ಜೂನ್ 16ರಿಂದಲೇ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ – ಯಾವ್ಯಾವ ಮಾಹಿತಿ ಸಲ್ಲಿಕೆ ಮಾಡಬೇಕು ಗೊತ್ತಾ?
ಗೃಹಲಕ್ಷ್ಮೀ ಯೋಜನೆ. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದು. ಈಗಾಗಲೇ ಶಕ್ತಿ ಯೋಜನೆ ಜಾರಿಗೊಳಿಸಿರುವ ಸರ್ಕಾರ ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ. ಇದೀಗ ಗೃಹಲಕ್ಷ್ಮೀ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್ ಆಗಿದ್ದು ಜೂನ್ 16ರಿಂದ ಅರ್ಜಿ ಸಲ್ಲಿಕೆ ಮಾಡಬಹುದು.
ಇದನ್ನೂ ಓದಿ : ಅಕ್ಕಿ ಕೊಡುತ್ತೇವೆಂದು ಒಪ್ಪಿ ಕೈ ಕೊಟ್ಟ ಕೇಂದ್ರ – ಜುಲೈ 1 ರಿಂದ ‘ಅನ್ನಭಾಗ್ಯ’ ಜಾರಿ ಡೌಟ್!
ಗೃಹಲಕ್ಷ್ಮೀ ಯೋಜನೆಗೆ(Gruha Lakshmi Scheme) ನಾಳೆಯಿಂದ ಅಂದರೆ ಜೂನ್ 16ರಿಂದ ಆನ್ಲೈನ್, ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ ಮಾಡಿದ್ದಾರೆ. ಬಿಪಿಎಲ್, ಅಂತ್ಯೋದಯ ಕಾರ್ಡ್ದಾರರು ಗೃಹಲಕ್ಷ್ಮೀ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಸಬಹುದು. ಸೇವಾಸಿಂಧು ಪೋರ್ಟಲ್, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಮಹಿಳೆ ಆಧಾರ್ ಕಾರ್ಡ್, ಪತಿ ಆಧಾರ್ ಕಾರ್ಡ್ ಮಾಹಿತಿ ನೀಡಬೇಕು. ಈ ಬಗ್ಗೆ ಯಾವುದೇ ಗೊಂದಲಗಳಿದ್ದರೆ ಸಹಾಯವಾಣಿ ಸಂಖ್ಯೆ 1902ಕ್ಕೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು. ಅಲ್ಲದೇ ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ. ಅರ್ಜಿ ಸಲ್ಲಿಸಲು ಪ್ರಕ್ರಿಯೆ ವರ್ಷ ಪೂರ್ತಿ ನಿರಂತರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ನಾಳೆ ಶಕ್ತಿ ಭವನದಲ್ಲಿ ಸಿದ್ದರಾಮಯ್ಯನವರಿಂದ ಸೇವಾ ಸಿಂಧು ವೆಬ್ ಲಾಂಚ್ ಆಗಲಿದ್ದು, ನಾಳೆ ಮಧ್ಯಾಹ್ನ 1.30ರಿಂದ ಅರ್ಜಿ ಸಲ್ಲಿಕೆ ಮಾಡಬಹುದು. ‘ಗೃಹಲಕ್ಷ್ಮೀ’ಯೋಜನೆಗೆ ವಾರ್ಷಿಕ ಅಂದಾಜು 30 ಸಾವಿರ ಕೋಟಿ ವೆಚ್ಚ ನಿರೀಕ್ಷೆ ಇದ್ದು, ಆಗಸ್ಟ್ 18ರಂದು ಬೆಳಗಾವಿ ಅಥವಾ ಹುಬ್ಬಳ್ಳಿಯಲ್ಲಿ ‘ಗೃಹಲಕ್ಷ್ಮೀ’ಗೆ ಚಾಲನೆಗೆ ಸಿಎಂ ಸಿದ್ದರಾಮಯ್ಯನವರ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.