ಆರ್‌ಸಿಬಿ ತಂಡಕ್ಕೆ ಸಿಕ್ತು ಆನೆ ಬಲ – ಹೊಸ ಮುಖ್ಯ ಕೋಚ್ ಆಗಿ ಆ್ಯಂಡಿ ಫ್ಲವರ್ ನೇಮಕ

ಆರ್‌ಸಿಬಿ ತಂಡಕ್ಕೆ ಸಿಕ್ತು ಆನೆ ಬಲ – ಹೊಸ ಮುಖ್ಯ ಕೋಚ್ ಆಗಿ ಆ್ಯಂಡಿ ಫ್ಲವರ್ ನೇಮಕ

ಆರ್‌ಸಿಬಿ ಅಂದರೆ ಸಾಕು.. ಪ್ರತಿ ಬಾರಿ ಕಪ್ ನಮ್ದೇ ಅನ್ನೋ ಜೋಶ್.. ಸೋತರೂ ಅದೇ ಹುಮ್ಮಸ್ಸು.. ಗೆದ್ದರೇ ಅದೇ ಖುಷಿ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಹೊಸ ಯುಗ ಶುರುವಾಗಲಿದೆ. ಮಾಜಿ ಜಿಂಬಾಬ್ವೆ ಕ್ರಿಕೆಟಿಗ ಮತ್ತು ಇಂಗ್ಲೆಂಡ್‌ನ ಮಾಜಿ ಕೋಚ್ ಆ್ಯಂಡಿ ಫ್ಲವರ್ ಆರ್‌ಸಿಬಿ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ:ವಿಂಡೀಸ್ ಕಳಪೆ ಆತಿಥ್ಯದ ಬಗ್ಗೆ ಹಾರ್ದಿಕ್ ಪಾಂಡ್ಯ ಅಸಮಾಧಾನ – ಐಷಾರಾಮಿ ಬೇಡ, ಕನಿಷ್ಠ ಸೌಕರ್ಯವಾದರೂ ಕಲ್ಪಿಸಿ ಎಂದು ಗುಡುಗು

ಇದುವರೆಗೆ ಐಪಿಎಲ್ ಗೆಲ್ಲುವಲ್ಲಿ ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಸೀಸನ್‌ಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಅದಕ್ಕೆ ಮೊದಲ ಹೆಜ್ಜೆಯಾಗಿ ತಮ್ಮ ಕೋಚಿಂಗ್ ಸಿಬ್ಬಂದಿಯಲ್ಲಿ ಭಾರಿ ಬದಲಾವಣೆ ಮಾಡಿದೆ. ಮಾಜಿ ಜಿಂಬಾಬ್ವೆ ಕ್ರಿಕೆಟಿಗ ಮತ್ತು ಇಂಗ್ಲೆಂಡ್‌ನ ಮಾಜಿ ಕೋಚ್ ಆ್ಯಂಡಿ ಫ್ಲವರ್ ಅವರನ್ನು ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ. ಇದರೊಂದಿಗೆ ಆರ್‌ಸಿಬಿ ತಂಡದ ನಿರ್ದೇಶಕ ಮೈಕ್ ಹೆಸನ್ ಮತ್ತು ಮುಖ್ಯ ಕೋಚ್ ಸಂಜಯ್ ಬಂಗಾರ್ ಅವರ ಅಧಿಕಾರಾವಧಿಯನ್ನು ವಿಸ್ತರಿಸದಿರಲು ಫ್ರಾಂಚೈಸ್ ನಿರ್ಧರಿಸಿದ್ದು, ಇಬ್ಬರಿಗೂ ಧನ್ಯವಾದಗಳನ್ನು ತಿಳಿಸಿದೆ. ಫ್ರಾಂಚೈಸ್ ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದೆ.

ಆರ್‌ಸಿಬಿಗೆ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಆ್ಯಂಡಿ ಫ್ಲವರ್ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಬೆಂಗಳೂರಿಗಿಂತ ಮೊದಲು ಫ್ಲವರ್ ಲಕ್ನೋ ಸೂಪರ್ಜೈಂಟ್ಸ್ ತಂಡದ ಜೊತೆ ಕೆಲಸ ಮಾಡಿದ್ದಾರೆ. ಲಕ್ನೋ ತಂಡ ಐಪಿಎಲ್‌ನಲ್ಲಿ ಆಡಲು ಪ್ರಾರಂಭಿಸಿ ಕೇವಲ ಎರಡು ವರ್ಷಗಳಾಗಿವೆ. ಆದರೆ ಈ ತಂಡವನ್ನು ಬಲಿಷ್ಠಗೊಳಿಸುವಲ್ಲಿ ಫ್ಲವರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಫ್ಲವರ್ ಅಡಿಯಲ್ಲಿ, ಲಕ್ನೋ ಸತತ ಎರಡೂ ವರ್ಷಗಳಲ್ಲಿ (2022 ಮತ್ತು 2023) ಪ್ಲೇಆಫ್‌ಗೆ ಪ್ರವೇಶಿಸಿತು. ಲಕ್ನೋ ತಂಡಕ್ಕೆ ಸೇರುವ ಮೊದಲು ಫ್ಲವರ್ ಪಂಜಾಬ್ ಕಿಂಗ್ಸ್ ತಂಡದಲ್ಲೂ ಕೆಲಸ ಮಾಡಿದ್ದಾರೆ.

ಇನ್ನು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವು ಮೂರು ಬಾರಿ ಐಪಿಎಲ್‌ನಲ್ಲಿ ಫೈನಲ್‌ಗೆ ತಲುಪಿದೆ. ಆದರೆ ಒಮ್ಮೆ ಕೂಡ ವಿಜೇತರಾಗಲು ಸಾಧ್ಯವಾಗಲಿಲ್ಲ. ಇದೀಗ ಆ್ಯಂಡಿ ಫ್ಲವರ್ ಆರ್‌ಸಿಬಿ ತಂಡದ ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸಿದ್ದು, ತಂಡದ ಪ್ರಶಸ್ತಿ ಬರವನ್ನು ಕೊನೆಗಾಣಿಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

suddiyaana