ಐಪಿಎಲ್‌ಗೆ ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ – ಸಹೋದರಿ ಸಾರಾ ಸೇರಿದಂತೆ ಕ್ರಿಕೆಟಿಗರ ಶುಭಹಾರೈಕೆ

ಐಪಿಎಲ್‌ಗೆ ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ – ಸಹೋದರಿ ಸಾರಾ ಸೇರಿದಂತೆ ಕ್ರಿಕೆಟಿಗರ ಶುಭಹಾರೈಕೆ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕಡೆಗೂ ಐಪಿಎಲ್ ಅಂಗಳಕ್ಕೆ ಎಂಟ್ರಿಕೊಟ್ಟಿದ್ದಾರೆ. ಕಳೆದ 2 ವರ್ಷಗಳಿಂದಲೂ ಮುಂಬೈ ಬೆಂಚ್‌ಗಾಗಿ ಕಾದಿದ್ದ ಅರ್ಜುನ್ ತೆಂಡೂಲ್ಕರ್ ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕೆಕೆಆರ್ ವಿರುದ್ಧದ ಪಂದ್ಯ ಆಡುವ ಮೂಲಕ ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ. ಅಪ್ಪ ಸಚಿನ್ ತೆಂಡೂಲ್ಕರ್ ಆಡಿದ್ದ ಅದೇ ತಂಡದ ಮೂಲಕ ಮಗ ಐಪಿಎಲ್‌ಗೆ ಎಂಟ್ರಿ ಕೊಟ್ಟಿರುವುದು ವಿಶೇಷವಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಡೆಬ್ಯೂ ಕ್ಯಾಪ್ ನೀಡುವ ಮೂಲಕ ಅರ್ಜುನ್ ತೆಂಡುಲ್ಕರ್ ಅವರನ್ನು ತಮ್ಮ ತಂಡಕ್ಕೆ ಬರಮಾಡಿಕೊಂಡರು

ಇದನ್ನೂ ಓದಿ:  ‘ನಿನ್ನ ಶ್ರಮಕ್ಕೆ ತಕ್ಕ ಪ್ರತಿಫಲ…. ‘- ಮರಿ ತೆಂಡೂಲ್ಕರ್‌ಗೆ ಭಾವನಾತ್ಮಕ ಪತ್ರ ಬರೆದ ಅಕ್ಕ ಸಾರಾ

2022ರ ಐಪಿಎಲ್ ಹರಾಜಿನಲ್ಲಿ ಅರ್ಜುನ್, ಮುಂಬೈ ಇಂಡಿಯನ್‌ಗೆ 30 ಲಕ್ಷಕ್ಕೆ ಬಿಕರಿಯಾಗಿದ್ದರು. ಅದಕ್ಕೂ ಮುನ್ನ 2021ರಲ್ಲಿ 20 ಲಕ್ಷಕ್ಕೆ ಹರಾಜಾಗಿದ್ದರು. ಆದರೆ ಐಪಿಎಲ್‌ಗೂ ಮುನ್ನವೇ ಗಾಯಗೊಂಡಿದ್ದರಿಂದ ಟೂರ್ನಿಯಿಂದಲೇ ಹೊರಬಿದ್ದರು. 2021ರ ಆವೃತ್ತಿಯಲ್ಲಿ ಒಂದು ಪಂದ್ಯವನ್ನೂ ಆಡುವ ಅವಕಾಶ ಸಿಗಲಿಲ್ಲ. 2022ರಲ್ಲೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಹರಾಜಾದರೂ ಮೈದಾನದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆದ್ರೆ 16ನೇ ಆವೃತ್ತಿಯಲ್ಲಿ ಅದೃಷ್ಟ ಕೈಹಿಡಿದಿದ್ದು, ಕೊನೆಗೂ ಮೈದಾನಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಲ್ಕನೇ ಪಂದ್ಯದಲ್ಲಿ ಅರ್ಜುನ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬೌಲಿಂಗ್‌ನಲ್ಲಿ ಮಿಂಚಿದ್ದ ಅರ್ಜುನ್ಸ 2 ಓವರ್‌ಗಳಲ್ಲಿ ಕಂಟ್ರೋಲ್ ಮಾಡಿ 17 ರನ್ ನೀಡಿದ್ದಾರೆ.

ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ ಅರ್ಜುನ್ ತೆಂಡುಲ್ಕರ್ ಗೆ ಸಹೋದರಿ ಸಾರಾ ತೆಂಡೂಲ್ಕರ್ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ತಮ್ಮನ ಪಂದ್ಯವನ್ನು ವಾಂಖೇಡೆ ಮೈದಾನದಲ್ಲಿ ಕಣ್ತುಂಬಿಕೊಂಡ ಸಾರಾ, ತಮ್ಮ ಮುಂಬೈ ತಂಡದ ಕ್ಯಾಪ್ ಪಡೆಯುತ್ತಿರುವ ಕ್ಷಣದ ಫೋಟೋವನ್ನು ಹಂಚಿಕೊಳ್ಳುವುದರ ಜತೆಗೆ ಇದು ನಿನ್ನ ಸಹೋದರಿಯಾಗಿ ನನಗೆ ಅತ್ಯಂತ ಸಂತೋಷದ ಕ್ಷಣ ಎಂದು ಬರೆದುಕೊಂಡಿದ್ದಾರೆ.

ಇದೀಗ ಅರ್ಜುನ್ ತೆಂಡುಲ್ಕರ್ ಐಪಿಎಲ್‌ಗೆ ಪಾದಾರ್ಪಣೆ ಮಾಡುತ್ತಿದ್ದಂತೆಯೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು, ಯುವ ಕ್ರಿಕೆಟಿಗ ಅರ್ಜುನ್‌ಗೆ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ಕೊನೆಗೂ ಮುಂಬೈ ಪರ ಅರ್ಜುನ್ ಆಡುತ್ತಿರುವುದನ್ನು ನೋಡಿದರೆ, ಖುಷಿಯಾಗುತ್ತಿದೆ. ಚಾಂಪಿಯನ್‌ ತಂದೆ ಖಂಡಿತವಾಗಿಯೂ ಹೆಮ್ಮೆಪಡುತ್ತಿರಬಹುದು. ಆತನಿಗೆ ಶುಭವಾಗಲಿ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಶುಭ ಹಾರೈಸಿದ್ದಾರೆ.

ಅರ್ಜುನ್ ತೆಂಡುಲ್ಕರ್‌ಗೆ ಶುಭಾಶಯಗಳು. ಸಚಿನ್ ತೆಂಡುಲ್ಕರ್ ಹಾಗೂ ಅವರ ಕುಟುಂಬಕ್ಕೆ ಎಂತಹ ಹೆಮ್ಮೆಯ ಕ್ಷಣವಿದು. ನಾನು ಆತ ಬೆಳೆಯುವುದನ್ನು ನೋಡಿದ್ದೇನೆ, ಇದೀಗ ತನ್ನ ಕನಸಿನ ತಂಡವಾದ ಮುಂಬೈ ಜೆರ್ಸಿ ತೊಟ್ಟು ಐಪಿಎಲ್ ಆಡುವ ಕನಸು ನನಸಾಗಿಸಿಕೊಂಡಿದ್ದಾನೆ. ಚೆನ್ನಾಗಿ ಆಡು ಅರ್ಜುನ್ ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿ ಶುಭಕೋರಿದ್ದಾರೆ.

ಕೆಕೆಆರ್ ಎದುರಿನ ಪಂದ್ಯದಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ತೊಟ್ಟ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯುವ ಮೂಲಕ ವಿಶೇಷ ಸಂದೇಶವನ್ನು ಸಾರಿತು. ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ ಎನ್ನುವ ಘೋಷವಾಕ್ಯದೊಂದಿಗೆ ಮುಂಬೈ ತಂಡವು ಈ ಪಂದ್ಯದಲ್ಲಿ ಕಣಕ್ಕಿಳಿದಿತ್ತು. ರಿಲಯನ್ಸ್ ಫೌಂಡೇಶನ್ ಅವರ ಮುತುವರ್ಜಿಯಿಂದ ಈ ಕ್ರಮಕ್ಕೆ ಮುಂದಾಗಿದ್ದು, ಸುಮಾರು 19 ಸಾವಿರ ಬಾಲಕಿಯರು ಮುಂಬೈನ ವಾಂಖೇಡೆ ಮೈದಾನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವನ್ನು ವೀಕ್ಷಿಸಿದರು.

suddiyaana