RCB Vs CSK ಪಂದ್ಯಕ್ಕೂ ಮುನ್ನವೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೊಂದು ವಿವಾದ! – ಜಿಬಿಎ ನೋಟಿಸ್!

ಚಿನ್ನಸ್ವಾಮಿಯಲ್ಲಿ ನಡೆದ ಕಾಲ್ತುಳಿತ ದುರಂತದಿಂದಾಗಿ ಎಲ್ಲಾ ಮಾದರಿಯ ಟೂರ್ನಿಗಳನ್ನು ಸ್ಥಗಿತಗೊಳಿಸಲಾಗಿತು. ಇದೀಗ ಒಂದು ವರ್ಷಗಳ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಟೂರ್ನಿ ಆರಂಭವಾಗಿದೆ. ಈಗಾಗಲೇ ಐಪಿಎಲ್ ಉದ್ಘಾಟನಾ ಪಂದ್ಯ ನಡೆದಿದ್ದು, ಭಾನುವಾರ ಸಿಎಸ್‌ಕೆ ಹಾಗೂ ಆರ್‌ಸಿಬಿ ನಡುವಿನ ಮ್ಯಾಚ್ ನಡೆಯಲಿದೆ. ಇದೀಗ ಮುಂಬೈನ ವಾಂಖೆಡೆ ಮಾದರಿಯಲ್ಲೇ ಬೆಂಗಳೂರಿನ ಐತಿಹಾಸಿಕ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಈಗ ಪಾಲಿಕೆಯ ಬಿಸಿ ತಟ್ಟಿದೆ. ಜಾಹೀರಾತು ನಿಯಮಗಳ ಉಲ್ಲಂಘನೆ ಆರೋಪದಡಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಎರಡು ಪುಟಗಳ ಸುದೀರ್ಘ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: ಗಂಡ-ಹೆಂಡ್ತಿ ಮಧ್ಯೆ ಜಗಳ! – ಅಯ್ಯಯೋ.. ಗಂಡನ ಸಿಟ್ಟಿಗೆ ಹೆಂಡತಿ ಮೂಗು ಕಟ್!
2022ರ ಕಾಯ್ದೆ ಹಾಗೂ ಬೈಲಾ ಸೆಕ್ಷನ್ 158ರ ಅಡಿಯಲ್ಲಿ ಈ ನೋಟಿಸ್ ನೀಡಲಾಗಿದ್ದು, ಮುಂದಿನ 7 ದಿನದೊಳಗೆ ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ. ಒಂದು ವೇಳೆ ನಿಯಮಗಳನ್ನು ಗಾಳಿಗೆ ತೂರಿದರೆ 2 ಲಕ್ಷ ರೂಪಾಯಿ ದಂಡ ಮಾತ್ರವಲ್ಲದೆ, ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನೂ ಪಾಲಿಕೆ ನೀಡಿದೆ ಎಂದು ನ್ಯೂಸ್ ಫಸ್ಟ್ ಮೂಲಗಳು ತಿಳಿಸಿವೆ.
ಅನಧಿಕೃತ ಎಲ್ ಇಡಿ ಬೋರ್ಡ್
ಐಪಿಎಲ್ ಪಂದ್ಯಗಳ ವೇಳೆ ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಬೃಹತ್ ಎಲ್ ಇಡಿ (LED) ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದೆ.
ಅನುಮತಿ ಇಲ್ಲದ ಜಾಹೀರಾತು
ಪಾಲಿಕೆಯ ಮುಖ್ಯ ಆಯುಕ್ತರಿಂದ ಯಾವುದೇ ಪೂರ್ವಭಾವಿ ಲಿಖಿತ ಅನುಮತಿ ಪಡೆಯದೇ ಪಂದ್ಯದ ವೇಳೆ ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿದೆ.
ಶುಲ್ಕ ಪಾವತಿಯಲ್ಲಿ ವಂಚನೆ
ಪಾಲಿಕೆಗೆ ಸಲ್ಲಿಸಬೇಕಾದ ಅಧಿಕೃತ ಜಾಹೀರಾತು ಶುಲ್ಕವನ್ನು ಕೆಎಸ್‌ಸಿಎ ಪಾವತಿಸಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಗಮನಾರ್ಹ ಸಂಗತಿಯೆಂದರೆ ಕಳೆದ ವರ್ಷವೂ ಅಂದಿನ ಬಿಬಿಎಂಪಿ (BBMP) ಕೆಎಸ್‌ಸಿಎಗೆ ಇದೇ ವಿಚಾರವಾಗಿ ನೋಟಿಸ್ ನೀಡಿತ್ತು. ಜಾಹೀರಾತು ಶುಲ್ಕ ಪಾವತಿಸಿಲ್ಲ ಎಂದು ಪಾಲಿಕೆ ಅಂದು ಗರಂ ಆಗಿತ್ತು. ಆದರೆ ನೋಟಿಸ್ ನೀಡಿ ವರ್ಷ ಕಳೆದಿದ್ದರೂ ಅಧಿಕಾರಿಗಳು ಇದುವರೆಗೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಇದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಅಂದಿನ ಬಿಬಿಎಂಪಿ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಸುಮ್ಮನಾಗಿದ್ದರೇ? ಎಂಬ ಪ್ರಶ್ನೆ ಈಗ ಎದ್ದಿದೆ.
ಪಾಲಿಕೆಯು ತನ್ನ ನೋಟಿಸ್ನಲ್ಲಿ ಸ್ಟೇಡಿಯಂನಲ್ಲಿ ಅಳವಡಿಸಲಾಗಿರುವ ಅನಧಿಕೃತ ಎಲ್ ಇಡಿ ಜಾಹೀರಾತು ಫಲಕಗಳನ್ನು ಕೂಡಲೇ ತೆರವುಗೊಳಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಇಡೀ ವಿಶ್ವವೇ ನೋಡುವ ಐಪಿಎಲ್ ಪಂದ್ಯಗಳ ಮೂಲಕ ಕೋಟ್ಯಂತರ ರೂಪಾಯಿ ಆದಾಯ ಗಳಿಸುವ ಕೆಎಸ್‌ಸಿಎ, ಪಾಲಿಕೆಗೆ ಸಲ್ಲಿಸಬೇಕಾದ ತೆರಿಗೆಯನ್ನು ಯಾಕೆ ಬಾಕಿ ಉಳಿಸಿಕೊಂಡಿದೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ. ಮುಂದಿನ ಏಳು ದಿನಗಳಲ್ಲಿ ಕೆಎಸ್‌ಸಿಎ ನೀಡುವ ಉತ್ತರದ ಮೇಲೆ ಚಿನ್ನಸ್ವಾಮಿ ಸ್ಟೇಡಿಯಂನ ಜಾಹೀರಾತುಗಳ ಭವಿಷ್ಯ ನಿರ್ಧಾರವಾಗಲಿದೆ.

ನೋಡಿರಿ

