ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ – ಸವಾರರಿಗೆ ಆತಂಕ ಹೆಚ್ಚಿದ್ದೇಕೆ..?

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ – ಸವಾರರಿಗೆ ಆತಂಕ ಹೆಚ್ಚಿದ್ದೇಕೆ..?

ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಆಗಿದ್ದೇ ಆಗಿದ್ದು. ಒಂದಿಲ್ಲೊಂದು ವಿವಾದಗಳು ಹುಟ್ಟಿಕೊಳ್ಳುತ್ತಲೇ ಇವೆ. ಮುಗಿಯದ ಕಾಮಗಾರಿ, ಹೆಚ್ಚು ಟೋಲ್ ಸಂಗ್ರಹ, ಕಿತ್ತು ಬಂದ ರಸ್ತೆ, ಸ್ಕೈವಾಕ್ ಇಲ್ಲ ಅಂತಾ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ವೇಯಲ್ಲಿ ಅಪಘಾತ ಪ್ರಕರಣಗಳು ಸಹ ಮುಂದುವರಿದಿವೆ.

ರಾಮನಗರ ತಾಲೂಕಿನ ಬಸವನಪುರ ಬಳಿ ಮೇಲ್ಸೇತುವೆಯ ತಡೆಗೋಡೆಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಲಾರಿ ಹಾಗೂ ಕಾರು ಚಾಲಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭಿವಿಸಿದ ನಂತರ ಲಾರಿ ಮೇಲ್ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಡಿಕ್ಕಿ ರಭಸಕ್ಕೆ ಲಾರಿ ಹಿಂಭಾಗ ಕಾರಿನ‌ ಮೇಲೆ ಬಿದ್ದಿದ್ದು, ಲಾರಿಯ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಲಾರಿ ಹಾಗೂ ಕಾರಿನ ಚಾಲಕರು ಬಚಾವಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ರಾಮನಗರ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಸರ್ವಿಸ್ ರಸ್ತೆ ಇಲ್ಲದೇ ಟೋಲ್ ಸಂಗ್ರಹಕ್ಕೆ ವಿರೋಧ – ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ನಿಖಿಲ್ ಪ್ರತಿಭಟನೆ!

ಎಕ್ಸ್​ಪ್ರೆಸ್ ವೇನಲ್ಲಿ ಸವಾರರು ಅತೀ ವೇಗವಾಗಿ ಚಾಲನೆ ಮಾಡುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವೇಗ ಮಿತಿಯ ಸೂಚನಾ ಫಲಕವಿಲ್ಲದ ಪರಿಣಾಮ ವಾಹನ ಸವಾರರು ವೇಗವಾಗಿ ಚಾಲನೆ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಪ್ರಧಾನಿ ಮೋದಿ ಅವರ ಕೈಯಿಂದ ಅದ್ಧೂರಿಯಾಗಿ ಹೈವೇ ಉದ್ಘಾಟಿಸಿದ ದಿನವೇ ಮದ್ದೂರು ಬಳಿ ಅಪಘಾತ ಸಂಭವಿಸಿತ್ತು. ಕಾಮಗಾರಿ ಆರಂಭಗೊಂಡ ನಂತರದಿಂದ ಇಂದಿನವರೆಗೆ ನೂರಾರು ಅಪಘಾತ ಪ್ರಕರಣಗಳು ಸಂಭವಿಸಿದ್ದು, ಹತ್ತಾರು ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಮತ್ತೆ ಹಲವರು ಗಾಯಗೊಂಡಿದ್ದಾರೆ. ಗಂಟೆಗೆ 100 ರಿಂದ 120 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಚಲಿಸುವಂತೆ ಎಕ್ಸ್‌ಪ್ರೆಸ್‌ವೇ ವಿನ್ಯಾಸಗೊಳಿಸಲಾಗಿದ್ದರೂ ಅಪಘಾತ ತಡೆಗೆ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಸರಿಯಾಗಿ ಅಳವಡಿಸದೇ ಇರುವುದು ಅಪಘಾತ, ಸಾವು-ನೋವುಗಳಿಗೆ ಕಾರಣವಾಗಿದೆ. ಕಳೆದ 6 ತಿಂಗಳಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 335ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 84ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಬೆಂಗಳೂರಿನಿಂದ ಮೈಸೂರಿನವರೆಗೂ ಸುಮಾರು 130 ಕಿಲೋ ಮೀಟರ್ ದೂರದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆಯನ್ನ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಶೇ 80ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಬೆಂಗಳೂರಿನಿಂದ ಮಂಡ್ಯದವರೆಗೂ ಕಾಮಗಾರಿ ಪೂರ್ಣಗೊಂಡಿದ್ದು, ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದೆ.

suddiyaana