ಮತ್ತೊಂದು ಸಾಧನೆ ಮಾಡಿದ ಚಂದ್ರಯಾನ -3 – ಚಂದ್ರನ ಮೇಲೆ ಮತ್ತೊಮ್ಮೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಕ್ರಮ್!
ಬೆಂಗಳೂರು: ಚಂದ್ರಯಾನ -3 ಮಿಷನ್ ಮತ್ತೊಂದು ಐತಿಹಾಸಿಕ ಸಾಧನೆಯೊಂದನ್ನು ಮಾಡಿದೆ. ಚಂದ್ರನ ಅಂಗಳದಲ್ಲಿರುವ ವಿಕ್ರಮ್ ಲ್ಯಾಂಡರ್ ತನ್ನ ಲ್ಯಾಂಡಿಂಗ್ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜಿಗಿದಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ರೋ, ತನ್ನ ಯೋಜನೆಯ ಉದ್ದೇಶಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿದೆ. ಭಾನುವಾರ ನಡೆದ ಚಂದ್ರಯಾನ-3 ಲ್ಯಾಂಡರ್ ಹೋಪ್ (ಭರವಸೆ) ಪ್ರಯೋಗ ಯಶಸ್ವಿಯಾಗಿದೆ. ಆಜ್ಞೆಯ ಮೇರೆಗೆ ವಿಕ್ರಮ್ ಲ್ಯಾಂಡರ್ ತನ್ನ ಎಂಜಿನ್‌ಗಳನ್ನು ಹಾರಿಸಿತು. ನಿರೀಕ್ಷೆಯಂತೆ ಸುಮಾರು 40 ಸೆಂ.ಮೀ ಎತ್ತರಕ್ಕೆ ಹಾರಿ, 30 – 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಇಸ್ರೋ ಮಾಹಿತಿ ನೀಡಿದೆ.
ಇದನ್ನೂ ಓದಿ: ಚಂದ್ರಯಾನ-3 ಉಡಾವಣೆ ವೇಳೆ ಕೌಂಟ್ಡೌನ್ ಗೆ ಧ್ವನಿ ನೀಡಿದ್ದ ಇಸ್ರೋ ವಿಜ್ಞಾನಿ ಇನ್ನಿಲ್ಲ!
ಭವಿಷ್ಯದಲ್ಲಿ ಯೋಜನೆಯ ಉದ್ದೇಶ ಮುಗಿದ ಬಳಿಕ ಲ್ಯಾಂಡರ್‌ಗಳನ್ನು ವಾಪಸ್ ಭೂಮಿಗೆ ತರುವ ಹಾಗೂ ಮಾನವ ಸಹಿತ ಯೋಜನೆಗಳನ್ನು ಉತ್ತೇಜಿಸುವುದು ಈ ಪ್ರಯೋಗದ ಪ್ರಮುಖ ಉದ್ದೇಶವಾಗಿದೆ. ವಿಕ್ರಮ್ ಲ್ಯಾಂಡರ್‌ನ ಎಲ್ಲ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯಕರವಾಗಿವೆ. ನಿಯೋಜಿತ ರಾಂಪ್, ChaSTE ಮತ್ತು ILSA ಗಳನ್ನು ಮಡಚಲಾಗಿತ್ತು. ಪ್ರಯೋಗದ ನಂತರ ಅವುಗಳನ್ನು ಯಶಸ್ವಿಯಾಗಿ ಮರುನಿಯೋಜಿಸಲಾಗಿದೆ ಎಂದು ಇಸ್ರೋ ಹೇಳಿದೆ.