ಪ್ರಜ್ವಲ್ಗೆ ಎದುರಾಯ್ತು ಮತ್ತೊಂದು ಸಂಕಷ್ಟ – ದಾಖಲಾಯ್ತು ಅತ್ಯಾಚಾರ ಪ್ರಕರಣ

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರೋ ಹಾಸನದ ಪೆನ್ಡ್ರೈವ್ ಪ್ರಕರಣ ಸದ್ಯ ಕಾನೂನು ಹೋರಾಟದ ಹಾದಿಯಲ್ಲಿದೆ. ವೈರಲ್ ಪ್ರಪಂಚದಲ್ಲಿ ಹಲ್ಚಲ್ ಎಬ್ಬಿಸಿದ್ದ ಅಶ್ಲೀಲ ವಿಡಿಯೋಗಳ ಹರಿದಾಟ ದೊಡ್ಡಗೌಡರ ಕುಟುಂಬವನ್ನ ಆಘಾತಕ್ಕೆ ತಳ್ಳಿದೆ. ಆರೋಪಗಳ ಮೇಲೆ ಆರೋಪ, ಪ್ರತಿಪಕ್ಷಗಳ ಟೀಕೆ ಟಿಪ್ಪಣಿಗಳು ದೊಡ್ಡಗೌಡರ ಕುಟುಂಬಕ್ಕೆ ನುಂಗಲಾರದ ತುತ್ತಾಗಿವೆ. ಪ್ರಕರಣ ದಿನೇ ದಿನೇ ಹೊಸ ಹೊಸ ತಿರುವ ಪಡೆಯುತ್ತಿರೋದು ಪ್ರಜ್ವಲ್ಗೆ ಸಂಕಷ್ಟಗಳ ಸರಮಾಲೆಯನ್ನೇ ತಂದೊಡ್ಡಿದೆ. ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣದಿಂದ ಆಘಾತಕ್ಕೆ ಒಳಗಾಗಿರೋ ರೇವಣ್ಣ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಇದೀಗ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಹೊಸದಾಗಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಇದು ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾದ ಎರಡನೇ ಪ್ರಕರಣವಾಗಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ದುಬೈಗೆ ಶಿಫ್ಟ್! – ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ ರೇವಣ್ಣ
ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣದ ತನಿಖೆಯನ್ನು ಎಸ್ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಹಲವು ಆಯಾಮಗಳಲ್ಲಿ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇಂಚಿಂಚು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ವಿಡಿಯೋದಲ್ಲಿದ್ದ ಕೆಲ ಮಹಿಳೆಯರನ್ನು ಸಂಪರ್ಕಿಸಿ ದೂರು ನೀಡುವಂತೆ ಹೇಳಿದ್ದರು. ಈ ಪೈಕಿ ಮಹಿಳೆಯೊಬ್ಬರು ಎಸ್ಐಟಿ ಅಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಆಧರಿಸಿ ಅಧಿಕಾರಿಗಳು ಈಗಾಗಲೇ ಲೈಂಗಿಕ ದೌರ್ಜನ್ಯ ಆರೋಪದಡಿ ದಾಖಲಾಗಿದ್ದ ಎಫ್ಐಆರ್ಗೆ ಹೊಸದಾಗಿ ಐಪಿಸಿ ಸೆಕ್ಷನ್ 376 ಅನ್ನು ಸೇರ್ಪಡೆಗೊಳಿಸುವ ಮೂಲಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜ್ವಲ್ ರೇವಣ್ಣ ಹಲವು ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ಸಿಆರ್ಪಿಸಿ 164 ಅಡಿಯಲ್ಲಿ ಹೇಳಿಕೆ ದಾಖಲಿಸಲಾಗಿದೆ. ಐಪಿಸಿ 376(2) ಎನ್, 506, 354 ಎ1, 354ಬಿ, 354ಸಿ ಹಾಗೂ ಐಟಿ ಕಾಯ್ದೆ ಅಡಿ ಎಫ್ಐಆರ್ ದಾಖಲಾಗಿದೆ. ಸಂತ್ರಸ್ತೆಯ ಮಾಹಿತಿಯನ್ನು ಗೌಪ್ಯವಾಗಿರಿಸಲಾಗಿದೆ.