ಅಮೆರಿಕದಿಂದ 2ನೇ ಹಂತದ ಗಡಿಪಾರು – ತಾಯ್ನಾಡಿಗೆ ಬಂದಿಳಿಯಲಿದ್ದಾರೆ 119 ಅಕ್ರಮ ಭಾರತೀಯ ವಲಸಿಗರು

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಮೇಲೆ ಕಠಿಣ ವಲಸೆ ನೀತಿ ಜಾರಿಯಾಗಿದೆ. ಇದರ ಬೆನ್ನಲ್ಲೇ ಅಕ್ರಮ ವಲಸಿಗರ ಗಡಿಪಾರು ಪ್ರಕ್ರಿಯೆ ಕೂಡ ಶುರುವಾಗಿದ್ದು, ಈಗಾಗಲೇ ಟ್ರಂಪ್ ಆಡಳಿತ ಸಾವಿರಾರು ಜನರನ್ನು ದೇಶದಿಂದ ಹೊರಹಾಕಿದೆ. ಇದೀಗ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರು ಭಾರತೀಯರಿಗೂ ಸಂಕಷ್ಟ ಶುರುವಾಗಿದ್ದು, ಇದೀಗ ಗಡಿಪಾರು ಪ್ರಕ್ರಿಯೆಯನ್ನು ಅಮೆರಿಕಾ ಆರಂಭಿಸಿದೆ. ಮೊದಲ ಹಂತದಲ್ಲಿ 205 ಮಂದಿ ಭಾರತೀಯರನ್ನು ಗಡಿಪಾರು ಮಾಡಲಾಗಿದ್ದ ಟ್ರಂಪ್ ಸರ್ಕಾರ ಇದೀಗ 2ನೇ ಹಂತದ ಗಡಿಪಾರು ಪ್ರಕ್ರಿಯೆ ಆರಂಭವಾಗಿದೆ. 119 ಮಂದಿ ಅಕ್ರಮ ವಲಸಿಗರನ್ನು ಹೊತ್ತಿರುವ ಅಮೆರಿಕದ ವಿಮಾನ ಶನಿವಾರ ಪಂಜಾಬ್‌ನ ಅಮೃತಸರಕ್ಕೆ ಬಂದಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: WPL ನಲ್ಲಿ RCB ಹಾವಳಿ – ಇತಿಹಾಸ ನಿರ್ಮಿಸಿದ ಬೆಂಗಳೂರು ಹುಡುಗಿಯರು
ಈಗ ಬರುತ್ತಿರುವ ಅಕ್ರಮ ವಲಸಿಗರ ಪೈಕಿ 67 ಮಂದಿ ಪಂಜಾಬ್‌ನವರೇ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿರುವಾಗಲೇ ಗಡಿಪಾರು ಪ್ರಕ್ರಿಯೆಯನ್ನು ಮುಂದುವರಿಸಿದೆ. ಇತ್ತೀಚೆಗಷ್ಟೇ 104 ಮಂದಿ ಭಾರತೀಯ ಅಕ್ರಮ ವಲಸಿಗರನ್ನು ಅಮೆರಿಕದಿಂದ ಭಾರತಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಜನರ ಕೈಗೆ ಕೋಳಗಳನ್ನು ತೊಡಿಸಿ ಕರೆತಂದಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಗಡಿಪಾರು ಪ್ರಕ್ರಿಯೆ ನಡೆಯುತ್ತಿದ್ದು ಫೆ.16ರಂದು 3ನೇ ತಂಡ ಭಾರತಕ್ಕೆ ಬಂದಿಳಿಯುವ ಸಾಧ್ಯತೆಗಳಿವೆ.
ಗಡಿಪಾರು ವಿಚಾರವಾಗಿ, ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ಕಾನೂನುಬಾಹಿರವಾಗಿ ವಾಸಿಸುವ ಭಾರತೀಯ ಪ್ರಜೆಗಳ ಕಾನೂನುಬದ್ಧ ಮರಳುವಿಕೆಗೆ ಭಾರತ ಮುಕ್ತವಾಗಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಈ ಹಿಂದೆ ಸ್ಪಷ್ಟಪಡಿಸಿದ್ದರು.