ವಿಮಾನದಲ್ಲೇ ದಂಪತಿ ಮಧ್ಯೆ ಮಾರಾಮಾರಿ – ಬ್ಯಾಂಕಾಕ್‍ಗೆ ಹೊರಟಿದ್ದ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ!
ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತಿದೆ. ದಂಪತಿ ಮಧ್ಯೆ ಹೆಚ್ಚು ಸಮಯ ಜಗಳ ಮುಂದುವರಿಯುವುದಿಲ್ಲ ಅಂತಾ ಹೇಳಲಾಗುತ್ತಿತ್ತು. ಆದ್ರೆ ಈಗ ಕಾಲ ಬದಲಾಗಿದೆ. ಸಣ್ಣ ಪುಟ್ಟ ವಿಚಾರಕ್ಕೂ ದೊಡ್ಡ ಮಟ್ಟದಲ್ಲಿಯೇ ಜಗಳ ಮಾಡುತ್ತಾರೆ. ಪತಿ- ಪತ್ನಿಯ ನಡುವಿನ ಮನಸ್ಥಾಪ ಯಾವ ಹಂತಕ್ಕೂ ಕೂಡಾ ಹೋಗಬಹುದಾಗಿದೆ. ಎಲ್ಲೆಂದರಲ್ಲಿ ಕಿತ್ತಾಡುತ್ತಾರೆ. ಇದೀಗ ಇಲ್ಲೊಂದು ಜೋಡಿ ವಿಮಾನದಲ್ಲೇ ಜೋರಾಗಿ ಗಲಾಟೆ ಮಾಡಿಕೊಂಡಿದ್ದಾರೆ. ಇವರಿಬ್ಬರ ಜಗಳದಿಂದಾಗಿ ವಿಮಾನವನ್ನೇ ತುರ್ತು ಭೂಸ್ಪರ್ಶ ಮಾಡಬೇಕಾಗಿದೆ.
ಇದನ್ನೂ ಓದಿ: ಪ್ರಿಯತಮನ ಮೊಬೈಲ್‌ನಲ್ಲಿ 13,000 ನಗ್ನಚಿತ್ರಗಳು – ಫೋನ್ ಚೆಕ್ ಮಾಡಲು ಹೋದ ಪ್ರಿಯತಮೆಗೆ ಫುಲ್ ಶಾಕ್..!
ಹೌದು, ಲುಫ್ಥಾನ್ಸ ವಿಮಾನ ಸಂಖ್ಯೆ LH772 ಮ್ಯೂನಿಚ್‌ನಿಂದ ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ಗೆ ಹೋಗುತ್ತಿತ್ತು. ವಿಮಾನದಲ್ಲಿ ಪತಿ-ಪತ್ನಿಯರ ನಡುವೆ ಜಗಳ ನಡೆದಿದೆ. ಇಬ್ಬರ ನಡುವೆ ಜಗಳ ವಿಕೋಪಕ್ಕೆ ಹೋಗಿ ಮಾರಾಮಾರಿ ನಡೆದಿದೆ. ವಿಮಾನದ ಒಳಗಿನ ಪರಿಸ್ಥಿತಿ ಹದಗೆಟ್ಟ ನಂತರ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ತುರ್ತು ಭೂಸ್ಪರ್ಶ ಮಾಡಬೇಕಾಯಿತು.
ಪಾಕಿಸ್ತಾನದಲ್ಲಿ ಈ ವಿಮಾನವನ್ನು ಇಳಿಸಲು ಪ್ರಯತ್ನಿಸಲಾಗಿತ್ತು, ಆದರೆ ಅಲ್ಲಿನ ವಿಮಾನ ನಿಲ್ದಾಣ ಪ್ರಾಧಿಕಾರ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ವಿಮಾನವನ್ನು ದೆಹಲಿ ಕಡೆಗೆ ತಿರುಗಿಸಲಾಯಿತು. ದೆಹಲಿ ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಈ ಸುದ್ದಿಯನ್ನು ಸ್ವೀಕರಿಸಿದ ತಕ್ಷಣ, ಭದ್ರತಾ ಸಿಬ್ಬಂದಿ ವಿಮಾನ ನಿಲ್ದಾಣವನ್ನು ತಲುಪಿ ಫ್ಲೈಟ್ ಗೇಟ್ ತೆರೆದಿದ್ದಾರೆ.
ಆದರೆ, ಪತಿ-ಪತ್ನಿ ಎಲ್ಲಿಂದ ಬಂದವರು ಮತ್ತು ಅವರ ನಡುವಿನ ಜಗಳಕ್ಕೆ ಕಾರಣವೇನು ಎಂಬ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಈ ಘಟನೆಯ ನಂತರ ವ್ಯಕ್ತಿಯನ್ನು ವಿಮಾನದಿಂದ ಕೆಳಗಿಳಿಸಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಲುಫ್ತಾನ್ಸ ಏರ್ ಯಾವುದೇ ಹೇಳಿಕೆಯನ್ನು ನೀಡಿಲ್ಲ.