ಮಕ್ಕಳನ್ನು ಹೆರುವಂತೆ ಮಹಿಳೆಯರಿಗೆ ಮನವಿ – ಬಿಕ್ಕಿ ಬಿಕ್ಕಿ ಅತ್ತ ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್

ಮಕ್ಕಳನ್ನು ಹೆರುವಂತೆ ಮಹಿಳೆಯರಿಗೆ ಮನವಿ – ಬಿಕ್ಕಿ ಬಿಕ್ಕಿ ಅತ್ತ ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್

ಜನಸಂಖ್ಯೆ ಮೇಲೆ ನಿಯಂತ್ರಣ ಹೇರಬೇಕು ಎಂಬ ಮಾತು ಕೇಳಿಬರುವ ಈ ಕಾಲದಲ್ಲಿ ಮಕ್ಕಳನ್ನು ಹೆರುವಂತೆ ಒಂದು ದೇಶದ ಸರ್ವಾಧಿಕಾರಿ ಕಣ್ಣೀರು ಇಡುತ್ತಿದ್ದಾರೆ. ನಿಮಗೇನು ಸೌಲಭ್ಯ ಬೇಕು ಕೊಡ್ತೀನಿ. ನೀವು ಮಕ್ಕಳನ್ನು ಹೆತ್ತು ಜನಸಂಖ್ಯೆ ಹೆಚ್ಚಿಸಬೇಕು ಎಂದು ಮಹಿಳೆಯರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಈಗಾಗಲೇ ಆ ದೇಶದಲ್ಲಿ ಅನೇಕ ಸೌಲತ್ತು ನೀಡಲಾಗಿದೆ. ಆದರೆ, ಮಕ್ಕಳನ್ನು ಹೆರಲು ಮಹಿಳೆಯರು ಮನಸು ಮಾಡುತ್ತಿಲ್ಲ. ಹೀಗಾಗಿ ದೇಶದ ಸರ್ವಾಧಿಕಾರಿಯೇ ಕಣ್ಣೀರು ಹಾಕಬೇಕಾದ ಪರಿಸ್ಥಿತಿ ಬಂದೊಂದಗಿದೆ.

ಇದನ್ನೂ ಓದಿ: ನೈಜೀರಿಯಾದಲ್ಲಿ ಗುರಿ ತಪ್ಪಿದ ಡ್ರೋನ್‌ ದಾಳಿ – 85 ನಾಗರಿಕರು ದಾರುಣ ಸಾವು

ಉತ್ತರ ಕೊರಿಯಾದಲ್ಲಿ ಜನಸಂಖ್ಯಾ ಪ್ರಮಾಣ ಕಡಿಮೆಯಿದೆ. ಮಕ್ಕಳಿಗೆ ಜನ್ಮ ನೀಡುವ ಪ್ರಮಾಣವೂ ಕ್ಷೀಣಿಸುತ್ತಿದೆ. ಹೆಚ್ಚು ಮಕ್ಕಳನ್ನು ಹೆರುವಂತೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಹಿಳೆಯರಲ್ಲಿ ಮನವಿ ಮಾಡಿ ಕಣ್ಣೀರು ಹಾಕಿದ್ದಾರೆ. ದೇಶದಲ್ಲಿ ಜನನ ಪ್ರಮಾಣ ಕುಸಿಯುತ್ತಿರುವುದನ್ನು ತಡೆಯುವುದು ಮಹಿಳೆಯರ ಕರ್ತವ್ಯವಾಗಿದೆ. ನಮ್ಮ ಸರ್ಕಾರವು ಮಹಿಳೆಯರಿಗೆ ಹೆಚ್ಚು ಮಕ್ಕಳು ಹೆರುವ ನಿಟ್ಟಿನಲ್ಲಿ ಮನವಿ ಮಾಡುತ್ತಿದೆ ಎಂದು ತಾಯಂದಿರ ರಾಷ್ಟ್ರೀಯ ಸಭೆಯಲ್ಲಿ ಕಿಮ್ ಕಣ್ಣೀರಟ್ಟರು.

ಕಳೆದ 10 ವರ್ಷಗಳಿಂದ ಉತ್ತರ ಕೊರಿಯಾದಲ್ಲಿ ಜನನ ಪ್ರಮಾಣವು ಕುಸಿಯುತ್ತಿದೆ ಎಂದು ದಕ್ಷಿಣ ಕೊರಿಯಾದ ಸರ್ಕಾರ ಅಂದಾಜಿಸಿದೆ. ಎಲ್ಲಾ ರೀತಿಯ ನಿರ್ಬಂಧಗಳಿಂದ ಸುತ್ತುವರಿದ ತನ್ನ ಆರ್ಥಿಕತೆಯನ್ನು ಕಾಪಾಡಿಕೊಳ್ಳಲು ಸಂಘಟಿತ ಕಾರ್ಮಿಕರನ್ನು ಅವಲಂಬಿಸಿರುವ ದೇಶಕ್ಕೆ ಈ ಪರಿಸ್ಥಿತಿಯು ಆತಂಕಕಾರಿಯಾಗಿದೆ. ಉತ್ತರ ಕೊರಿಯಾ ಜನಸಂಖ್ಯೆಯ ಬೆಳವಣಿಗೆಯನ್ನು ನಿಧಾನಗೊಳಿಸಲು 1970-80 ರ ದಶಕದಲ್ಲಿ ಜನನ ನಿಯಂತ್ರಣ ಕಾರ್ಯಕ್ರಮವನ್ನು ಜಾರಿಗೆ ತಂದಿತು. ಸಿಯೋಲ್ ಮೂಲದ ಹ್ಯುಂಡೈ ರಿಸರ್ಚ್ ಇನ್ಸ್ಟಿಟ್ಯೂಟ್ ಆಗಸ್ಟ್ನಲ್ಲಿ ವರದಿಯೊಂದರಲ್ಲಿ 1990 ರ ದಶಕದ ಮಧ್ಯಭಾಗದಲ್ಲಿ ಕ್ಷಾಮದ ನಂತರ ದೇಶದ ಫಲವತ್ತತೆ ದರವು ಕುಸಿದಿದೆ ಎಂದು ಹೇಳಿದೆ.  ನೂರಾರು ಸಾವಿರ ಜನರು ಸತ್ತಿದ್ದಾರೆಂದು ಅಂದಾಜಿಸಲಾಗಿದೆ. ಉಚಿತ ವಸತಿ, ಸಬ್ಸಿಡಿಗಳು, ಉಚಿತ ಆಹಾರ, ಔಷಧ ಮತ್ತು ಗೃಹಪಯೋಗಿ ವಸ್ತುಗಳು, ಮಕ್ಕಳಿಗೆ ಶೈಕ್ಷಣಿಕ ಸವಲತ್ತುಗಳು ಸೇರಿದಂತೆ ಮೂರು ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಬೇಕಾದ ಸವಲತ್ತುಗಳನ್ನು ಒದಗಿಸಲಾಗುತ್ತದೆ ಎಂದು ಕಿಮ್ ತಿಳಿಸಿದ್ದಾರೆ. ಮಕ್ಕಳಿಗೆ ಜನ್ಮ ನೀಡಿ ಎಂದು ಮಹಿಳೆಯರಲ್ಲಿ ಮನವಿ ಮಾಡುತ್ತಾ ಕಣ್ಣೀರು ಹಾಕುತ್ತಿರುವ ಜನನಾಯಕ ಕಿಮ್ ಭಾವುಕತೆ ನೋಡಿ ಸಭೆಯಲ್ಲಿ ಅನೇಕ ಮಹಿಳೆಯರು ಕೂಡಾ ಕಣ್ಣೀರು ಹಾಕಿದರು.

Sulekha