ಪ್ರಜ್ವಲ್​ಗೆ ಎದುರಾಯ್ತು ಮತ್ತೊಂದು ಸಂಕಷ್ಟ – ದಾಖಲಾಯ್ತು ಅತ್ಯಾಚಾರ ಪ್ರಕರಣ

ಪ್ರಜ್ವಲ್​ಗೆ ಎದುರಾಯ್ತು ಮತ್ತೊಂದು ಸಂಕಷ್ಟ – ದಾಖಲಾಯ್ತು ಅತ್ಯಾಚಾರ ಪ್ರಕರಣ

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರೋ ಹಾಸನದ ಪೆನ್​ಡ್ರೈವ್​ ಪ್ರಕರಣ ಸದ್ಯ ಕಾನೂನು ಹೋರಾಟದ ಹಾದಿಯಲ್ಲಿದೆ. ವೈರಲ್​ ಪ್ರಪಂಚದಲ್ಲಿ ಹಲ್​ಚಲ್ ಎಬ್ಬಿಸಿದ್ದ ಅಶ್ಲೀಲ ವಿಡಿಯೋಗಳ ಹರಿದಾಟ ದೊಡ್ಡಗೌಡರ ಕುಟುಂಬವನ್ನ ಆಘಾತಕ್ಕೆ ತಳ್ಳಿದೆ. ಆರೋಪಗಳ ಮೇಲೆ ಆರೋಪ, ಪ್ರತಿಪಕ್ಷಗಳ ಟೀಕೆ ಟಿಪ್ಪಣಿಗಳು ದೊಡ್ಡಗೌಡರ ಕುಟುಂಬಕ್ಕೆ ನುಂಗಲಾರದ ತುತ್ತಾಗಿವೆ. ಪ್ರಕರಣ ದಿನೇ ದಿನೇ ಹೊಸ ಹೊಸ ತಿರುವ ಪಡೆಯುತ್ತಿರೋದು ಪ್ರಜ್ವಲ್​ಗೆ ಸಂಕಷ್ಟಗಳ ಸರಮಾಲೆಯನ್ನೇ ತಂದೊಡ್ಡಿದೆ. ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣದಿಂದ ಆಘಾತಕ್ಕೆ ಒಳಗಾಗಿರೋ ರೇವಣ್ಣ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಇದೀಗ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿಯಲ್ಲಿ ಪ್ರಜ್ವಲ್​ ರೇವಣ್ಣ ವಿರುದ್ಧ ಹೊಸದಾಗಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಇದು ಪ್ರಜ್ವಲ್​ ರೇವಣ್ಣ ಅವರ ವಿರುದ್ಧ ದಾಖಲಾದ ಎರಡನೇ ಪ್ರಕರಣವಾಗಿದೆ.

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಜರ್ಮನಿಯಿಂದ ದುಬೈಗೆ ಶಿಫ್ಟ್!‌ – ಜಾಮೀನು ಕೋರಿ ಕೋರ್ಟ್‌ ಮೆಟ್ಟಿಲೇರಿದ ರೇವಣ್ಣ

ಸಂಸದ ಪ್ರಜ್ವಲ್​ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದ ತನಿಖೆಯನ್ನು ಎಸ್‌ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಹಲವು ಆಯಾಮಗಳಲ್ಲಿ ಎಸ್​ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇಂಚಿಂಚು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ವಿಡಿಯೋದಲ್ಲಿದ್ದ ಕೆಲ ಮಹಿಳೆಯರನ್ನು ಸಂಪರ್ಕಿಸಿ ದೂರು ನೀಡುವಂತೆ ಹೇಳಿದ್ದರು. ಈ ಪೈಕಿ ಮಹಿಳೆಯೊಬ್ಬರು ಎಸ್​ಐಟಿ ಅಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಆಧರಿಸಿ ಅಧಿಕಾರಿಗಳು ಈಗಾಗಲೇ ಲೈಂಗಿಕ ದೌರ್ಜನ್ಯ ಆರೋಪದಡಿ ದಾಖಲಾಗಿದ್ದ ಎಫ್​ಐಆರ್​ಗೆ ಹೊಸದಾಗಿ ಐಪಿಸಿ ಸೆಕ್ಷನ್​​ 376 ಅನ್ನು ಸೇರ್ಪಡೆಗೊಳಿಸುವ ಮೂಲಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜ್ವಲ್​ ರೇವಣ್ಣ ಹಲವು ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ಸಿಆರ್​​ಪಿಸಿ 164 ಅಡಿಯಲ್ಲಿ ಹೇಳಿಕೆ ದಾಖಲಿಸಲಾಗಿದೆ. ಐಪಿಸಿ 376(2) ಎನ್​, 506, 354 ಎ1,  354ಬಿ, 354ಸಿ ಹಾಗೂ ಐಟಿ ಕಾಯ್ದೆ ಅಡಿ ಎಫ್​ಐಆರ್​ ದಾಖಲಾಗಿದೆ. ಸಂತ್ರಸ್ತೆಯ ಮಾಹಿತಿಯನ್ನು ಗೌಪ್ಯವಾಗಿರಿಸಲಾಗಿದೆ.

Shwetha M

Leave a Reply

Your email address will not be published. Required fields are marked *