ಹುಲಿ ಹಿಡಿತೀವಿ ಅಂತಾ ಅರಣ್ಯಇಲಾಖೆಯಿಂದ ಕಾರ್ಯಾಚರಣೆ – ಇದರ ನಡುವೆ ರೈತನ ಕೊಂದು ದೇಹದ ಕೆಲ ಭಾಗ ತಿಂದ ಹುಲಿ..!

ಹುಲಿ ಹಿಡಿತೀವಿ ಅಂತಾ ಅರಣ್ಯಇಲಾಖೆಯಿಂದ ಕಾರ್ಯಾಚರಣೆ – ಇದರ ನಡುವೆ ರೈತನ ಕೊಂದು ದೇಹದ ಕೆಲ ಭಾಗ ತಿಂದ ಹುಲಿ..!

ಹುಲಿ ಹಿಡಿತೀವಿ ಹುಲಿ ಹಿಡಿತೀವಿ ಎಂದು ಪದೇ ಪದೇ ಹೇಳುತ್ತಾ ಕಾರ್ಯಾಚರಣೆಯನ್ನೂ ಅರಣ್ಯಇಲಾಖೆ ಶುರುಮಾಡಿತ್ತು. ಹುಲಿ ಸೆರೆ ಕಾರ್ಯಾಚರಣೆ ಏನೋ ನಡೀತಿದೆ. ಆದರೆ, ಮನುಷ್ಯನ ಜೀವಕ್ಕೆ ಮಾತ್ರ ಬೆಲೆಯೇ ಇಲ್ಲ. ಹುಲಿದಾಳಿಗೆ ಈಗ ಮತ್ತೊಬ್ಬ ವ್ಯಕ್ತಿ ದಾರುಣವಾಗಿ ಬಲಿಯಾಗಿದ್ದಾರೆ. ರೈತನನ್ನು ಬಲಿ ಪಡೆದ ಹುಲಿ ಪರಾರಿಯಾಗಿದೆ. ಆದರೆ, ಅರಣ್ಯ ಇಲಾಖೆ ಮಾತ್ರ ಹೆದರಬೇಡಿ ನಾವಿದ್ದೇವೆ. ಹುಲಿ ಹಿಡಿತೀವಿ ಅಂತಿದೆ.

ಇದನ್ನೂ ಓದಿ: ವ್ಯಕ್ತಿ ಮೇಲೆ ದಾಳಿ ಮಾಡಿದ ಮೇಲೆ ಎಚ್ಚೆತ್ತ ಅರಣ್ಯಇಲಾಖೆ – ಹುಲಿ ಸೆರೆಹಿಡಿಯಲು ಕಾರ್ಯಾಚರಣೆಗಿಳಿದ ಗಜಪಡೆ

ಹುಲಿ ಒಂದು ದಿನ ಬಂಡೀಪುರ ಕಾಡಿನಲ್ಲಿದ್ರೆ ಮತ್ತೊಂದು ದಿನ ಕಾಡಂಚಿನ ಪ್ರದೇಶದ ಜಮೀನಲ್ಲಿ ಕಾಣಿಸಿಕೊಳ್ಳುತ್ತಿದೆ. ಸದ್ಯ, ಹುಲಿಯನ್ನು ಹಿಡಿಯಲು ಅರಣ್ಯಇಲಾಖೆ ಸಿಬ್ಬಂದಿ 30 ಕ್ಕು ಹೆಚ್ಚು ಕ್ಯಾಮರಾ ಟ್ರಾಪ್ ಗಳನ್ಜು ಅಳವಡಿಸಿಕೊಂಡು ಶೋಧಕಾರ್ಯ ನಡೆಸುತ್ತಿದ್ದಾರೆ. ಆದರೆ, ನಡೆದ ದುರಂತವನ್ನು ತಪ್ಪಿಸಲು ಮಾತ್ರ ಯಾರಿಂದಲೂ ಸಾಧ್ಯವಾಗಿಲ್ಲ. ನವೆಂಬರ್ 6, ಸೋಮವಾರ ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಯಿಂದ ಮತ್ತೋರ್ವ ರೈತ ಪ್ರಾಣ ಕಳೆದುಕೊಂಡಿದ್ದಾರೆ. 42 ವರ್ಷದ ರೈತ ಬಾಲಾಜಿ ನಾಯಕ್ ಅವರ ಮೇಲೆ ದಾಳಿ ಮಾಡಿದ ಹುಲಿ ಕೊಂದು ಹಾಕಿದೆ. ಬಿ.ಮಟಕೆರೆ-ಹೊಸಕೋಟೆ ರಸ್ತೆಯಲ್ಲಿ ಸೋಮವಾರ ದನ ಮೇಯಿಸುವಾಗ ಹುಲಿ ದನಗಳ ಮೇಲೆ ದಾಳಿ ಮಾಡಿತ್ತು. ಆಗ ದನಗಳು ಹುಲಿಗೆ ಸಿಗದೆ ಓಡಿದವು. ದನಗಳು ಸಿಗದ ಸಿಟ್ಟಲ್ಲಿ ಹುಲಿ ಬಾಲಾಜಿ ಮೇಲೆ ಎರಗಿದೆ. ಕ್ರೂರವ್ಯಾಘ್ರನ ದಾಳಿಗೆ ತತ್ತರಿಸಿದ ಬಾಲಾಜಿ ಹೆದರಿಹೋಗಿದ್ದಾರೆ. ಬಾಲಾಜಿ ಮೇಲೆ ಎರಗಿದ ಹುಲಿ ಅವರನ್ನು ಕೊಂದುಹಾಕಿದೆ. ನಂತರ ಮೃತದೇಹವನ್ನು ಕಾಡಿಗೆ ಎಳೆದುಕೊಂಡು ಹೋಗಿತ್ತು. ಇದನ್ನು ಗಮನಿಸಿದ ಅಕ್ಕ ಪಕ್ಕದ ಜಮೀನಿನವರು ಕೂಗಾಡಿದ್ದಾರೆ. ಶಬ್ಧ ಕೇಳಿ ಮೃತದೇಹ ಬಿಟ್ಟು ಹುಲಿ ಓಡಿ ಹೋಗಿತ್ತು. ಹುಲಿಯು ರೈತನ ಒಂದು ಕಾಲು, ದೇಹದ ಕೆಲ ಭಾಗ ತಿಂದು ಹಾಕಿದೆ. ಮತ್ತೆ ಅದೇ ಸ್ಥಳಕ್ಕೆ ಹುಲಿ ಬರುವ ಸಾಧ್ಯತೆಯಿರುವುದರಿಂದ ಅರಣ್ಯ ಇಲಾಖೆ ಅಲರ್ಟ್ ಆಗಿದೆ. ಹುಲಿ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಶೀಲ್ದಾರ್ ಪರಶಿವಮೂರ್ತಿ, ಪಿಎಸ್ಐ ನಂದೀಶ್ ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಮೈಸೂರು ಅರಣ್ಯ ಅಧಿಕಾರಿಗಳಿಗೆ ಹುಲಿ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹುಲಿ ಹಿಡಿದು ರೈತರ ಪ್ರಾಣ ಉಳಿಸಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ, ಹುಲಿ ಸೆರೆಸಿಗುವ ವೇಳೆಯಲ್ಲಿ ಇನ್ನೆಷ್ಟು ಜೀವಗಳು ಬಲಿಯಾಗಬೇಕೋ…

ಇತ್ತೀಚೆಗಷ್ಟೇ ಜಿಲ್ಲೆಯ ನಂಜನಗೂಡು ತಾಲೂಕಿನ ಮಹದೇವನಗರದಲ್ಲಿ ಜಾನುವಾರು ಮೇಲೆ ದಾಳಿ ಮಾಡಿ ರಕ್ಷಣೆಗೆ ಹೋದ ವೀರಭದ್ರ ಬೋವಿ ಎಂಬ ರೈತನ ಮೇಲೆ ಹುಲಿ ದಾಳಿ  ನಡೆಸಿತ್ತು. ಈಗ ಇದೇ ರೀತಿಯ ಘಟನೆ ನಡೆದಿದ್ದು ಬಾಲಾಜಿ ಮಾತ್ರ ಹುಲಿಗೆ ಬಲಿಯಾಗಿದ್ದಾರೆ. ಮತ್ತೊಂದೆಡೆ ರಾಂಪುರ ಕ್ಯಾಂಪ್ ನಿಂದ ಬಂದ ಪಾರ್ಥ ಹಾಗೂ ಧರ್ಮ ಆನೆಗಳ ಮೂಲಕ ಹುಲಿ ಕೂಂಬಿಂಗ್ ನಡೆಯುತ್ತಿದೆ. ಕಾಡಂಚಿನ ವಿವಿಧ ಗ್ರಾಮಗಳ ಜಮೀನಿನಲ್ಲಿ ಹುಲಿ ಓಡಾಟ ಶುರುಮಾಡಿದೆ ಎಂಬ ಮಾಹಿತಿ ಸಿಕ್ಕಿದೆ.

Sulekha