ಕಲುಷಿತ ನೀರು ಸೇವನೆಗೆ ಮತ್ತೊಂದು ಬಲಿ – ಕೊಪ್ಪಳದಲ್ಲಿ 10 ವರ್ಷದ ಬಾಲಕಿ ಸಾವಿಗೆ ಜನರ ಆಕ್ರೋಶ

ಕಲುಷಿತ ನೀರು ಸೇವನೆಗೆ ಮತ್ತೊಂದು ಬಲಿ – ಕೊಪ್ಪಳದಲ್ಲಿ 10 ವರ್ಷದ ಬಾಲಕಿ ಸಾವಿಗೆ ಜನರ ಆಕ್ರೋಶ

ಕಲುಷಿತ ನೀರು ಸೇವನೆಯಿಂದ ಬಾಲಕಿಯೊಬ್ಬಳು ಬಲಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ವಾಂತಿ ಭೇದಿಗೆ ತುತ್ತಾಗಿದ್ದ ನಿರ್ಮಲಾ ಈರಪ್ಪ ಬೆಳಗಲ್ ಎಂಬ 10 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವೆನೆಯಿಂದ 15 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ 30ಕ್ಕೂ ಹೆಚ್ಚು ಜನರಿಗೆ ವಾಂತಿ ಬೇಧಿಯಾಗಿದ್ದು, ಒಂದೂವರೆ ವರ್ಷದ ಮಗು ತಾವರಗೇರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿತ್ತು. ಹಾಗೂ ಹೊನ್ನಮ್ಮ ಎಂಬ ವೃದ್ದೆ ಸಾವನ್ನಪ್ಪಿದ್ದರು. ಆದರೆ, ವೃದ್ಧೆಗೆ ಬೇರೆ ಬೇರೆ ಕಾಯಿಲೆಗಳಿದ್ದವು ಎಂದು ಕೊಪ್ಪಳ ಡಿಹೆಚ್ಓ ತಿಳಿಸಿದ್ದರು. ಇದರ ಬೆನ್ನಲ್ಲೇ ಈಗ ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ಈ ಪ್ರಕರಣದಿಂದಾಗಿ ಜನ ಆತಂಕದಲ್ಲಿದ್ದಾರೆ.

ಇದನ್ನೂ ಓದಿ: ಯಾರದ್ದೋ ಶವ ತೋರಿಸಿ ತನ್ನ ಪತಿ ಎಂದಳು – ಒಡಿಶಾ ರೈಲು ದುರಂತದ ₹17 ಲಕ್ಷ ಪರಿಹಾರಕ್ಕಾಗಿ ಮಹಿಳೆ ಕಳ್ಳಾಟ!

ಕುಷ್ಠಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ನಿರ್ಮಲಾ ಈರಪ್ಪ ಬೆಳಗಲ್ ಎಂಬ 10 ವರ್ಷದ ಬಾಲಕಿ ವಾಂತಿ ಭೇದಿಗೆ ತುತ್ತಾಗಿದ್ದಳು. ರಾತ್ರಿ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಿರಲಿಲ್ಲ. ಗುರುವಾರ ಬೆಳಗ್ಗೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯ್ತು. ಆದರೆ ಮನೆಯಲ್ಲಿಯೇ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಾಲಕಿ ಆಸ್ಪತ್ರೆಗೆ ಕರೆದುಕೊಂಡು ಬರುವ ಮೊದಲೇ ಮೃತಪಟ್ಟಿದ್ದಳು. ಕಲುಷಿತ ನೀರು ಸೇವನೆಯಿಂದಲೇ ವಾಂತಿ ಬೇಧಿ ಉಂಟಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಬಸರಿಹಾಳ ಗ್ರಾಮದ ಘಟನೆ ಬಳಿಕ ಕೊಪ್ಪಳ ಜಿಲ್ಲಾ ಪಂಚಾಯತ ಸಿಇಓ ರಾಹುಲ್ ರತ್ನಂ ಪಾಂಡೆ, ನಿರಂತರವಾಗಿ ಅಧಿಕಾರಿಗಳ ಸಭೆ ನಡೆಸಿದ್ದರು. ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಮಟ್ಟದ ಆರೋಗ್ಯ ಇಲಾಖೆ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳಿಂದ ವರದಿ ಕೇಳಿದ್ದರು. ಬಸರಿಹಾಳ ಗ್ರಾಮದಲ್ಲಿನ ನೀರನ್ನ ಲ್ಯಾಬ್ ಕಳಿಸಿ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಮೊನ್ನೆಯಷ್ಟೆ ಗ್ರಾಮಕ್ಕೆ ಭೇಟಿ ನೀಡಿ ಬಸರಿಹಾಳ ಗ್ರಾಮದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಆದ್ರೆ ಈಗ ಕೊಪ್ಪಳ ಜಿಲ್ಲೆಯಲ್ಲೇ ಮತ್ತೊಂದು ಜೀವ ಬಲಿಯಾಗಿದೆ.

suddiyaana