ಅಂಗಾರ ರಾಜಕೀಯ ನಿವೃತ್ತಿ.. ರಘುಪತಿ ಭಟ್ ಕಣ್ಣೀರು – ಬಿಜೆಪಿ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಭಿನ್ನಮತ!
ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಘೋಷಣೆ ಮಾಡಿರುವ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್ ಮಿಸ್ ಆಗಿರುವ ಆಕಾಂಕ್ಷಿಗಳು ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಾಜೀನಾಮೆ ಜೊತೆ ಜೊತೆಗೆ ಪಕ್ಷಾಂತರ ಪರ್ವ ಶುರುವಾಗಿದೆ. ಹಾಗೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ಕೂಡ ನಡೆಸಿದ್ದಾರೆ.
ಸುಳ್ಯ ಕ್ಷೇತ್ರದ ಹಾಲಿ ಶಾಸಕ, ಸಚಿವ ಆಗಿರುವ ಎಸ್.ಅಂಗಾರಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ಭಾಗೀರಥಿ ಮುರುಳ್ಯ ಅನ್ನೋರಿಗೆ ಬಿಜೆಪಿ ಮಣೆ ಹಾಕಿದೆ. ಇದ್ರಿಂದ ಸಿಟ್ಟಲ್ಲಿರುವ ಅಂಗಾರ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಟಿಕೆಟ್ ಕೊಡದೇ ಇರೋದಕ್ಕೆ ನನಗೆ ಬೇಜಾರಿಲ್ಲ. ಆದ್ರೆ ಪ್ರಾಮಾಣಿಕ ರಾಜಕಾರಣಕ್ಕೆ ಈಗ ಬೆಲೆ ಇಲ್ಲದಂತಾಗಿದೆ.. ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ನಾನು ಇನ್ನು ಮುಂದೆ ರಾಜಕಾರಣದಲ್ಲಿ ಇರಲ್ಲ, ಚುನಾವಣಾ ಪ್ರಚಾರವನ್ನೂ ಮಾಡಲ್ಲ. ಹೊಸ ಅಭ್ಯರ್ಥಿ ಮತ್ತು ಅವರ ಗೆಲುವನ್ನ ಪಕ್ಷವೇ ನೋಡಿಕೊಳ್ಳಲಿ ಎಂದಿದ್ದಾರೆ.
ಇತ್ತ ಉಡುಪಿ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದಕ್ಕೆ ಹಾಲಿ ಶಾಸಕ ರಘುಪತಿ ಭಟ್ ಕಣ್ಣೀರಿಟ್ಟಿದ್ದಾರೆ. ನನ್ನನ್ನು ಪಕ್ಷ ನಡೆಸಿಕೊಂಡ ರೀತಿಗೆ ಶಾಕ್ನಲ್ಲಿದ್ದೇನೆ. ಕನಿಷ್ಠ ಜಿಲ್ಲಾ ಮಟ್ಟದ ನಾಯಕರು ಕೂಡ ಕರೆ ಮಾಡಿ ಮಾತಾಡಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ. ಟಿಕೆಟ್ ಪಡೆದ ಯಶ್ಪಾಲ್ ಸುವರ್ಣ ನಾನು ಬೆಳೆಸಿದ ಹುಡುಗ. ಪಕ್ಷದ ಪ್ರಚಾರಕ್ಕೆ ನನ್ನ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ಮುಂದಿನ ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳುತ್ತಲೇ ಭಾವುಕರಾಗಿದ್ದಾರೆ.