ಶತ್ರು ರಾಡಾರ್ ಗಳ ಸೆನ್ಸಾರ್ ತಪ್ಪಿಸಿ ಹಾರುವ ಸಾಮರ್ಥ್ಯ – ವಾಯುಪಡೆಗೆ ಸಿಗಲಿದೆ ‘ಪ್ರಚಂಡ’ ಶಕ್ತಿ

ಶತ್ರು ರಾಡಾರ್ ಗಳ ಸೆನ್ಸಾರ್ ತಪ್ಪಿಸಿ ಹಾರುವ ಸಾಮರ್ಥ್ಯ – ವಾಯುಪಡೆಗೆ ಸಿಗಲಿದೆ ‘ಪ್ರಚಂಡ’ ಶಕ್ತಿ

ಭಾರತದ ವಾಯುಪಡೆ ಬಲ ಹೆಚ್ಚಿಸಲು ರಕ್ಷಣಾ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ತೇಜಸ್ ಲಘು ಯುದ್ಧ ವಿಮಾನಗಳು ಹಾಗೂ ಪ್ರಚಂಡ್ ಲಘು ಹೆಲಿಕಾಪ್ಟರ್ ಗಳನ್ನ ಖರೀದಿಸಲು ಅನುಮತಿ ನೀಡಿದೆ. ಭಾರತದ ಸುಕೋಯ್‌ ಯುದ್ಧ ವಿಮಾನಗಳಿಗೆ ಹೋಲಿಸಿದರೆ ತೇಜಸ್‌ ಸಾಕಷ್ಟು ಹಗುರವಾಗಿದೆ. ಎಂಟರಿಂದ ಒಂಬತ್ತು ಟನ್‌ ತೂಕ ಕೊಂಡೊಯ್ಯುವ ಸಾಮರ್ಥ್ಯ ತೇಜಸ್‌ ಗಿದೆ. ಸುಖೋಯ್‌ನಂತೆಯೇ ಪೆಲೋಡ್‌ಗಳನ್ನು, ವೆಪನ್‌ಗಳನ್ನು ಇದೂ ಕೂಡ ಕೊಂಡೊಯ್ಯಬಲ್ಲದು. ತೇಜಸ್‌ ಯುದ್ಧ ವಿಮಾನದ ಇನ್ನೊಂದು ಪ್ಲಸ್ ಪಾಯಿಂಟ್ ಅಂದ್ರೆ ಅದರ ಸ್ಪೀಡ್. ಈ ಯುದ್ಧ ವಿಮಾನವು ಶಬ್ದದ ವೇಗದ ಮಟ್ಟಿಗೇ ಸಾಗುತ್ತದೆ. ಭೂಮಿಯಿಂದ 52 ಸಾವಿರ ಅಡಿ ಎತ್ತರದವರೆಗೂ ನಿರಾಂತಕವಾಗಿ ಹಾರಬಲ್ಲದು .ಈ ತೇಜಸ್‌ನಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು, ತಂತ್ರಜ್ಞಾನಗಳನ್ನು ಜೋಡಿಸಲಾಗಿದೆ. ತೇಜಸ್‌ನಲ್ಲಿ ಸ್ವದೇಶಿ ನಿರ್ಮಿತ ರಾಡರ್‌ ವ್ಯವಸ್ಥೆ ಕೂಡ ಇದೆ. ತುಂಬಾ ಹಗುರ ಮತ್ತು ಅತ್ಯಂತ ಶಕ್ತಿಶಾಲಿಯಾಗಿದೆ. ಇದು ಬಹುಕಾರ್ಯಕ್ಕೆ ಬಳಕೆಯಾಗಬಲ್ಲ ಯುದ್ಧ ವಿಮಾನ ಕೂಡ ಆಗಿದೆ.

ಇದನ್ನೂ ಓದಿ : ಮೂರು ಟೀಮ್.. ಮೂವರು ಕ್ಯಾಪ್ಟನ್ – ಬಿಸಿಸಿಐ ತಂತ್ರಗಾರಿಕೆ ಹಿಂದಿರುವ ರಹಸ್ಯವೇನು?

ತೇಜಸ್‌ ಯುದ್ಧ ವಿಮಾನ ನಿರ್ಮಾಣ ಯೋಜನೆಗೆ 1983ರಲ್ಲಿ ಚಾಲನೆ ನೀಡಲಾಯಿತು. 2001 ಜನವರಿ 4ರಂದು ತೇಜಸ್‌ ಯುದ್ಧ ವಿಮಾನದ ಮೊದಲ ಪರೀಕ್ಷಾರ್ಥ ಹಾರಾಟ ನಡೆಯಿತು. 2015ರ ಜನವರಿ 17ರಂದು ತೇಜಸ್‌ ವಿಮಾನವನ್ನು ಅಂದಿನ ಕೇಂದ್ರ ರಕ್ಷಣಾ ಸಚಿವ ದಿವಂಗತ ಮನೋಹರ್‌ ಪರಿಕ್ಕರ್‌ ವಾಯುಪಡೆಗೆ ಹಸ್ತಾಂತರಿಸಿದ್ದರು. ಬೆಂಗಳೂರಿನ ಹಿಂದೂಸ್ತಾನ್‌ ಏರೋನಾಟಿಕಲ್‌ ಲಿಮಿಟೆಡ್‌ ನಿರ್ಮಿಸಿರುವ ಈ ವಿಮಾನವು ವಿಶ್ವದ ಅತ್ಯಂತ ಚಿಕ್ಕ ಮತ್ತು ಲಘು ಗಾತ್ರದ ಸೂಪರ್‌ ಸಾನಿಕ್‌ ಯುದ್ಧ ವಿಮಾನವಾಗಿದೆ.

ತೇಜಸ್ ಮಾರ್ಕ್-1ಎ ದೇಶೀಯವಾಗಿ ವಿನ್ಯಾಸಗೊಳಿಸಿದ, ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ ಯುದ್ಧ ವಿಮಾನವಾಗಿದ್ದು, ಶೇಕಡಾ 65 ಕ್ಕಿಂತ ಹೆಚ್ಚು ಸ್ವದೇಶಿ ಘಟಕಗಳನ್ನು ಹೊಂದಿದೆ. ಅಸ್ಥಿತ್ವದಲ್ಲಿರುವ ರಡಾರ್‌ಗಳನ್ನು ಯಾಂತ್ರಿಕವಾಗಿ ಬದಲಿಸುವ ವ್ಯವಸ್ಥೆಯನ್ನೂ ಹೊಂದಿದೆ. ಆಗಸದಲ್ಲಿ ವಿಮಾನಗಳಿಗೆ ಇಂಧನ ತುಂಬಿಸಿಕೊಳ್ಳುವ, ಶತ್ರು ರಾಷ್ಟ್ರದ ಕ್ಷಿಪಣಿಗಳನ್ನು ದೂರದಿಂದಲೇ ಗ್ರಹಿಸುವ ಶಕ್ತಿಯನ್ನು ತೇಜಸ್‌ ಲಘು ಯುದ್ಧ ವಿಮಾನ ಹೊಂದಿದೆ. ಇದೇ ಕಾರಣಕ್ಕೆ ಭಾರತದ ಹಗುರ ಯುದ್ಧ ವಿಮಾನ ತೇಜಸ್‌ ಖರೀದಿಗೆ ಅಮೆರಿಕ, ಅರ್ಜೆಂಟೈನಾ, ಆಸ್ಟ್ರೇಲಿಯಾ, ಈಜಿಪ್ಟ್‌, ಇಂಡೋನೇಷ್ಯಾ ಮತ್ತು ಪಿಲಿಫೈನ್ಸ್‌ ಸೇರಿದಂತೆ ವಿವಿಧ ದೇಶಗಳು ಹೆಚ್ಚಿನ ಆಸಕ್ತಿ ವಹಿಸಿವೆ. ಮಲೇಷ್ಯಾವು ಇತ್ತೀಚೆಗೆ ತೇಜಸ್‌ ವಿಮಾನ ಖರೀದಿಗೆ ಇದೇ ಮೊದಲ ಬಾರಿಗೆ ಆಸಕ್ತಿ ವಹಿಸಿದ ಬಳಿಕ ಭಾರತದ ತೇಜಸ್‌ ಜಾಗತಿಕವಾಗಿ ಸುದ್ದಿಯಲ್ಲಿದೆ. ಪ್ರಚಂಡ್ ಹೆಲಿಕಾಪ್ಟರ್ ಗಳು ಸಹ ವಾಯುಪಡೆಯ ಶಕ್ತಿಯನ್ನ ಮತ್ತಷ್ಟು ಹೆಚ್ಚಿಸುತ್ತಿವೆ.

5.8 ಟನ್ ಟ್ವಿನ್ ಎಂಜಿನ್ ಸಾಮರ್ಥ್ಯದ ಪ್ರಚಂಡ್​ ಹೆಲಿಕಾಪ್ಟರ್ ಅನ್ನು ಸಹ ಹೆಚ್‌ಎಎಲ್ ಅಭಿವೃದ್ಧಿಪಡಿಸಿದೆ. ಸುಮಾರು 21,000 ಅಡಿ ಎತ್ತರದಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಇವು ಸಿಯಾಚಿನ್ ಮತ್ತು ಲಡಾಖ್ ಮತ್ತು ಅರುಣಾಚಲ ಪ್ರದೇಶದ ಎತ್ತರದ ಪ್ರದೇಶಗಳನ್ನು ಒಳಗೊಂಡಂತೆ ಎತ್ತರದ ಪ್ರದೇಶಗಳಲ್ಲಿ ನಿಯೋಜಿಸಲು ವಿನ್ಯಾಸಗೊಳಿಸಲಾಗಿದೆ. ಪ್ರಚಂಡ್ ಯುದ್ಧ ವಿಮಾನಗಳು ವಿಶ್ವದ ಏಕೈಕ ದಾಳಿ ಹೆಲಿಕಾಪ್ಟರ್ ಆಗಿದ್ದು, ಭಾರತೀಯ ಸಶಸ್ತ್ರ ಪಡೆಗಳು ನಿಗದಿಪಡಿಸಿದ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ. ಶಸ್ತ್ರಾಸ್ತ್ರಗಳು ಮತ್ತು ಇಂಧನದ ಸಮೇತ 5,000 ಮೀಟರ್ ಎತ್ತರದಲ್ಲಿ ಇಳಿಯಬಹುದು ಮತ್ತು ಟೇಕ್ ಆಫ್ ಮಾಡಬಹುದು. ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ ಅಂದ್ರೆ ಹೆಚ್ ಎ ಎಲ್ ಅಭಿವೃದ್ಧಿ ಪಡಿಸುತ್ತಿದೆ.

ಇನ್ನು ಪ್ರಚಂಡ್ ಹೆಲಿಕಾಪ್ಟರ್ ಗಳು ಶತ್ರು ರಾಡಾರ್‌ಗಳು ಅಥವಾ ಶತ್ರು ಕ್ಷಿಪಣಿಗಳ ಅನ್ವೇಷಕಗಳಿಂದ ರಕ್ಷಿಸುವ ಪ್ರತಿಮಾಪನ ವಿತರಣಾ ವ್ಯವಸ್ಥೆಯನ್ನು ಹೊಂದಿವೆ. ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಪರಿಗಣಿಸಿದಾಗ 20 ಎಮ್‌ ಎಮ್ ಟರೆಟ್ ಗನ್, 70 ಎಮ್‌ಎಮ್ ರಾಕೆಟ್‌ಗಳು ಹಾಗೂ ಏರ್-ಟು-ಏರ್ ಮಿಸೈಲ್ ಸಿಸ್ಟಮ್‌ಗಳು ಹೆಲಿಕಾಪ್ಟರ್‌ನಲ್ಲಿವೆ. ಚೀನಾದ ಹೆಚ್ಚುತ್ತಿರುವ ನೌಕಾ ಶಕ್ತಿಯ ಬಗ್ಗೆ ಹೆಚ್ಚುತ್ತಿರುವ ಕಳವಳದ ನಡುವೆ ದೇಶವು ಹಿಂದೆಂದಿಗಿಂತಲೂ ಹೆಚ್ಚು ಯುದ್ಧನೌಕೆ ಗಸ್ತು ನಡೆಸುತ್ತಿದೆ. ಈಗ ವಾಯುಪಡೆಗೆ ತೇಜಸ್ ಲಘು ಯುದ್ಧ ವಿಮಾನ ಮತ್ತು ಪ್ರಚಂಡ್ ಹೆಲಿಕಾಪ್ಟರ್ ಗಳ ಸೇರ್ಪಡೆಯಿಂದ ರಕ್ಷಣಾ ವಲಯದ ಸಾಮರ್ಥ್ಯ ಮತ್ತಷ್ಟು ಬಲಿಷ್ಠವಾಗಲಿದೆ.

Shantha Kumari