ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಘಡ – ಕುಸಿದು ಬಿದ್ದ ಹೈಡ್ರಾಲಿಕ್ ಕ್ರೇನ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ದುರಂತ ಸಂಭವಿಸಿದೆ. ಮೆಟ್ರೋ ಕಾಮಗಾರಿಗೆ ಬಳಸುತ್ತಿದ್ದ ಹೈಡ್ರಾಲಿಕ್ ಕ್ರೇನ್ ಏಕಾಏಕಿ ಕುಸಿದು ಬಿದ್ದಿದೆ. ಕೆಲವೇ ಕೆಲವು ಸೆಕೆಂಡ್‌ಗಳಲ್ಲಿ ವಾಹನ ಸವಾರರು ಬಚಾವ್ ಆಗಿದ್ದಾರೆ. ಮೆಟ್ರೊ ಕಾಮಗಾರಿ ವೇಳೆ ಮತ್ತೊಂದು ಅವಘಡ ಉಂಟಾಗಿರುವುದು ಸಾರ್ವಜನಿಕರಲ್ಲಿ ಮತ್ತು ವಾಹನ ಸವಾರರಲ್ಲಿ ಆತಂಕ ಶುರುವಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ. ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಮೆಟ್ರೋ ಕಾಮಗಾರಿಗೆ ಬಳಸುತ್ತಿದ್ದ ಹೈಡ್ರಾಲಿಕ್ ಕ್ರೇನ್ ನೆಲಕ್ಕುರುಳಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿಲ್ಕ್ ಬೋರ್ಡ್‌ನಿಂದ ಮಡಿವಾಳಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಅಮರನಾಥ ಯಾತ್ರೆ ವೇಳೆ ಹವಾಮಾನ ವೈಪರೀತ್ಯ – 9 ಯಾತ್ರಿಗಳ ಸಾವು
ನಮ್ಮ ಮೆಟ್ರೋ ಕಾಮಗಾರಿ ಸಂದರ್ಭ ಪಿಲ್ಲರ್ಗೆ ಹಾಕುವ ತಂತಿ ಮೇಲೆತ್ತುತ್ತಿರುವಾಗ ಏಕಾಏಕಿ ಕ್ರೇನ್ನ ಹೈಡ್ರಾಲಿಕ್ನಲ್ಲಿ ಸಮಸ್ಯೆ ಉಂಟಾಗಿ ಕ್ರೇನ್ ಏಕಾಏಕಿ ಕುಸಿದುಬಿದ್ದಿದೆ. ಈ ವೇಳೆ ಕಂಬಿಗಳೆಲ್ಲ ವಾಲಿ ಬಿದ್ದಿವೆ. ಅದೃಷ್ಟವಶಾತ್ ಆ ಸಮಯದಲ್ಲಿ ಕಾರ್ಮಿಕರು ಕಡಿಮೆ ಇದ್ದಿದ್ದರಿಂದ ಸಂಭಾವ್ಯ ಭಾರಿ ಅನಾಹುತ ತಪ್ಪಿದೆ. ಅಷ್ಟೇ ಅಲ್ಲದೇ ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಈ ಅವಘಡದಿಂದಾಗಿ ಕೆಲ ಹೊತ್ತು ಮಡಿವಾಳ ಜಂಕ್ಷನ್ ಬಳಿ ಆತಂಕದ ಪರಿಸ್ಥಿತಿ ಉಂಟಾಗಿತ್ತು. ಮೆಟ್ರೋ ಕಾಮಗಾರಿಗೆ ಬಳಸುತ್ತಿದ್ದ ಕ್ರೇನ್ ಜಾರಿ ಬಿಳ್ಳಲು ಕಾರಣ ಏನು ಎಂಬುವುದನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ತಾತ್ಕಾಲಿಕ ಮಾರ್ಗ ಬದಲಾವಣೆ ಮಡಿವಾಳ ಕಡೆಗೆ ಬರುವವರು ಬಿಟಿಎಂ ಲೇಔಟ್ ಮೂಲಕ ಸಂಚರಿಸಬೇಕು. ಅದೇ ರೀತಿಯಾಗಿ ಬಿಟಿಎಂ ಲೇಔಟ್ನಿಂದ ಮಡಿವಾಳಕ್ಕೆ ಹೋಗುವವರು ಎಚ್ಎಸ್ಆರ್ 14ನೇ ಮುಖ್ಯ ರಸ್ತೆ ಮೂಲಕ ಸಾಗಬೇಕಿದೆ.