ಕಂಡು ಬಂದಿತು. ದಕ್ಷಿಣ ಒಳನಾಡಿನ ಭಾಗದಲ್ಲೂ ಚಳಿಯ ವಾತಾವರಣವಿತ್ತು. ಚಿಕ್ಕಮಗಳೂರಿನಲ್ಲಿ 14.2 ಡಿಗ್ರಿ, ಚಿಂತಾಮಣಿಯಲ್ಲಿ 16.4 ಡಿಗ್ರಿ, ದಾವಣಗೆರೆಯಲ್ಲಿ 16.5 ಡಿಗ್ರಿ ಸೆಲ್ಸಿಯಸ್, ಹಾಸನ ಹಾಗೂ ಮೈಸೂರಿನಲ್ಲಿ 17 ಡಿಗ್ರಿ, ಮಂಡ್ಯದಲ್ಲಿ 17.1 ಡಿಗ್ರಿ, ಚಾಮರಾಜನಗರದಲ್ಲಿ 17.3 ಡಿಗ್ರಿ, ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 17.5 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ಕಂಡು ಬಂದಿತು.
ಮುಂದಿನ 24 ಗಂಟೆಗಳು ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮುಂಜು ಮುಸುಕುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.