ನಂಬಿ ಬಂದವರ ಪ್ರಾಣ ಉಳಿಸಿದ ಅರ್ಜುನ ವೀರ ಮರಣ–ಕಣ್ಣೆದುರೇ ನಡೆಯಿತಾ ಅನ್ಯಾಯದ ಸಾವು?

ನಂಬಿ ಬಂದವರ ಪ್ರಾಣ ಉಳಿಸಿದ ಅರ್ಜುನ ವೀರ ಮರಣ–ಕಣ್ಣೆದುರೇ ನಡೆಯಿತಾ ಅನ್ಯಾಯದ ಸಾವು?

ಕ್ಯಾಪ್ಟನ್ ಅರ್ಜುನ. ತಾನು ಬಲಿಯಾಗುವ ಮುನ್ನ ತನ್ನನ್ನು ನಂಬಿದ ಮನುಷ್ಯರ ಪ್ರಾಣ ಉಳಿಸಿದ ಆಪತ್ಬಾಂಧವ. ಆದರೆ, ಮನುಷ್ಯರೆನಿಸಿಕೊಂಡ ಅರಣ್ಯಾಧಿಕಾರಿಗಳಿಗೆ ಮಾತ್ರ ಅರ್ಜುನನ ಕೊನೇ ಕ್ಷಣಗಳು ಗೊತ್ತಾಗಲೇ ಇಲ್ಲ. 64 ವರ್ಷದ ಅರ್ಜುನ 34 ವರ್ಷದ ಮದಗಜದೊಂದಿಗೆ ಹೋರಾಡುವಾಗಲೂ ಚಾಮುಂಡೇಶ್ವರಿಯ ಪ್ರೀತಿಯ ಮಗನನ್ನು ಉಳಿಸಿಕೊಳ್ಳಬೇಕು ಎಂಬ ಕನಿಷ್ಠಪ್ರಜ್ಞೆಯೂ ತೋರಿಲ್ಲ. ಈ ವಯಸ್ಸಿನಲ್ಲಿ ಇಂಥಾ ಕೆಲಸಕ್ಕೆ ತನ್ನನ್ನು ಬಳಸಿಕೊಂಡರು ಕೂಡಾ ಹೋರಾಡುತ್ತಲೇ ಹುತಾತ್ಮನಾದ ಅರ್ಜುನ. ಆದರೆ, ಈ ಸಾವಿನ ಹೊಣೆ ಹೊರೋದು ಯಾರು?. ಅರ್ಜುನನ ಅಭಿಮಾನಿಗಳ ನೋವಿಗೆ ಕೊನೆಯೆಲ್ಲಿ..?

ಇದನ್ನೂ ಓದಿ: ಸೌಮ್ಯ ಸ್ವಭಾವದ ಅರ್ಜುನನಿಗೆ ಕಡೇ ಕ್ಷಣದಲ್ಲಿ ಯಮಯಾತನೆ – ನಾಡದೇವಿ ಚಾಮುಂಡೇಶ್ವರಿಯ ಪ್ರೀತಿ ಪುತ್ರನೇ ಹೋಗಿ ಬಾ  

ಒಂದೆಡೆ ಅರ್ಜುನ ಇನ್ನಿಲ್ಲ ಎಂಬ ಸುದ್ದಿ ಕೇಳಿ ಅಭಿಮಾನಿಗಳ ನೋವು.. ಮನೆ ಮಗನಾಗಿ, ಜೀವನಕ್ಕೆ ಆಧಾರವಾಗಿ ನಿಂತಿದ್ದ ಅರ್ಜುನನ ಕಳೆದುಕೊಂಡು ರೋದಿಸುತ್ತಿದ್ದ ಮಾವುತ.. ಅರಣ್ಯಾಧಿಕಾರಿಗಳ ವಿರುದ್ಧ ಧಿಕ್ಕಾರದ ಕೂಗು.. ಏನೇ ಆದರೂ ಹೋದ ಜೀವ ಮರಳಿ ಬರುವುದಿಲ್ಲ ಎಂಬುವುದೇ ಕಟುಸತ್ಯ. ಆದರೆ, ಈ ಜೀವ ಹೋಗಲು ಹೊಣೆ ಯಾರು?.. 8 ಬಾರಿ ದಸರಾ ಅಂಬಾರಿ ಹೊತ್ತಿರುವ ಅರ್ಜುನನನ್ನು ಕಾಪಾಡಿಕೊಳ್ಳಲು ಸಾಧ್ಯವಾಗದೇ ಹೋಗಿದ್ದು ಯಾಕೆ?. 64 ವರ್ಷದ ಅರ್ಜುನನನ್ನು ಇಷ್ಟು ಸುಲಭವಾಗಿ ಸಾಯಲು ಬಿಟ್ಟಿದ್ದು ಯಾಕೆ? ಈ ಎಲ್ಲಾ ಪ್ರಶ್ನೆಗಳು ಮಾತ್ರ ಕಾಡುತ್ತಲೇ ಇದೆ.. ಇದರ ಮಧ್ಯೆ ಅರ್ಜುನನ ಮಾವುತನ ದುಃಖಕ್ಕೆ ಕೊನೆಯೇ ಇಲ್ಲ.

ನನ್ನ ಆನೆಯನ್ನು ಮೈಸೂರಿಗೆ ಕಳುಹಿಸಿಕೊಡಿ. ಇಲ್ಲಾ ನನ್ನನ್ನು, ನನ್ನ ಕುಟುಂಬವನ್ನು ಅರ್ಜುನನ ಜೊತೆ ಮಣ್ಣು ಮಾಡಿ ಎಂದು ಮಾವುತ ವಿನು ಗೋಳಾಡುತ್ತಿದ್ದಾರೆ. ವಿಪರ್ಯಾಸವೆಂದರೆ, ಚಾಮುಂಡೇಶ್ವರಿಯ ಸೇವೆ ಮಾಡಿದ ಅರ್ಜುನನ್ನೇ ಉಳಿಸಿಕೊಳ್ಳದವರು, ಮಾವುತನ ನೋವನ್ನು ಕೇಳುತ್ತಾರಾ… ಇಲ್ಲಿ, ಕಳೆದುಕೊಂಡಿದ್ದಕ್ಕೆ ಬೆಲೆ ಸಿಗುತ್ತದೆಯೇ..

ಅರ್ಜುನನ ಪಾರ್ಥೀವಶರೀರದ ಬಳಿ ಮಾವುತ ವಿನು ಕಣ್ಣೀರಿಡುತ್ತಲೇ ಇದ್ದಾರೆ. ಅರ್ಜುನನ ಸೊಂಡಿಲನ್ನು ತಬ್ಬಿಕೊಂಡು ನನ್ನ ಆನೆಯನ್ನು ಬದುಕಿಸಿಕೊಡಿ. ನನ್ನ ಆನೆಯನ್ನು ಮೈಸೂರಿಗೆ ಕಳುಹಿಸಿಕೊಡಿ. ಇಲ್ಲವೇ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಅರ್ಜುನನ ಜೊತೆ ಮಣ್ಣು ಮಾಡಿ. ಅರ್ಜುನ ಸತ್ತಿಲ್ಲ ಎಂದು ನನ್ನ ಹೆಂಡತಿ ಮಕ್ಕಳಿಗೆ ಹೇಳಿದ್ದೇನೆ. ಅರ್ಜುನನನ್ನು ನನ್ನ ಜೊತೆ ಕಳುಹಿಸಿಕೊಡಿ ಎಂದು ಮಾವುತ ಅರ್ಜುನನ ಎದುರು ರೋಧಿಸಿದ್ದಾರೆ. ವಿನುವಿನ ಆಕ್ರಂದನ ನೋಡಿ ನೆರೆದ ಜನ ಕೂಡಾ ಬಿಕ್ಕಿಬಿಕ್ಕಿ ಅಳುತ್ತಿದ್ದರು.

ವಿನು ಅವರು ಅರ್ಜುನನ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ಇದೀಗ ಅರ್ಜುನನ ಸಾವಿನ ನೋವನ್ನು ಅರಗಿಸಿಕೊಳ್ಳಲಾಗದೆ ರೋಧಿಸುತ್ತಿದ್ದಾರೆ. ಮಂಗಳವಾರ ಅರ್ಜುನನ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಿಂದ ಚೇತರಿಸಿಕೊಂಡು ಬಂದಿದ್ದ ವಿನು ಅವರು ತನ್ನ ಪ್ರೀತಿಯ ಅರ್ಜುನನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಇನ್ನು ನಾಗಮ್ಮ ಎಂಬವರು ಅರ್ಜುನನ್ನು ಕಂಡು ಕಣ್ಣೀರಿಟ್ಟರು. ದೇವರೇ ಅರ್ಜುನನ್ನು ನಿನ್ನಲ್ಲಿ ಸೇರಿಸಿಕೊಳ್ಳು. ಅರ್ಜುನನಿಗೆ ಮುಕ್ತಿ ಕೊಡು ದೇವರೇ ಎಂದು ಕಣ್ಣೀರು ಹಾಕಿದರು.

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮಹಾ ಪ್ರಮಾದವೊಂದು ನಡೆದಿರುವ ಬಗ್ಗೆ ಸಂಶಯ ಮೂಡಿದೆ. ಗುರಿ ತಪ್ಪಿ ಬಿದ್ದ ಅದೊಂದು ಗುಂಡೇಟಿನಿಂದ ಅರ್ಜುನ ಬಲ ಕಳೆದುಕೊಂಡು ಕಾದಾಡಲಾಗದೆ ಸೋಲೊಪ್ಪಿದನಾ ಎಂಬ ಪ್ರಶ್ನೆ ಮೂಡಿದೆ. ಅಥವಾ ಅರವಳಿಕೆ ಮದ್ದು ಅರ್ಜುನನಿಗೆ ಬಿದ್ದು ಹೀಗೆಲ್ಲಾ ಆಯ್ತಾ ಎಂಬ ಸಂಶಯವೂ ಮೂಡಿದೆ. ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಆಗಿರುವ ಯಡವಟ್ಟಿನ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಮದದಲ್ಲಿರುವ ಕಾಡಾನೆ ಹುಚ್ಚಾನೆಯಂತೆ ವರ್ತಿಸುತ್ತದೆ ಎಂಬ ಜ್ಞಾನ ಇದ್ದರೂ ತಪ್ಪು ನಿರ್ಧಾರದಿಂದಲೇ ಅರ್ಜುನನ ಸಾವಿಗೆ ಎಲ್ಲರೂ ಕಾರಣವಾದರೇ ಎಂಬ ಆರೋಪವೂ ಕೇಳಿಬರುತ್ತಿದೆ. ಈ ಎಲ್ಲಾ ಸಂಶಯಗಳನ್ನು ಬಗೆಹರಿಸಲು ಅರ್ಜುನನ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಎಲ್ಲೆಡೆ ಒತ್ತಾಯಿಸಲಾಗುತ್ತಿದೆ. ಕಾರ್ಯಾಚರಣೆ ವೇಳೆ ಆದ ಯಡವಟ್ಟಿನ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಹಿಸಲಾಗುತ್ತಿದೆ.

ಇನ್ನೂ ವಿಪರ್ಯಾಸವೇನು ಗೊತ್ತಾ.. ಅರ್ಜುನನಿಗೆ ತನ್ನ ಎದುರು ನಿಂತಿರುವ ಕಾಡಾನೆ ಬಲಿಷ್ಠ ಅಂತಾ ಮನದಟ್ಟಾಗಿತ್ತು. ಹೀಗಾಗಿ ತನ್ನ ಮೇಲೇರಿದ್ದ ಅಧಿಕಾರಿಗಳು ಮತ್ತು ಮಾವುತನನ್ನು ಕೆಳಗೆ ಇಳಿಯಲು ಬಿಟ್ಟ ಅರ್ಜುನ ಕಾದಾಡಲು ಮುಂದಾಗಿದ್ದ. ಚಾಮುಂಡೇಶ್ವರಿಯ ಆಶೀರ್ವಾದ ಪಡೆದ ಗಜರಾಜ ಇಲ್ಲೂ ಕರ್ತವ್ಯಪ್ರಜ್ಞೆ ಮರೆದಿದ್ದ. ಮಾತು ಬಾರದೇ ಇದ್ದರೂ ತನ್ನ ಕರ್ತವ್ಯವನ್ನು ನಿಭಾಯಿಸಿದ್ದ. ತನ್ನನ್ನು ನಂಬಿ ಬಂದವರ ಪ್ರಾಣವನ್ನು ಉಳಿಸಿದ್ದ. ಆದರೆ, ಮಾತು ಬಂದ ಮನುಷ್ಯರು ಏನು ಮಾಡಿದರು. ಇಡೀ ಕರ್ನಾಟಕಕ್ಕೆ ಬೇಕಾದ ಗಜರಾಜ ಅರ್ಜುನನ್ನು ಕೊಂದೇ ಬಿಟ್ಟರು.

Sulekha