ಮೂರೇ ದಿನದ ಅಂತರದಲ್ಲಿ ಮತ್ತೊಂದು ಚೀತಾ ಸಾವು.. ಮೃತಪಟ್ಟ ಚೀತಾಗಳ ಸಂಖ್ಯೆ 8ಕ್ಕೆ ಏರಿಕೆ  

ಮೂರೇ ದಿನದ ಅಂತರದಲ್ಲಿ ಮತ್ತೊಂದು ಚೀತಾ ಸಾವು.. ಮೃತಪಟ್ಟ ಚೀತಾಗಳ ಸಂಖ್ಯೆ 8ಕ್ಕೆ ಏರಿಕೆ  

ಭೋಪಾಲ್: ಪ್ರಾಜೆಕ್ಟ್ ಚೀತಾ ಇನಿಷಿಯೇಟಿವ್ ಅಡಿ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ಮತ್ತೊಂದು ಚೀತಾ ಮೃತಪಟ್ಟಿದೆ. ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನದಲ್ಲಿ ಶುಕ್ರವಾರ ಸೂರಜ್ ಎಂಬ ಗಂಡು ಚೀತಾ ಸಾವನ್ನಪ್ಪಿದೆ.

ಶುಕ್ರವಾರ ಮುಂಜಾನೆ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಆಫ್ರಿಕಾದಿಂದ ತರಲಾಗಿದ್ದ ಚೀತಾ ಸೂರಜ್ ಶವವಾಗಿ ಪತ್ತೆಯಾಗಿದೆ. ಈ ಉದ್ಯಾನದಲ್ಲಿ ಸುಮಾರು 4 ತಿಂಗಳುಗಳ ಅವಧಿಯಲ್ಲಿ ಸಾವನ್ನಪ್ಪಿರುವ 8ನೇ ಚೀತಾ ಇದಾಗಿದೆ. ಸೂರಜ್ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ‘ನಭಾ’ ಜೊತೆ ‘ತೇಜಸ್’ ಮಿಲನ – ಸಂಗಾತಿಯನ್ನು ಸೇರುವ ಆತುರದಲ್ಲಿಯೇ ಪ್ರಾಣ ಬಿಟ್ಟ ತೇಜಸ್..!

ಕಳೆದ ಮಂಗಳವಾರವಷ್ಟೇ ಮತ್ತೊಂದು ಗಂಡು ಚೀತಾ ತೇಜಸ್ ಶವವಾಗಿ ಪತ್ತೆಯಾಗಿತ್ತು. ಇದೀಗ ಚೀತಾ ಹೇಗೆ ಸಾವನ್ನಪಿತು ಎಂಬ ಕಾರಣ ಬಹಿರಂಗಗೊಂಡಿದೆ. ಕುನೋ ಅಭಯಾರಣ್ಯದಲ್ಲಿ ಮಂಗಳವಾರ ಸಾವನ್ನಪ್ಪಿದ ಚೀತಾ ‘ತೇಜಸ್’ ಮರಣಕ್ಕೆ, ಮಿಲನ ಸಮಯದಲ್ಲಿ ತಲೆಗೆ ಆದ ಗಾಯ ಕಾರಣವಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. 20 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಇರಿಸಲಾಗಿದ್ದು, ಸೂರಜ್‌ ಸಾವಿನ ಬಳಿಕ ಇನ್ನು 12 ಚೀತಾಗಳಷ್ಟೇ ಉಳಿದಿವೆ. ಉಳಿದ ಚೀತಾಗಳನ್ನು ಉಳಿಸುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ.

75 ವರ್ಷಗಳ ಬಳಿಕ ಮೊದಲ ಬಾರಿ ಭಾರತಕ್ಕೆ ಬಂದ ಚೀತಾಗಳಲ್ಲಿ ಮೊದಲನೆಯದು ಮಾರ್ಚ್ 27ರಂದು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಹೆಣ್ಣು ಚೀತಾ ಸಾಶಾ ಮೂತ್ರಪಿಂಡದ ಕಾಯಿಲೆಯಿಂದ ಬಳಲಿ ಸಾವನ್ನಪ್ಪಿತ್ತು. ಅದೇ ಸಮಯದಲ್ಲಿ ಸಿಯಾಯಾ ಎಂಬ ಚೀತಾ 4 ಮರಿಗಳಿಗೆ ಜನ್ಮ ನೀಡಿತ್ತು. ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಗಂಡು ಚೀತಾ ಉದಯ್ ಹೃದಯ ಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪಿತು. ಮೇ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದ ದಕ್ಷ ಎಂಬ ಹೆಣ್ಣು ಚೀತಾ 2 ಗಂಡು ಚೀತಾಗಳೊಂದಿಗೆ ಕಾದಾಟ ನಡೆಸಿ ಸಾವನ್ನಪ್ಪಿತು.

ಕಳೆದ ವರ್ಷ ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ಭಾರತಕ್ಕೆ 8 ಚೀತಾಗಳನ್ನು ತಂದು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು. ಬಳಿಕ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚೀತಾಗಳನ್ನು ತರಿಸಲಾಗಿತ್ತು. ಅವುಗಳಲ್ಲಿ 6 ಕಾಡಿನಲ್ಲಿದ್ದು, ಉಳಿದವು ಕುನೋ ಉದ್ಯಾನದ ವಿವಿಧ ಆವರಣಗಳಲ್ಲಿವೆ.

suddiyaana