64 ವರ್ಷದ ಅರ್ಜುನನನ್ನು ಕಾರ್ಯಾಚರಣೆಗೆ ಬಳಸಿಕೊಂಡಿದ್ದೇಕೆ – ಕಾಡಾನೆ ಆಪರೇಷನ್ ನಲ್ಲಿ ರೂಲ್ಸ್ ಫಾಲೋ ಮಾಡಲಿಲ್ವಾ?

64 ವರ್ಷದ ಅರ್ಜುನನನ್ನು ಕಾರ್ಯಾಚರಣೆಗೆ ಬಳಸಿಕೊಂಡಿದ್ದೇಕೆ – ಕಾಡಾನೆ ಆಪರೇಷನ್ ನಲ್ಲಿ ರೂಲ್ಸ್ ಫಾಲೋ ಮಾಡಲಿಲ್ವಾ?

ಹಾಸನದ ಸಕಲೇಶಪುರದಲ್ಲಿ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ದಸರಾ ಮಾಜಿ ಕ್ಯಾಪ್ಟನ್ ಅರ್ಜುನ ಸಾವನ್ನಪ್ಪಿದ್ದಾನೆ. ಆದರೆ ಅರ್ಜುನನ ಸಾವಿನ ಹಿಂದೆ ಹಲವಾರು ಅನುಮಾನಗಳು ಮೂಡಿವೆ. ಯಾಕಂದ್ರೆ  60 ವರ್ಷ ತುಂಬಿತು ಅಂತಾ ನಾಲ್ಕು ವರ್ಷಗಳ ಹಿಂದೆಯೇ ಅರ್ಜುನನನ್ನ ದಸರೆಯ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಗೊಳಿಸಲಾಗಿತ್ತು. ಇಷ್ಟಾದ್ರೂ ಕಾರ್ಯಾಚರಣೆಗೆ ಹೇಗೆ ಬಳಸಿಕೊಂಡ್ರು ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.

ಪ್ರಸ್ತುತ 64 ವರ್ಷ ವಯಸ್ಸಿನ ಅರ್ಜುನನನ್ನ ದರಸೆಯಿಂದ ನಿವೃತ್ತನಾದ್ರೂ ಕಾರ್ಯಾಚರಣೆಗೆ ಇಳಿಸಿದ್ದೇಕೆ..? ಕಾಡಾನೆ ಕಾರ್ಯಾಚರಣೆಗೆ ಅರ್ಜುನನನ್ನ ಬಳಸಲು ಅರಣ್ಯಾಧಿಕಾರಿಗಳು ಅನುಮತಿ ಪಡೆದುಕೊಂಡಿದ್ರಾ..? ಮದವೇರಿ ಬಂದಿದ್ದ ಕಾಡಾನೆಯನ್ನ ಹಿಮ್ಮೆಟ್ಟಿಸಲು ಅರ್ಜುನನನ್ನು ಏಕೆ ಮುಂದೆ ಬಿಡಬೇಕಿತ್ತು.? ಕುಮ್ಕಿ ಆನೆಗಳೇ ಹಿಂದೆ ಸರಿದ ಮೇಲೂ ಅರ್ಜುನನನ್ನು ಮುಂದೆ ಕಳಿಸಿದ್ದು ಎಷ್ಟರ ಮಟ್ಟಿಗೆ ಸರಿ.? ತಜ್ಞ ವೈದ್ಯರು, ಅನುಭವಿಗಳು, ಆನೆ ಪಳಗಿಸುವ ಸಿಬ್ಬಂದಿ ಸ್ಥಳದಲ್ಲಿ ಇರಲಿಲ್ವಾ..? ಕಾರ್ಯಾಚರಣೆ ನಡೆಸುತ್ತಿದ್ದ ಸಿಬ್ಬಂದಿಯ ಬೇಜವಬ್ದಾರಿಯಿಂದಲೇ ದೊಡ್ಡ ಪ್ರಮಾದ ನಡೆಯಿತಾ..? ಕಾಡಾನೆಗೆ ಬೀಳಬೇಕಿದ್ದ ಅರಿವಳಿಕೆ ಇಂಜೆಕ್ಷನ್ ಅರ್ಜುನ ಆನೆಗೆ ಬಿದ್ದಿದ್ದೇಗೆ..? ಪುಂಡಾನೆ ಮತ್ತು ಅರ್ಜುನ ಆನೆ ಯಾವುದು ಅನ್ನೋ ಜ್ಞಾನ ಅರಿವಳಿಗೆ ತಜ್ಞರಿಗೆ ಇರಲಿಲ್ವಾ..? ಅದ್ರಲ್ಲೂ ನೆರೆರಾಜ್ಯಗಳಿಗೆ ಆನೆ ಕೊಡಲು ನಮ್ಮ ಆನೆಗಳನ್ನ ಸೆರೆ ಹಿಡಿಯುವ ಅಗತ್ಯವಿದೆಯಾ..? ಬೇಜವಬ್ದಾರಿ ತೋರಿರುವ ಅಧಿಕಾರಿಗಳಿಗೆ ಶಿಕ್ಷೆ ಕೊಡಿಸುವಂತಹ ಕೆಲಸ ಆಗುತ್ತಾ..? ಇಂತಹ ಕೆಲವೇ ಬೇಜವಬ್ದಾರಿಯುವ ಘಟನೆಗಳಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರಲ್ವಾ..?

ಇದನ್ನೂ ಓದಿ : 10 ವರ್ಷದ ಸುಂದರ ಅರ್ಜುನನಾಗಿದ್ದು ಹೇಗೆ ? – ಕ್ಯಾಪ್ಟನ್ ಅರ್ಜುನ ಕನ್ನಡಿಗರ ಹೃದಯದಲ್ಲಿ ಸದಾ ಅಮರ…

ಕಾಡು ನಾಶವಾಗ್ತಿದೆ. ಮರಗಿಡಗಳಿದ್ದ ಭೂಮಿಯಲ್ಲಿ ಮುಗಿಲೆತ್ತರದ ಕಟ್ಟಡಗಳು ತಲೆ ಎತ್ತುತ್ತಿವೆ. ಕಾಡಂಚಿನ ಪ್ರಾಣಿಗಳು ಊರಿಗೆ ಬರೋದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಹುಲಿ, ಆನೆ, ಚಿರತೆಯಂಥಾ ವನ್ಯಮೃಗಗಳು ಕಾಟ ಜಾಸ್ತಿ ಆದಾಗ ನೆನಪಾಗೋದೇ ಸಾಕಾನೆಗಳು. ಕ್ರೂರಮೃಗಗಳ ಮುಂದೆ ಸಾಕಾನೆಗಳನ್ನ ಕರೆದೊಯ್ದು ನಿಲ್ಲಿಸುವ ಅರಣ್ಯಾಧಿಕಾರಿಗಳು ಅವುಗಳ ಸುರಕ್ಷತೆಯಲ್ಲಿ ಮಾತ್ರ ಮೈಮರೆಯುತ್ತಿದ್ದಾರೆ. ಕಾಡಿಗೆ ನುಗ್ಗಿ ಆನೆಗಳನ್ನು ಹಿಮ್ಮೆಟ್ಟಿಸೋ ಕೆಲಸ ಶುರುವಾಗೋ ಮೊದಲೇ ಹಲವಾರು ಕ್ರಮಗಳನ್ನ ಕೈಗೊಳ್ಳಬೇಕಾಗುತ್ತೆ. ಅದಕ್ಕೆಂದೇ ಕಂಟ್ರೋಲ್‌ ರೂಂ ತೆರೆಯಬೇಕು. ಕಾಡಿನ ವಾಚರ್ ‌ಗಳಿಂದ ಹಿಡಿದು ಪಿಸಿಸಿಎಫ್‌ ವರೆಗೂ ಎಲ್ಲರಿಗೂ ಕ್ಷಣಕ್ಷಣದ ಮಾಹಿತಿ ರವಾನೆ ಆಗಬೇಕು. ಕಾಡಾನೆಗಳ ಆಪರೇಷನ್​ಗೆ ತೆರಳೋ ಮುನ್ನ ಈ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿರಬೇಕು.

ಆನೆ ಆಪರೇಷನ್‌ಗೆ ವಿಶೇಷವಾಗಿ 3 ತಂಡಗಳ ರಚನೆಯಾಗಬೇಕು. ಲೀಡ್‌ ಟೀಂ, ಟ್ರ್ಯಾಕಿಂಗ್‌ ಟೀಂ ಮತ್ತು ಡ್ರೈವಿಂಗ್ ಟೀಂ ಅಂತಾ. ಆನೆ ಹೆಜ್ಜೆ ಗುರುತು ಜಾಡು ಹಿಡಿದು 5 ಸಿಬ್ಬಂದಿಯುಳ್ಳ ಲೀಡ್ ಟೀಂ ಮೊದಲು ಹೋಗುತ್ತೆ. ಅದರ ಹಿಂದೆ ಹೋಗೋ ಟ್ರ್ಯಾಕಿಂಗ್ ಟೀಂ ಆನೆ ಇರೋ ಜಾಗ ಗುರುತಿಸಿ ಡ್ರೈವಿಂಗ್ ಟೀಂಗೆ ಮೆಸೇಜ್ ಕಳಿಸುತ್ತೆ. ಡ್ರೈವಿಂಗ್ ಟೀಂನಲ್ಲಿ 10-15 ತಜ್ಞರೇ ಇರಬೇಕು. ಜೊತೆಗೆ ರಕ್ಷಣಾ ಕಿಟ್‌‌ಗಳು, ಪಟಾಕಿಗಳು, ಪಂಪ್‌ ಗನ್‌ ಅಗತ್ಯ. ಈ ಎಲ್ಲವನ್ನೂ ಉಳ್ಳ ಡ್ರೈವಿಂಗ್ ಟೀಂ ಆನೆ ಇರೋ ಜಾಗಕ್ಕೆ ನುಗ್ಗುತ್ತೆ. ಆನೆ ಇರೋ ಜಾಗಕ್ಕೆ ನುಗ್ಗಿದ ಡ್ರೈವಿಂಗ್‌ ಟೀಂಗೆ ರಕ್ಷಣಾ ಸಾಮಗ್ರಿಗಳಂತೆಯೇ ಕುಮ್ಕಿ ಆನೆಗಳ ಅಗತ್ಯತೆ ಇದ್ದೇ ಇರುತ್ತೆ. ಗಂಡಾನೆ ಸೆರೆಗೆ ಹೆಣ್ಣಾನೆ ಕುಮ್ಕಿ ಆಗಿರಬೇಕು, ಹೆಣ್ಣಾನೆ ಸೆರೆಗೆ ಗಂಡಾನೆ ಕುಮ್ಕಿ ಆಗಿರಬೇಕು. ಆಗ ಮಾತ್ರ ಪುಂಡಾನೆ ಅಥವಾ ಕಾಡಾನೆಯನ್ನ ಸೆರೆ ಹಿಡಿಯೋಕೆ ಸಹಕಾರಿಯಾಗುತ್ತೆ. ಅಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಪಂಚಾಯ್ತಿ ಪ್ರತನಿಧಿಗಳು, ಸ್ಥಳೀಯ ಊರಿನ ಜನರ ಉಪಸ್ಥಿತಿಯೂ ಬೇಕಾಗುತ್ತೆ. ಎಲ್ಲರ ಸಹಕಾರದಿಂದಲೇ ಇಲಾಖೆಯ RRT ಟೀಂ ಆಪರೇಷನ್‌ಗೆ ಇಳಿಯೋದು. ಅರಿವಳಿಕೆ ಮದ್ದು, ಔಷಧಿ, ಟಾರ್ಚ್‌, ಸರ್ಚ್‌ ಲೈಟ್, ಕ್ಯಾಮೆರಾ, ಅರಣ್ಯ ವಾಹನ ಜೊತೆಗೆ ಆ್ಯಂಬುಲೆನ್ಸ್‌ ಕೂಡ ಕಡ್ಡಾಯವಾಗಿ ಇರಬೇಕು. ರಕ್ಷಣೆಗಾಗೇ ಪ್ರತ್ಯೇಕ ಅಡಗುತಾಣ ರಚನೆ ಮಾಡಿಕೊಂಡು ಡ್ರೋಣ್‌, ಬೈನಾಕ್ಯುಲರ್‌ಗಳ ಬಳಸಿ ಆಪರೇಷನ್‌ ಮಾಡಬೇಕೆಂಬುದು ನಿಯಮ.

ಆದರೆ, ಈ ಎಲ್ಲಾ ನಿಯಮಗಳು ಹಾಸನ ಅರಣ್ಯ ಪ್ರದೇಶದಲ್ಲಿ ಅನ್ವಯವಾಗಿದ್ವಾ ಅನ್ನೋದೇ ಪ್ರಶ್ನೆ. ಈ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದ್ರೂ ಅರ್ಜುನನನ್ನ ಪುಂಡಾನೆ ಜೊತೆಗೆ ಏಕಾಂಗಿಯಾಗಿ ಹೋರಾಡಲು ಬಿಟ್ಟಿದ್ದು ಬಹುದೊಡ್ಡ ತಪ್ಪು. ಇದೇ ಕಾರಣಕ್ಕೆ ಅರ್ಜುನನ ಸಾವಿಗೆ ಅಧಿಕಾರಿಗಳೇ ನೇರ ಹೊಣೆ ಎಂದು ಪ್ರತಿಭಟನೆ ಕೂಡ ನಡೆಸಲಾಯ್ತು. ಡಿಎಫ್ ಒರನ್ನು ಅಮಾನತು ಮಾಡಬೇಕು ಎಂದು ಆಕ್ರೋಶ ಹೊರ ಹಾಕಿದ್ರು. ಮತ್ತೊಂದೆಡೆ ಸಕಲೇಶಪುರ ತಾಲೂಕಿನ ದಬ್ಬಳಿಕಟ್ಟೆ ಸಮೀಪದ ಕೆಎಫ್​ಡಿಸಿ ನೆಡುತೋಪಿನಲ್ಲಿ ಅರ್ಜುನನ ಕಳೇಬರ ಇಡಲಾಗಿತ್ತು. ಸಾವಿರಾರು ಜನ ಬಂದು ಅರ್ಜುನನ ಅಂತಿಮ ದರ್ಶನ ಪಡೆದ್ರು. ನಿಸ್ತೇಜನಾಗಿ ಮಲಗಿದ್ದ ಅವನ ಸ್ಥಿತಿ ಕಂಡು ಕಣ್ಣೀರು ಹಾಕಿದ್ರು. ಅದ್ರಲ್ಲೂ ಅರ್ಜುನ ಆನೆಯ ಮಾವುತ ವಿನು ಅಂತೂ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ನನ್ನ ಆನೆ ಬದುಕಿಸಿ ನನ್ನ ಜೊತೆ ಕಳಿಸಿಕೊಡಿ. ಮನೆಯಲ್ಲಿ ಹೆಂಡತಿ ಮಕ್ಕಳೆಲ್ಲಾ ಅಳ್ತಿದ್ದಾರೆ. ಎಂಥ ರಾಜನನ್ನ ಮಿಸ್ ಮಾಡಿಕೊಂಡೆ ಎಂದು ಗೋಳಾಡುತ್ತಿದ್ದ. ಪದೇಪದೇ ಅರ್ಜುನನ ಬಳಿ ಹೋಗಿ ನನ್ನೊಂದು ಬಂದು ಬಿಡು ಎಂದು ಗೋಗರೆಯುತ್ತಿದ್ದ ಅವನ ದುಃಖ ಕಂಡು ಅಲ್ಲಿದ್ದವರ ಕಣ್ಣಾಲೆಗಳಲ್ಲೂ ನೀರು ಜಿನುಗುತ್ತಿತ್ತು.  ಕೊನೆಗೆ ಸಕಲ ಸರ್ಕಾರಿ ಗೌರವ ಹಾಗೂ ರಾಜ ಮರ್ಯಾದೆಯೊಂದಿಗೆ ಅರ್ಜುನನ ಅಂತ್ಯಕ್ರಿಯೆ ನಡೆಸಲಾಯ್ತು. ಮೈಸೂರು ಅರಮನೆಯ ಪುರೋಹಿತರು ಅರ್ಜುನನ ಅಂತಿಮ ವಿಧಿ ವಿಧಾನ ನೆರವೇರಿಸಿದ್ರು.

Shantha Kumari