ಕಾಂಗ್ರೆಸ್ನಿಂದ ಮತ್ತೊಂದು ಗ್ಯಾರಂಟಿ ಘೋಷಣೆ – ‘ಮಹಾಲಕ್ಷ್ಮೀ’ ಖಾತ್ರಿ ಯೋಜನೆ ಅಡಿಯಲ್ಲಿ ವಧುವಿಗೆ 1 ಲಕ್ಷ ನಗದು, 10 ಗ್ರಾಂ ಚಿನ್ನ
ಸರ್ಕಾರ ಬಡ ಜನರಿಗಾಗಿ ಒಂದೊಂದು ಯೋಜನೆಗಳನ್ನು ಜಾರಿ ಮಾಡುತ್ತಲೇ ಇದೆ. ಇದೀಗ ಕಾಂಗ್ರೆಸ್ ತನ್ನ ಮತದಾರರಿಗೆ ಮತ್ತೊಂದು ಬಂಪರ್ ಕೊಡುಗೆಯನ್ನು ಘೋಷಿಸಿದೆ. ವಧುವಿಗೆ ಮದುವೆ ಸಂದರ್ಭದಲ್ಲಿ ಒಂದು ಲಕ್ಷ ನಗದು ಜೊತೆಗೆ 10 ಗ್ರಾಂ ಚಿನ್ನ ನೀಡುವುದಾಗಿ ಭರವಸೆ ನೀಡಿದೆ. ಅಂದ ಹಾಗೆ ಈ ಗ್ಯಾರಂಟಿ ಕರ್ನಾಟಕದಲ್ಲಿ ಘೋಷಣೆಯಾಗಿಲ್ಲ. ಈ ಗ್ಯಾರಂಟಿ ಘೋಷಣೆಯಾಗಿರುವುದು ತೆಲಂಗಾಣ ವಿಧಾನಸಭೆ ಚುನಾವಣಾ ಪ್ರಣಾಳಿಕೆಯಲ್ಲಿ.
ತೆಲಂಗಾಣದಲ್ಲಿ ನವೆಂಬರ್ 30 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ನಾನಾ ರೀತಿಯ ಸರ್ಕಸ್ ಮಾಡುತ್ತಿವೆ. ಇದೀಗ ತೆಲಂಗಾಣದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮದುವೆ ಸಂದರ್ಭದಲ್ಲಿ ವಧುವಿಗೆ ಒಂದು ಲಕ್ಷ ನಗದು ಜೊತೆಗೆ 10 ಗ್ರಾಂ ಚಿನ್ನ, ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್ ಸೇರಿದಂತೆ ಹಲವು ಯೋಜನೆಗಳನ್ನು ಜಾರಿ ಮಾಡುವುದಾಗಿ ಹೇಳಿದೆ.
ಇದನ್ನೂ ಓದಿ: ಪಂಚರಾಜ್ಯ ಚುನಾವಣೆಗಾಗಿ ಕಾಂಗ್ರೆಸ್ ನಿಂದ ₹1,000 ಕೋಟಿ ಕಲೆಕ್ಷನ್ – ಯಾವ ರಾಜ್ಯಕ್ಕೆ ಎಷ್ಟೆಷ್ಟು ಹಣ ಸಂಗ್ರಹ?
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ (ಟಿಪಿಸಿಸಿ) ಪ್ರಣಾಳಿಕೆ ಸಮಿತಿ ಮುಖ್ಯಸ್ಥ ಡಾ. ಡಿ.ಶ್ರೀಧರ್ ಬಾಬು ಪ್ರಕಾರ, ಪಕ್ಷ ಅಧಿಕಾರಕ್ಕೇರಿದರೆ ‘ಮಹಾಲಕ್ಷ್ಮೀ’ ಖಾತ್ರಿ ಯೋಜನೆ ಅಡಿಯಲ್ಲಿ ವಧುವಿಗೆ ಚಿನ್ನ ಹಾಗೂ ನಗದು ನೀಡಲು ಕಾಂಗ್ರೆಸ್ ಉದ್ದೇಶಿಸಿದೆ. ‘ವಧುವಿಗೆ 10 ಗ್ರಾಂ ಚಿನ್ನ ನೀಡಲಾಗುತ್ತದೆ. ಇದಕ್ಕೆ 50,000- 55,000 ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸದ್ಯ ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಸರ್ಕಾರ, ಪೋಷಕರ ಆದಾಯ ವಾರ್ಷಿಕ 2 ಲಕ್ಷ ಮೀರದ ವಧುವಿಗೆ ಮದುವೆ ಸಂದರ್ಭದಲ್ಲಿ ‘ಕಲ್ಯಾಣ ಲಕ್ಷ್ಮೀ’ ಹಾಗೂ ‘ಶಾದಿ ಮುಬಾರಕ್’ ಯೋಜನೆಗಳ ಅಡಿಯಲ್ಲಿ 1 ಲಕ್ಷ ಸಹಾಯಧನ ನೀಡುತ್ತಿದೆ.
ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಆರ್ಎಸ್ ವಕ್ತಾರ ಶ್ರವಣ್ ದಾಸೊಜು, ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಚುನುವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ, ಆ ಪಕ್ಷದವರು ಆಕಾಶ ತೋರಿಸುತ್ತಾ ಯಾವ ಭರವಸೆಗಳನ್ನು ಬೇಕಾದರೂ ನೀಡಬಲ್ಲರು ಎಂದು ಗೇಲಿ ಮಾಡಿದ್ದಾರೆ.