ದಿನೇ ದಿನೆ ಹೆಚ್ಚಾಗುತ್ತಿದೆ ಬಿಸಿಲಿನ ತಾಪ – ಅಂಗನವಾಡಿ ಕೇಂದ್ರಗಳ ಸಮಯ ಬದಲಾವಣೆ!
ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚಾಗುತ್ತಲೇ ಇದೆ. ರಣ ರಣ ಬಿಸಿಲು ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀಳುತ್ತಿದೆ. ರಾಜ್ಯದಲ್ಲಿ ನಿತ್ಯ ನೂರಾರು ಮಂದಿ ಆನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಬಿಸಿಲಿನ ಝಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳ ಸಮಯ ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ: ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಕಮಲ ಅರಳಿಸುತ್ತಾರಾ ಮೋದಿ?
ಹೌದು, ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈವರೆಗೆ ಕಲ್ಯಾಣ ಕರ್ನಾಟಕ ಭಾಗದ ಅಂಗನವಾಡಿ ಕೇಂದ್ರಗಳ ಸಮಯ ಬದಲಾವಣೆ ಮಾಡಲಾಗಿತ್ತು. ಆದ್ರೆ ಇದೀಗ ಎಲ್ಲ ಜಿಲ್ಲೆಗಳ ಅಂಗನವಾಡಿ ಕೇಂದ್ರಗಳ ಕಾರ್ಯನಿರ್ವಹಣಾ ಸಮಯ ಬದಲಾವಣೆಯನ್ನು ವಿಸ್ತರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಂಗನವಾಡಿ ಕೇಂದ್ರಗಳ ಕಾರ್ಯ ನಿರ್ವಹಣಾ ಸಮಯವನ್ನು ಈ ಮೊದಲು ಬೆಳಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೂ ನಿಗದಿಪಡಿಸಲಾಗಿತ್ತು. ಬಿಸಿಲು ಹೆಚ್ಚಾಗಿರುವುದರಿಂದ ಉಳಿದ ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂಬ ಮನವಿ ಹಿನ್ನೆಲೆಯಲ್ಲಿ ಏ.15 ರಿಂದ ಮೇ 10 ರವರೆಗೂ ರಾಜ್ಯಾದ್ಯಂತ ವಿಸ್ತರಿಸಲಾಗಿದೆ.
ಅಂಗನವಾಡಿ ಸಿಬ್ಬಂದಿಗೆ ಮೇ 11 ರಿಂದ 26 ವರೆಗೂ ಬೇಸಿಗೆ ರಜೆ ನೀಡಲಾಗಿದೆ. ಮೇ 27 ರಿಂದ ಅಂಗನವಾಡಿಗಳು ಎಂದಿನಂತೆ ಬೆಳಗ್ಗೆ 9.30 ರಿಂದ ಸಂಜೆ 4 ಗಂಟೆಯವರೆಗೂ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.