ಕೆಂಗುಲಾಬಿಗಳಲ್ಲಿ ಅರಳಿದ ಅರ್ಜುನ – ದಸರಾ ಗಜಪಡೆಯ ಮಾಜಿ ಕ್ಯಾಪ್ಟನ್ ಗೆ ವಿಶೇಷ ನಮನ

ಕೆಂಗುಲಾಬಿಗಳಲ್ಲಿ ಅರಳಿದ ಅರ್ಜುನ – ದಸರಾ ಗಜಪಡೆಯ ಮಾಜಿ ಕ್ಯಾಪ್ಟನ್ ಗೆ ವಿಶೇಷ ನಮನ

ಮೈಸೂರು ದಸರಾ ಸಮಯದಲ್ಲಿ 8 ಬಾರಿ ಅಂಬಾರಿ ಹೊತ್ತು ನಾಡದೇವತೆ ಚಾಮುಂಡೇಶ್ವರಿಯನ್ನು ಮೆರೆಸಿದ್ದ  ಅರ್ಜುನ ಕಾಡಾನೆ ದಾಳಿಗೆ ಮೃತಪಟ್ಟಿದ್ದ. ಅರ್ಜುನನ ಸಾವಿಗೆ ಅರಣ್ಯ ಇಲಾಖೆ ಸಿಬ್ಬಂದಿಯೇ ನೇರ ಹೊಣೆಯಾಗಿದ್ದರು. ಅರ್ಜುನನ ಸಾವಿನ ಕುರಿತಂತೆ ಸಾಕಷ್ಟು ಅನುಮಾನಗಳೂ ವ್ಯಕ್ತವಾಗಿತ್ತು. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ. ಈ ನಡುವೆ ಮೈಸೂರಿನಲ್ಲಿ ಅರ್ಜುನ ಪ್ರತ್ಯಕ್ಷವಾಗಿದ್ದಾನೆ.

ಇದನ್ನೂ ಓದಿ : ಬಸ್‌ ಹತ್ತಿರದಿಂದ ಸಂಚರಿಸುವಾಗ ಎಚ್ಚರ! – ಸೈಕಲ್ ಸಹಿತ ಬಸ್ ಚಕ್ರಕ್ಕೆ ಸಿಲುಕಿದ್ದ ಸವಾರ ಗ್ರೇಟ್‌ ಎಸ್ಕೇಪ್‌!

ದಸರಾ ಗಜಪಡೆಯ ಮಾಜಿ ಕ್ಯಾಪ್ಟನ್ ಅರ್ಜುನ ಮತ್ತೆ ಅರಮನೆ ಆವರಣದಲ್ಲಿ ಕಳೆಗಟ್ಟುವಂತೆ ಮಾಡಿದ್ದಾನೆ.   ಅರಮನೆ ಆವರಣದಲ್ಲಿ ನಡೆಯುತ್ತಿರುವ ಮಾಗಿ ಉತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಅರ್ಜುನ ಆನೆಯು (Arjuna Elephant) ಕೆಂಗುಲಾಬಿಯಿಂದ ಕಂಗೊಳಿಸುತ್ತಿದೆ. ಪ್ರವಾಸಿಗರು, ಅರ್ಜುನ ಅಭಿಮಾನಿಗಳಿಗಂತೂ ಇದು ಭಾರೀ ಖುಷಿಕೊಟ್ಟಿದೆ. ಅರ್ಜುನನಿಗೂ ಮೈಸೂರಿಗೂ ಅವಿನಾಭಾವ ಸಂಬಂಧ. ಇದೇ ಕಾರಣಕ್ಕೆ ಅರ್ಜುನ ಮತ್ತೆ ಮೈಸೂರು ಅರಮನೆಗೆ ಬಂದಿದ್ದಾನೆ. ಕೆಂಪು ಬಣ್ಣದ ಗುಲಾಬಿ ಹಾಗೂ ಬಿಳಿ ಬಣ್ಣದ ಸೇವಂತಿಗೆ ಮತ್ತು ಇನ್ನಿತರ ಹೂವುಗಳಿಂದ‌ ಆನೆಯನ್ನು ನಿರ್ಮಿಸಲಾಗಿದೆ. ವಿಶೇಷವಾಗಿ ಅರ್ಜುನ ಆನೆಯು ಸೊಂಡಿಲು ಎತ್ತಿ ಆಶೀರ್ವದಿಸುವ ಭಂಗಿಯಲ್ಲಿ ಈ ಆಕೃತಿಯನ್ನು ರಚಿಸಲಾಗಿದೆ. ಹಾಗೂ ಆನೆಯ ವಿವರ ಮತ್ತು ಮತ್ತೆ ಹುಟ್ಟಿ ಬಾ ಅರ್ಜುನ ಎಂದು ನಮನ ಸಲ್ಲಿಸಲಾಗಿದೆ. ಇದರ ಜೊತೆಗೆ ಆನೆಯ ಪಕ್ಕದಲ್ಲಿ ಮೈಸೂರಿನ ಹಿರಿಮೆಯಾದ ಕುದುರೆ ಟಾಂಗಾ ಹಾಗೂ ಕರ್ನಾಟಕ ನಕ್ಷೆಯನ್ನು ನಿರ್ಮಾಣ ಮಾಡಿದ್ದು ಮಾಗಿ ಉತ್ಸವಕ್ಕೆ ಬರುವವವರ ಆಕರ್ಷಣೆಯಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಪುಂಡಾನೆ ಸೆರೆಗೆ ನಡೆದ ಕಾರ್ಯಾಚರಣೆಯ ವೇಳೆ ಅರ್ಜುನ ಪ್ರಾಣ ಕಳೆದುಕೊಂಡಿದ್ದ. ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅಂಬಾರಿ ಅರ್ಜುನ ಹುತಾತ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾತಂಡ ತನಿಖೆ ಆರಂಭಿಸಿದೆ. ದಸರಾ ಆನೆ ಅರ್ಜುನ ಸಾವಿನ ಬಗ್ಗೆ ಹಲವು ಅನುಮಾನ ಹಿನ್ನೆಲೆಯಲ್ಲಿ ನಿವೃತ್ತ ಮುಖ್ಯ ವನ್ಯಪಾಲಕರಾದ ಅಜಯ್ ಮಿಶ್ರ ತಂಡದಿಂದ ತನಿಖೆ ಶುರುವಾಗಿದೆ.

Shantha Kumari