ಜುಲೈ 1 ರಿಂದ ಅನ್ನಭಾಗ್ಯ ಜಾರಿ – ಅಕ್ಕಿ ಜೊತೆ ಖಾತೆಗೆ ಜಮೆಯಾಗುತ್ತೆ ಹಣ
ಬೆಂಗಳೂರು: ಕಾಂಗ್ರೆಸ್ ಘೋಷಿಸಿರುವ ಐದು ಗ್ಯಾರಂಟಿಗಳ ಪೈಕಿ ಅನ್ನಭಾಗ್ಯ ಯೋಜನೆ ಜಾರಿಗೆ ಸಾಕಷ್ಟು ಗೊಂದಲ ಉಂಟಾಗಿತ್ತು. ಇದೀಗ ಕಡೆಗೂ ಈ ಯೋಜನೆ ಜು. 1 ರಂದು ಜಾರಿಯಾಗಲಿದೆ. ಶನಿವಾರದಿಂದಲೇ ಬಿಪಿಎಲ್ ಪಡಿತರದಾರರಿಗೆ ರಾಜ್ಯ ಸರ್ಕಾರದ 5 ಕೆಜಿ ಅಕ್ಕಿ ಜೊತೆಗೆ 5 ಕೆಜಿ ಅಕ್ಕಿಯ ಹಣ ನೀಡಲಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದ 5 ಕೆಜಿ ಅಕ್ಕಿ ವಿತರಣೆ ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಸದ್ಯಕ್ಕೆ ಕುಟುಂಬದ ಪ್ರತಿ ವ್ಯಕ್ತಿಗೆ 170 (ಪ್ರತಿ ಕೆ.ಜಿಗೆ 34 ರೂಪಾಯಿಗಳಂತೆ) ನೀಡುತ್ತೇವೆ. 90 ಪರ್ಸೆಂಟ್ ಫಲಾನುಭವಿಗಳಲ್ಲಿ ಖಾತೆಗಳಿವೆ. ಅಕೌಂಟ್ ಇಲ್ಲದವರು ಮಾಡಿಸಿಕೊಳ್ಳಬೇಕು. ಒಬ್ಬರಿಗೆ 170 ರೂಪಾಯಿ ಕೊಡುತ್ತೇವೆ. ಅಕ್ಕಿ ಸಿಗುವರೆಗೆ ಮಾತ್ರ ಈ ಹಣ ನೀಡುವ ವ್ಯವಸ್ಥೆಯಿರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯ 225 ವಾರ್ಡ್ಗಳಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭ – ವೈದ್ಯರ ಕೊರತೆಗೂ ಪರಿಹಾರ ಹುಡುಕಿದ ಬಿಬಿಎಂಪಿ
ಕೇಂದ್ರ ಸರ್ಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ಟರೆ ನಾವು ಅಕ್ಕಿ ಹಂಚಿಕೆ ಮಾಡುತ್ತೇವೆ. ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇದೆ. ಇಲ್ಲವೆ ಟೆಂಡರ್ ಕರೆದು ಅಕ್ಕಿ ಖರೀದಿ ಮಾಡುತ್ತೇವೆ. ಹಣ ರೆಡಿ ಇದೆ, ಅಕೌಂಟ್ ಗೆ ವರ್ಗಾವಣೆ ಆಗುತ್ತದೆ. ನಾಳೆಯಿಂದಲೇ ಖಾತೆಗೆ ಹಣ ಹಾಕುತ್ತೇವೆ. ಅನ್ನಭಾಗ್ಯ ಯೋಜನೆ ಜಾರಿಗೆಗೆ ಸಮಾವೇಶ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಅಕ್ಕಿ ಕೊಡಲು ನಾವು ಸಿದ್ದವಾಗಿದ್ದೇವೆ ಆದರೆ ಕೇಂದ್ರ ಸರ್ಕಾರ ಹೆಚ್ಚಿನ ಅಕ್ಕಿ ನೀಡಲು ಸಹಕಾರ ನೀಡಿಲ್ಲ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಅಕ್ಕಿಯನ್ನು ಮೂರೂ ಹೊತ್ತು ಜನರು ಸೇವಿಸುವುದಿಲ್ಲ. ಎಂಎಸ್ ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುತ್ತೇವೆ. ದಕ್ಷಿಣ ಭಾಗದ ಜನರಿಗೆ ರಾಗಿ ನೀಡುತ್ತೇವೆ. ಉತ್ತರ ಕರ್ನಾಟಕ ಜನರಿಗೆ ಜೋಳ ಕೊಡುತ್ತೇವೆ. ರಾಗಿ ದಾಸ್ತಾನು ಇದೆ, ಜೋಳ ದಾಸ್ತಾನು ಇಲ್ಲ. ದಾಸ್ತಾನು ಆದ ಬಳಿಕ ಧಾನ್ಯಗಳ ಹಂಚಿಕೆ ಮಾಡುತ್ತೇವೆ. ಎಂಎಸ್ ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ, ಜೋಳ ಅಥವಾ ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುತ್ತೇವೆ. ಮಾತು ಕೊಟ್ಟಂತೆ ನಾಳೆಯಿಂದ ಜಾರಿ ಖಂಡಿತ ಎಂದರು.
ರಾಜ್ಯದಲ್ಲಿ ಒಟ್ಟು 1 ಕೋಟಿ 28 ಲಕ್ಷ ಬಿಪಿಎಲ್, ಅಂತ್ಯೋದಯ ಕಾರ್ಡ್ದಾರರು ಇದ್ದು, 4 ಕೋಟಿ 42 ಲಕ್ಷ ಫಲಾನುಭವಿಗಳಿದ್ದಾರೆ. 1 ಕೋಟಿ 28 ಲಕ್ಷ ಕಾರ್ಡ್ ಗಳ ಪೈಕಿ 99.99% ಆಧಾರ್ ಸೀಡಿಂಗ್ ಆಗಿದೆ. ಇನ್ನು 1.22 ಕಾರ್ಡ್ದಾರರ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ. ಇನ್ನುಳಿದ ಬಾಕಿ ಉಳಿದಿರುವ 6 ಲಕ್ಷ ಕಾರ್ಡ್ಗಳು ಆಧಾರ್ ಲಿಂಕ್ ಆಗಬೇಕು. ಆಧಾರ್ ಲಿಂಕ್ ಆಗುತ್ತಿದ್ದಂತೆಯೇ ಬ್ಯಾಂಕ್ ಅಕೌಂಟ್ ಕೂಡ ಕಾರ್ಡ್ ಗಳಿಗೆ ಅಪ್ಡೇಟ್ ಆಗುತ್ತದೆ. ಹೀಗಾಗಿ ಗೊಂದಲಕ್ಕೆ ಅವಕಾಶವಿಲ್ಲ ಎಂದು ಸಚಿವರು ಹೇಳಿದರು.