ಮೆಣಸಿನಕಾಯಿ ದರ ಭಾರಿ ಇಳಿಕೆ – APMCಗೆ ಬೆಂಕಿ ಇಟ್ಟ ಕಿಡಿಗೇಡಿಗಳು, 47 ಮಂದಿ ಪೊಲೀಸ್ ವಶಕ್ಕೆ!
ಮೆಣಸಿನಕಾಯಿ ದರದಲ್ಲಿ ಭಾರಿ ಇಳಿಕೆ ಕಂಡಿದೆ. ಇದರಿಂದಾಗಿ ಆಕ್ರೋಶಗೊಂಡ ಕೆಲ ರೈತರು ಸೋಮವಾರ ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಎಪಿಎಂಸಿ ಮಾರುಕಟ್ಟೆಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪೊಲೀಸ ಮಧ್ಯೆ ಹಾಗೂ ರೈತರ ಮಧ್ಯೆ ಭಾರಿ ಹೈಡ್ರಾಮ ನಡೆದಿದೆ.
ಇದನ್ನೂ ಓದಿ: ರಾಜ್ಯ ರಾಜಧಾನಿಯಲ್ಲಿ ನೀರಿನ ಸಮಸ್ಯೆ – ವರ್ಕ್ ಫ್ರಂ ಹೋಮ್, ಆನ್ಲೈನ್ ತರಗತಿಗಳಿಗೆ ಫುಲ್ ಡಿಮ್ಯಾಂಡ್
ಮೆಣಸಿನಕಾಯಿ ಬೆಲೆ ಕುಸಿತದಿಂದ ರೊಚ್ಚಿಗೆದ್ದ ಕೆಲ ಜನರು ಮಾರುಕಟ್ಟೆಗೆ ಬೆಂಕಿಯಿಟ್ಟು ಪುಂಡಾಟ ಮೆರೆದಿದ್ದರು. ಇದರ ಪರಿಣಾಮ 6 ಕಾರು, 3 ಬೈಕ್, 1 ಅಗ್ನಿಶಾಮಕ ವಾಹನ, ಹಾಗೂ ಆಡಳಿತ ಕಚೇರಿ ಸುಟ್ಟು ಭಸ್ಮವಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡಿದ 47 ಕೀಡಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಬೆಂಕಿ ಇಟ್ಟಿದ್ದಕ್ಕೆ ಸ್ಥಳೀಯರು ಹಾಗೂ ವರ್ತಕರು ಬೇಸರ ಹೊರಹಾಕಿದ್ದಾರೆ. ಸೋಮವಾರ ಮಾರುಕಟ್ಟೆಗೆ ಬಂದ ಮೆಣಸಿನಕಾಯಿ ಸರಿಯಿಲ್ಲ. ಮೆಣಸಿನಕಾಯಿಗೆ ನೀರು ಹಾಕಿಕೊಂಡು ಬಂದಿದ್ದಾರೆ. ಅಂತ ಮಾಲ್ಗೆ ರೇಟ್ ಕೊಡು ಅಂದ್ರೆ ಎಲ್ಲಿಂದ ಕೊಡಬೇಕು? ನಿನ್ನೆಯ ಘಟನೆಯಲ್ಲಿ ಸ್ಥಳೀಯ ರೈತರು ಯಾರು ಇಲ್ಲ ಅಂತ ವರ್ತಕರು ಹೇಳಿದ್ದಾರೆ. ನಮಗೆ ಅನ್ನ ಹಾಕಿದ ಸ್ಥಳಕ್ಕೆ ಬೆಂಕಿ ಇಟ್ಟಿದ್ದಾರೆ. ಇನ್ನು ಒಂದು ತಿಂಗಳು ಮಾರ್ಕೆಟ್ ಬಂದ್ ಇರಲಿದೆ ಎಂದು ವರ್ತಕರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬ್ಯಾಡಗಿಗೆ ಬರುವ ಮಾರ್ಗದಲ್ಲಿ ಪೊಲೀಸರು, ಮೆಣಸಿನ ಕಾಯಿ ತುಂಬಿದ ಲಾರಿಗಳು, ವಾಹನಗಳನ್ನ ತಪಾಸಣೆ ಮಾಡಿದ್ದಾರೆ. ಈ ವೇಳೆ ಟಾಟಾ ಏಸ್ ಚಾಲಕನಿಗೆ ರೈತರು ಕಲ್ಲಿನಿಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.