ಆದಾಯ ನಷ್ಟದ ಭೀತಿಯಲ್ಲಿರುವ ಆಟೋ ಚಾಲಕರಿಗೆ ಮತ್ತೆ ಶಾಕ್! – ಓಲಾದಿಂದ ಬೈಕ್ ಟ್ಯಾಕ್ಸಿ ಆರಂಭ?
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶಕ್ತಿ ಯೋಜನೆ ಆರಂಭವಾದ ಮೇಲೆ ಖಾಸಗಿ ವಾಹನ ಸಂಸ್ಥೆಗಳು ನಷ್ಟದಲ್ಲಿವೆ ಎಂಬ ಕೂಗು ಕೇಳಿಬರುತ್ತಿವೆ. ಅಷ್ಟೇ ಅಲ್ಲದೇ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ನಿಷೇಧಿಸುವಂತೆ ಆಟೋ, ಟ್ಯಾಕ್ಸಿ ಮಾಲಿಕರು ಮತ್ತು ಚಾಲಕರ ಸಂಘ ಸರ್ಕಾರವನ್ನು ಆಗ್ರಹಿಸುತ್ತಿರುವ ನಡುವೆಯೇ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಯಾದ ಓಲಾ ಈಗ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನೂ ಆರಂಭಿಸಿದೆ. ಇದು ಬೈಕ್ ಟ್ಯಾಕ್ಸಿಯಿಂದ ಆದಾಯ ನಷ್ಟದ ಆತಂಕದಲ್ಲಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮತ್ತು ಮಾಲಿಕರನ್ನು ಮತ್ತಷ್ಟು ಕಂಗೆಡಿಸಿದೆ.
ಓಲಾ ಸಿಇಒ ಭವಿಷ್ ಅಗರ್ವಾಲ್ ಇತ್ತೀಚೆಗಷ್ಟೆ ಬೈಕ್ ಟ್ಯಾಕ್ಸಿ ಆರಂಭಿಸುತ್ತಿರುವ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು ಈ ಬೆನ್ನಲ್ಲೇ . ಓಲಾ ಎಸ್1 ಎಲೆಕ್ಟ್ರಿಕ್ ಬೈಕ್‌ಗಳ ಮೂಲಕ ಬೈಕ್ ಟ್ಯಾಕ್ಸಿ ಆರಂಭಿಸಿದೆ. ಓಲಾ ಟ್ಯಾಕ್ಸಿಯಲ್ಲಿ 5 ಕಿ.ಮೀ. ವರೆಗೆ ₹25 ಮತ್ತು 10 ಕಿ.ಮೀ. ವರೆಗೆ ₹50 ದರ ನಿಗದಿಪಡಿಸಿದೆ. ಓಲಾ ಆ್ಯಪ್‌ನಲ್ಲಿ ಕಾರು, ಆಟೋ ಟ್ಯಾಕ್ಸಿ ಮಾದರಿಯಲ್ಲಿ ಗ್ರಾಹಕರು ಬೈಕ್ ಟ್ಯಾಕ್ಸಿ ಸೇವೆಯನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: ಚಂದ್ರನ ಅಂಗಳದಲ್ಲಿ ಮತ್ತೆ ಸೂರ್ಯೋದಯ – ನಿದ್ರೆಯಿಂದ ಏಳುತ್ತಾ ವಿಕ್ರಮ್, ಪ್ರಗ್ಯಾನ್?
ಓಲಾದಿಂದ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸುವ ಪ್ರಯತ್ನ 2016ರಲ್ಲೇ ನಡೆದಿತ್ತಾದರೂ ವಿವಿಧ ಕಾರಣಗಳಿಂದ ಯಶಸ್ವಿಯಾಗಿರಲಿಲ್ಲ. ಇದೀಗ ಬೆಂಗಳೂರಿನಲ್ಲಿ ಈ ಸೇವೆ ಆರಂಭಿಸಿದ್ದು, ದೇಶದ ಪ್ರಮುಖ ನಗರಗಳಲ್ಲಿ ವಿಸ್ತರಿಸುವ ಗುರಿ ಹೊಂದಿರುವುದಾಗಿ ಅಗರ್ವಾಲ್ ಹೇಳಿದ್ದಾರೆ.
ಮತ್ತೆ ಆಟೋ, ಟ್ಯಾಕ್ಸಿ ಚಾಲಕರ ಹೋರಾಟ?
ಇನ್ನು ಟ್ಯಾಕ್ಸಿ ಸೇವೆ ವಿರುದ್ಧ ಮತ್ತೆ ಆಟೋ, ಟ್ಯಾಕ್ಸಿ ಚಾಲಕರು ಕಿಡಿಕಾರಿದ್ದಾರೆ. ಬೈಕ್ ಟ್ಯಾಕ್ಸಿ ಸೇವೆಯಲ್ಲಿ ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗುತ್ತಿದೆ. ವೈಟ್ ಬೋರ್ಡ್ ನಂಬರ್ ಫಲಕದ ಬೈಕ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ನಿಯಮ ಉಲ್ಲಂಘಟನೆ. ಪ್ರಯಾಣಿಕರಿಗೆ ಸುರಕ್ಷತೆಯೂ ಇಲ್ಲ. ಕಡಿಮೆ ಪ್ರಯಾಣದ ದರದ ಕಾರಣದಿಂದ ನಮ್ಮ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಹಾಗಾಗಿ ಈ ಸೇವೆಯನ್ನು ನಿಷೇಧಿಸಬೇಕು ಎಂಬುದು ಆಟೋ, ಟ್ಯಾಕ್ಸಿ ಚಾಲಕರು, ಮಾಲಿಕರ ಸಂಘದ ಆಗ್ರಹಿಸಿದ್ದಾರೆ. ಇದರ ವಿರುದ್ಧ ಮತ್ತೆ ಹೋರಾಟಕ್ಕಿಳಿಯುವ ಬಗ್ಗೆ ಚರ್ಚೆ ನಡೆಸುವುದಾಗಿ ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ.